ಬೆಂಗಳೂರು,ಫೆ.1-ಕಾನ್ಫೆಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ ಅವರು ಆತಹತ್ಯೆ ಮಾಡಿಕೊಂಡು 48 ಗಂಟೆ ಕಳೆದರೂ ಕಾರಣ ಮಾತ್ರ ಬಹಳಷ್ಟು ನಿಗೂಢವಾಗಿದೆ. ಈ ಪ್ರಕರಣದ ಗಂಭೀರತೆ ಅರಿತು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರು ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾದಳ (ಎಸ್‌ಐಟಿ) ರಚಿಸಿದ್ದಾರೆ.
ಈ ತನಿಖಾ ತಂಡದಲ್ಲಿ ಮೂವರು ಐಪಿಎಸ್ ಅಧಿಕಾರಿಗಳು ಇದ್ದಾರೆ. ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈಗಾಗಲೇ ತನಿಖಾ ತಂಡ ಐಟಿ ಅಧಿಕಾರಿಗಳು ಮತ್ತು ರಾಯ್ ಅವರ ಕಚೇರಿ ಸಿಬ್ಬಂದಿಗಳು ಹಾಗೂ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಪಡೆದುಕೊಂಡಿದ್ದಾರೆ.
ಇಷ್ಟೆಲ್ಲಾ ಮಾಹಿತಿ ಹಾಗೂ ತನಿಖೆ ನಡೆಸಿದರೂ ಸಹ ರಾಯ್ ಅವರ ಆತಹತ್ಯೆಗೆ ನಿಖರ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ಐಟಿ ಅವರ ಒತ್ತಡವಿತ್ತೇ ಅಥವಾ ಹಣಕಾಸಿನ ಮುಗ್ಗಟ್ಟಿತ್ತೇ, ಇಲ್ಲವೇ ಕೌಟುಂಬಿಕ ಸಮಸ್ಯೆಯೇ ಎಂಬಿತ್ಯಾದಿ ದೃಷ್ಟಿಕೋನಗಳಲ್ಲಿ ತನಿಖಾ ತಂಡ ಮಾಹಿತಿಗಳನ್ನು ಕಲೆಹಾಕುತ್ತಿದೆ.
ಬೌರಿಂಗ್ ಆಸ್ಪತ್ರೆಯಲ್ಲಿ ರಾಯ್ ಅವರ ಮರಣೋತ್ತರ ಪರೀಕ್ಷೆ ನಡೆದಿದೆ. ವೈದ್ಯರ ಪ್ರಾಥಮಿಕ ವರದಿ ಪ್ರಕಾರ ಅವರೇ ಗುಂಡು ಹಾರಿಸಿಕೊಂಡು ಆತಹತ್ಯೆ ಮಾಡಿಕೊಂಡಿರಬಹುದು ಎಂಬುವುದು ಗೊತ್ತಾಗಿದೆ.
ಅಂದು ಎಫ್‌ಎಸ್‌ಎಲ್ ತಂಡ ಸ್ಥಳ ಪರಿಶೀಲನೆ ನಡೆಸಿ ಸ್ಥಳದಲ್ಲಿ ಸಂಗ್ರಹಿಸಿದ್ದ ಕೆಲವು ವಸ್ತುಗಳನ್ನು ಪ್ರಯೋಗಾಲಯಕ್ಕೆ ಕೊಂಡೊಯ್ದಿದೆ ಅದರ ವರದಿಗಾಗಿ ಎಸ್‌ಐಟಿ ಕಾಯುತ್ತಿದೆ. ಒಟ್ಟಾರೆ ರಾಯ್ ಅವರ ಆತಹತ್ಯೆಗೆ ಕಾರಣ ನಿಗೂಢವಾಗಿದೆ.
ಕಳೆದ ಶುಕ್ರವಾರ ರಿಚಂಡ್ ಟೌನ್ ಸಮೀಪದ ರಾಯ್ ಅವರ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಅಂದು ಮಧ್ಯಾಹ್ನ 3.30 ರ ಸುಮಾರಿಗೆ ರಾಯ್ ಅವರು ತಮ ಕೊಠಡಿಗೆ ಹೋಗಿ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ. ಈ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿದೆ.
ಇವರು ರಿಯಲ್ ಎಸ್ಟೇಟ್, ಚಿತ್ರನಿರ್ಮಾಣ ಹೀಗೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೇ ಕೆಲವು ರಾಜಕೀಯ ಪಕ್ಷಗಳ ನಾಯಕರ ಸ್ನೇಹ ಬೆಳೆಸಿಕೊಂಡಿದ್ದರು. ಇದೀಗ ರಾಯ್ ಅವರ ಆತಹತ್ಯೆಯಿಂದ ಆ ವಲಯಗಳಲ್ಲಿ ಆತಂಕ ಉಂಟಾಗಿದೆ.ರಾಯ್ ಅವರ ಸಂಪರ್ಕದಲ್ಲಿದ್ದ ಚಿತ್ರ ನಟ, ನಟಿಯರು, ರಾಜಕಾರಣಿಗಳು ಹಾಗೂ ಇನ್ನಿತರರನ್ನು ಎಸ್‌ಐಟಿ ಸಂಪರ್ಕಿಸಿ ಅವರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದೆ.
