Homeಇದೀಗ ಬಂದ ಸುದ್ದಿತೈಲದ ಮೇಲಿನ ತೆರಿಗೆ ಇಳಿಸುವಂತೆ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ಆಗ್ರಹ

ತೈಲದ ಮೇಲಿನ ತೆರಿಗೆ ಇಳಿಸುವಂತೆ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರ ಆಗ್ರಹ

Public urges state government to reduce tax on Fuel

ಬೆಂಗಳೂರು, ಮೇ 15- ಜಾಗತಿಕ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಡೀಸೆಲ್‌ ಮತ್ತು ಪೆಟ್ರೋಲ್‌ ದರವನ್ನು ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳ ಮಾಡಿದ್ದರೂ ರಾಜ್ಯಸರ್ಕಾರ ಮಾರಾಟ ತೆರಿಗೆಯನ್ನು(ಸೇಲ್ಸ್ ಟ್ಯಾಕ್ಸ್ ) ಕಡಿತ ಮಾಡಬೇಕು ಎಂಬ ಬೇಡಿಕೆ ಸಾರ್ವಜನಿಕರಿಂದ ಕೇಳಿಬಂದಿದೆ.

ಕೇವಲ ಕೇಂದ್ರ ಸರ್ಕಾರವನ್ನು ದೂಷಣೆ ಮಾಡುವುದರಲ್ಲಿ ಅರ್ಥವಿಲ್ಲ. ತೈಲ ಬಿಕ್ಕಟ್ಟು ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇರುವುದರಿಂದ ಜನರಿಗೆ ಪರಿಹಾರದಂತೆ ಸರ್ಕಾರ ವಿಧಿಸುವ ಮಾರಾಟ ತೆರಿಗೆಯನ್ನು ಕಡಿತ ಮಾಡಬೇಕೆಂಬ ಒತ್ತಾಯ ಹೆಚ್ಚಾಗಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌‍ಟಿ ವ್ಯಾಪ್ತಿಯಿಂದ ಹೊರಗಿಟ್ಟಿರುವುದರಿಂದ ರಾಜ್ಯಸರ್ಕಾರ ವಿಧಿಸುವ ಮಾರಾಟ ತೆರಿಗೆಯಿಂದ ಬೊಕ್ಕಸಕ್ಕೆ ಪ್ರತಿವರ್ಷ ಸಾವಿರಾರು ಕೋಟಿ ಹಣ ಸಂದಾಯವಾಗುತ್ತದೆ.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಸರ್ಕಾರ ಶ್ರೀಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕೆಂಬುದು ಸಾರ್ವಜನಿಕರ ಒತ್ತಾಸೆ.ಲೀಟರ್‌ಗೆ 2 ರೂ. ಕಡಿತ ಮಾಡಿದರೂ ಗ್ರಾಹಕರಿಗೆ ತಿಂಗಳಿಗೆ ನೂರಾರು ರೂಪಾಯಿ ಉಳಿತಾಯವಾಗುತ್ತದೆ. ಸರ್ಕಾರ ಕೇಂದ್ರವನ್ನು ಟೀಕಿಸುವ ಮೊದಲು ತೆರಿಗೆ ಮಾರಾಟವನ್ನು ಕಡಿತಗೊಳಿಸಿ ನಂತರ ಇದೇ ಬೇಡಿಕೆಯನ್ನು ಕೇಂದ್ರದ ಮುಂದೆ ಇಡಲಿ ಎಂಬುದು ಬಹುತೇಕರ ಆಗ್ರಹವಾಗಿದೆ.

ಅಂದಹಾಗೆ ದೇಶಾದ್ಯಂತ ತೈಲ ಬೆಲೆಯಲ್ಲಿ ಏರಿಕೆಯಾದರೂ, ಕರ್ನಾಟಕದಲ್ಲಿ ಬೆಲೆಯನ್ನು ಕಡಿಮೆ ಮಾಡುವ ಅವಕಾಶ ರಾಜ್ಯ ಸರ್ಕಾರಕ್ಕಿದೆ.

ಮಾರಾಟ ತೆರಿಗೆ ಎಷ್ಟು ? :
ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ, ವ್ಯಾಟ್‌ ಮತ್ತು ಸೇಲ್‌್ಸ ಟ್ಯಾಕ್‌್ಸ ವಿಧಿಸುತ್ತಿದೆ. ಪ್ರಸ್ತುತ, ಪೆಟ್ರೋಲ್‌ ಮೇಲೆ ಸುಮಾರು ಶೇ.29.84 ರಷ್ಟು ಮತ್ತು ಡೀಸೆಲ್‌ ಮೇಲೆ ಸುಮಾರು ಶೇ. 18.44ರಷ್ಟು ತೆರಿಗೆ ವಿಧಿಸುತ್ತಿದೆ.

2024 ರ ಜೂನ್‌ನಲ್ಲಿ ಕರ್ನಾಟಕ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಹೆಚ್ಚಿಸಿತ್ತು. ಅದರ ಪರಿಣಾಮವಾಗಿ ಲೀಟರ್‌ಗೆ ಸುಮಾರು 3 ರೂಪಾಯಿಯಷ್ಟು ಬೆಲೆ ಏರಿಕೆಯಾಗಿತ್ತು. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಈ ಸಮಯದಲ್ಲಿ ಸಿದ್ದರಾಮಯ್ಯನವರಿಗೆ ರಾಜ್ಯದ ಪಾಲಿನ ತೆರಿಗೆಯನ್ನು ಕಡಿಮೆ ಮಾಡುವ ಅವಕಾಶವಿದೆ.

