ಬೆಂಗಳೂರು,ಮೇ 15- ದೂರುದಾರರಿಗೆ ಸರಿಯಾಗಿ ಸ್ಪಂದಿಸದ ಠಾಣಾ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗು ವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಥಣಿಸಂದ್ರದಲ್ಲಿನ ಉತ್ತರ ನಗರ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಹಮಿಕೊಂಡಿದ್ದ ಮಾಸಿಕ ಕವಾಯತುವಿನಲ್ಲಿ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಠಾಣೆ ಬಹಳ ಮುಖ್ಯ ಠಾಣೆಯಲ್ಲಿ ಸರಿಯಾಗಿ ಕೆಲಸ ಮಾಡಿದರೆ ಎಲ್ಲವೂ ಸರಿ ಇರುತ್ತದೆ ಎಂದು ಹೇಳಿದರು.
ಠಾಣೆಯಲ್ಲಿನ ಕೆಲಸದ ಬಗ್ಗೆ ಕೆಲವು ಲೋಪದೋಷಗಳು ಕೇಳಿಬರುತ್ತಿವೆ. ದೂರುದಾರರು ಮತ್ತು ಸಾರ್ವಜನಿಕರು ಠಾಣೆಗೆ ಹೋದಾಗ ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಆರೋಪಗಳು ಕೇಳಿಬಂದಿದೆ.
ಠಾಣಾಧಿಕಾರಿಗಳು ಅವರು ಗಳಿಗೆ ಸ್ಪಂದಿಸದಿದ್ದರೆ ಅವರು ಮೇಲಾಧಿ ಕಾರಿಗಳನ್ನು ಭೇಟಿ ಮಾಡುತ್ತಾರೆ. ಇದು ಆಗಬಾರದು.ಯಾರಾದರೂ ಮೇಲಾಧಿಕಾರಿಗಳನ್ನು ಭೇಟಿ ಮಾಡಿ ಠಾಣಾಧಿಕಾರಿಗಳ ಮೇಲೆ ಆರೋಪ ಮಾಡಿದರೆ ಸಂಬಂಧಪಟ್ಟ ಠಾಣಾಧಿಕಾರಿ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತಾರೆಂದು ಅವರು ಹೇಳಿದರು.
ಠಾಣಾ ಮಟ್ಟದಲ್ಲಿ ಸಭೆ ನಡೆಸಿ ಈ ಬಗ್ಗೆ ಸೂಚನೆ ನೀಡಲಾಗಿದೆ. ಈಗಾಗಲೇ ಡಿಸಿಪಿ ಮತ್ತು ಎಸಿಪಿಗಳು ಪ್ರತಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ತಿಳಿಸಿದ್ದೇನೆ ಎಂದು ಆಯುಕ್ತರು ತಿಳಿಸಿದರು.
ನಮ-112 ಉತ್ತಮವಾಗಿ ಕೆಲಸ ಮಾಡುತ್ತಿದೆ. ಅದರಿಂದ ನಗರದಲ್ಲಿ ಶೇ.8 ರಿಂದ 10 ರಷ್ಟು ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿವೆ. ಹಾಗಾಗಿ 112 ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಭಿನಂದಿಸುತ್ತೇನೆಂದು ಇದೇ ವೇಳೆ ತಿಳಿಸಿದರು.ನಮ-112 ಗೆ ಯಾವುದೇ ಸಂದರ್ಭದಲ್ಲಿ ಕರೆ ಬಂದರೂ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ಹೋಗಿ ಸ್ಪಂದಿಸುತ್ತಾರೆ. ಹಾಗಾಗಿ ಸಣ್ಣಪುಟ್ಟ ಘಟನೆಗಳೂ ಕಡಿಮೆಯಾಗಿವೆ ಎಂದು ಅವರು ಹೇಳಿದರು. ನಗರದಲ್ಲಿ ಐಪಿಎಲ್ 5 ಪಂದ್ಯಗಳು ಸುರಕ್ಷಿತವಾಗಿ ನಡೆದಿವೆ. ಇದಕ್ಕೆ ಸಾರ್ವಜನಿಕರಿಂದಲೂ ಪ್ರಶಂಸೆ ವ್ಯಕ್ತವಾಗಿವೆ.
ಇತ್ತೀಚೆಗೆ ಗೃಹ ಸಚಿವರು ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ವೇಳೆ ಈ ಬಗ್ಗೆ ಅವರು ಪ್ರಶಂಸಿಸಿದ್ದಾರೆ. ಬಂದೋಬಸ್ತ್‌ನಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೆಲಸ ಮಾಡಿದ ಎಲ್ಲರಿಗೂ ಮತ್ತೊಮೆ ಅಭಿನಂದಿಸುವುದಾಗಿ ಆಯುಕ್ತರು ತಿಳಿಸಿದರು.
ಪೊಲೀಸರಿಗಾಗಿ 10 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಿಸಲಾಗುತ್ತಿದೆ. ಈಗಾಗಲೇ ಅದಕ್ಕಾಗಿ ಭೂಮಿ ಪೂಜೆ ನಡೆದು ಕಾಮಗಾರಿ ಆರಂಭವಾಗಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಎಸಿಪಿ ಮತ್ತು ಇನ್ಸ್ ಪೆಕ್ಟರ್‌ಗಳು ಬಹಳಷ್ಟು ಸಂಖ್ಯೆಯಲ್ಲಿ ವರ್ಗಾವಣೆಯಾಗಿ ನಗರಕ್ಕೆ ಬಂದಿದ್ದಾರೆ. ಅವರುಗಳಿಗೆ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಹಕಾರ ನೀಡುವ ಮೂಲಕ ಸ್ಪಂದಿಸಿ ನಗರಕ್ಕೆ ಒಳ್ಳೆಯ ಹೆಸರು ತರಬೇಕೆಂದು ಆಯುಕ್ತರು ಹೇಳಿದರು.