ರಾಜ್ಯದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ತೈಲಬೆಲೆಯನ್ನು ಮೂರು ರೂ. ಹೆಚ್ಚಿಸಿದ್ದರಿಂದ, ರಾಜ್ಯ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯ ಬರುತ್ತದೆ. ಸದ್ಯ, ಜಾಗತಿಕ ಮಟ್ಟದಲ್ಲಿ ಹಾರ್ಮಜ್‌ ಜಲಸಂಧಿ ಮತ್ತು ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯಿಂದ ಕಚ್ಚಾ ತೈಲದ ಬೆಲೆ ಹೆಚ್ಚಾದಾಗ, ರಾಜ್ಯಗಳು ತೆರಿಗೆ ಕಡಿತ ಮಾಡಿದರೆ ಸಾರ್ವಜನಿಕರಿಗೆ ಹಾಗೂ ಸಾರಿಗೆ ಕ್ಷೇತ್ರಕ್ಕೆ ತಾತ್ಕಾಲಿಕ ನಿರಾಳತೆ ಸಿಗಬಹುದು ಎನ್ನುವುದು ಶ್ರೀಸಾಮಾನ್ಯರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಜೂನ್‌ 15, 2024ರಂದು ಸಿದ್ದರಾಮಯ್ಯ ಸರ್ಕಾರ ತೆರಿಗೆ ಪ್ರಮಾಣವನ್ನು ಶೇ. 25.92 ರಿಂದ ಶೇ.29.84ಕ್ಕೆ ಏರಿಕೆ ಮಾಡಿತ್ತು. ಇದರಿಂದ, ಗ್ರಾಹಕರಿಗೆ ಹೆಚ್ಚುವರಿ ಮೂರು ರೂಪಾಯಿ ಹೇರಿಕೆಯಾಗಿತ್ತು.

ಅದೇ ರೀತಿ, ಡೀಸೆಲ್‌ ಮೇಲೆ ಶೇ. 14.34 ರಿಂದ ಶೇ.18.44 ರಷ್ಟು ತೆರಿಗೆ ಹೆಚ್ಚಳವಾಗಿತ್ತು. ಇದರಿಂದ ಲೀಟರ್‌ ಒಂದಕ್ಕೆ 3.50 ರೂಪಾಯಿ ಏರಿಕೆಯಾಗಿತ್ತು. ಡೀಸೆಲ್‌ ಬೆಲೆಯಲ್ಲಿ ಏರಿಕೆ ಕಂಡರೆ ಇದರ ಎಫೆಕ್ಟ್‌ ಇತರ ಉತ್ಪನ್ನಗಳ ಮೇಲೂ ಇರುತ್ತದೆ. ಸಿದ್ದರಾಮಯ್ಯ ಸರ್ಕಾರದ ಈ ತೆರಿಗೆ ಹೆಚ್ಚಳದಿಂದ ವಾರ್ಷಿಕ ಸುಮಾರು 2,500 ಕೋಟಿ ಆದಾಯ ಬೊಕ್ಕಸಕ್ಕೆ ಬರುತ್ತಿದೆ.

ಅಂದು ಬೆಲೆ ಏರಿಕೆಯಾಗಿದ್ದ ಸಮಯದಲ್ಲಿ, ಮಹಾರಾಷ್ಟ್ರ, ಕೇರಳ ಮತ್ತು ಆಂಧ್ರ ಪ್ರದೇಶ ಮುಂತಾದ ರಾಜ್ಯಗಳಿಗಿಂತ ನಮಲ್ಲೇ ಕಡಿಮೆ ಎಂದು ಸಿದ್ದರಾಮಯ್ಯ ಸರ್ಕಾರದ ಸಚಿವರು, ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದರು. ಸದ್ಯದ ತೈಲ ಬಿಕ್ಕಟ್ಟಿನಲ್ಲಿ ಕೇಂದ್ರ ಸರ್ಕಾರ ಮೂರು ರೂಪಾಯಿ ಬೆಲೆ ಏರಿಕೆ ಮಾಡಿರುವ ಸಮಯದಲ್ಲೇ, ಸಿದ್ದರಾಮಯ್ಯನವರ ಸರ್ಕಾರ, ಎರಡು ವರ್ಷದ ಹಿಂದೆ ಹೆಚ್ಚಿಸಿರುವ ತೆರಿಗೆಯ ಬಗ್ಗೆ ಚರ್ಚೆ ನಡೆಯುತ್ತಿದೆ.

ತೈಲ ಬೆಲೆಯಲ್ಲಿ ಏರಿಕೆಯಾದರೂ, ಜೂನ್‌ 2024ರಲ್ಲಿ ನಿಗದಿ ಪಡಿಸಲಾಗಿರುವ ಮೂಲ ಮಾರಾಟ ತೆರಿಗೆಯ ರಚನೆಯಿಂದಾಗಿ, ಪೆಟ್ರೋಲಿಯಂ ಉತ್ಪನ್ನಗಳಿಂದ ರಾಜ್ಯ ಸರ್ಕಾರಕ್ಕೆ ಬರುವ ಆದಾಯದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ, ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎನ್ನುವ ಆರೋಪಗಳ ನಡುವೆ, ಸಿದ್ದರಾಮಯ್ಯನವರ ಸರ್ಕಾರ, ಎರಡು ವರ್ಷಗಳ ಹಿಂದೆ, ಏರಿಸಿರುವ ಮೂರು ರೂಪಾಯಿಯನ್ನು ಹಿಂದಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆಯಾ ಎನ್ನುವುದಿಲ್ಲಿ ಪ್ರಶ್ನೆಯಾಗಿದೆ.

RELATED ARTICLES

Latest News