ನವದೆಹಲಿ,ಆ.11- ಮುಂದಿನ 15 ದಿನಗಳ ಕಾಲ ಕಾವೇರಿ ಜಲಾಶಯದಿಂದ ನೆರೆಯ ರಾಜ್ಯ ತಮಿಳುನಾಡಿಗೆ ಪ್ರತಿ ದಿನ 12 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್ಸಿ) ಕರ್ನಾಟಕಕ್ಕೆ ಶಿಫಾರಸ್ಸು ಮಾಡಿದೆ.
ಇದರಿಂದ ಕರ್ನಾಟಕಕ್ಕೆ ಮತ್ತೆ ಸಿಡಬ್ಲ್ಯುಆರ್ಸಿಯಿಂದ ತೀವ್ರ ಅನ್ಯಾಯವಾಗಿದ್ದು, ಇದೀಗ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ(ಸಿಡಬ್ಲ್ಯುಎಂಎ) ತೆಗೆದುಕೊಳ್ಳುವ ನಿರ್ಧಾರದ ಮೇಲೆ ನೀರು ಹರಿಸುವ ಭವಿಷ್ಯ ತೀರ್ಮಾನವಾಗಲಿದೆ.ದೆಹಲಿಯಲ್ಲಿ ಮುಂದುವರೆದ ಸಿಡಬ್ಲ್ಯುಆರ್ಸಿ ಸಭೆಯಲ್ಲಿ ತಮಿಳುನಾಡು, ಕರ್ನಾಟಕ ಹಾಗೂ ಪಾಂಡಿಚೇರಿ ರಾಜ್ಯಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಕರ್ನಾಟಕದ ಅಧಿಕಾರಿಗಳು ರಾಜ್ಯದ ವಾಸ್ತವ ಚಿತ್ರಣವನ್ನು ತೆರೆದಿಟ್ಟರು. ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದೆ. ಕಳೆದ ಎರಡು ವಾರದಿಂದ ಅಲ್ಪ ಪ್ರಮಾಣದ ಮಳೆಯಾಗಿರುವ ಪರಿಣಾಮ ಜಲಾಶಯಗಳಿಗೆ ನಿರೀಕ್ಷಿತ ಮಟ್ಟದಲ್ಲಿ ನೀರು ಹರಿದುಬಂದಿಲ್ಲವಾದರೂ ಸ್ವಲ್ಪ ಪ್ರಮಾಣದಲ್ಲಿ ಸಂಗ್ರಹವಾಗಿದೆ.
ನಮಲ್ಲೇ ಕುಡಿಯಲು ನೀರು ಇಲ್ಲ. ಕೃಷಿ ಚಟುವಟಿಕೆಗಳಿಗೆ ನಾವು ನಾಲೆಗಳಿಗೆ ನೀರನ್ನೇ ಹರಿಸಿಲ್ಲ. ರೈತರ ಬೇಡಿಕೆ ಇದ್ದರೂ ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನೀರು ಬಿಟ್ಟಿಲ್ಲ. ನಮ ಭಾಗದಲ್ಲೇ ನೀರು ಇಲ್ಲದಿರುವಾಗ ತಮಿಳುನಾಡಿಗೆ ನೀರು ಹರಿಸುವುದಾದರೂ ಹೇಗೆ ಎಂಬ ಮೂಲಭೂತ ಪ್ರಶ್ನೆಯನ್ನು ಸಭೆಯ ಮುಂದಿಟ್ಟರು.
ಮುಂದಿನ 15 ದಿನಗಳ ಕಾಲ ಪ್ರತಿದಿನ 12 ಸಾವಿರ ಕ್ಯೂಸೆಕ್್ಸ ನೀರು ಹರಿಸಬೇಕೆಂದು ಶಿಫಾರಸ್ಸು ಮಾಡಿದರೆ ನೀರು ಹರಿಸಲು ಸಾಧ್ಯವಿಲ್ಲ. ಸಮಿತಿಯ ತೀರ್ಮಾನದಿಂದ ಹಲವು ಟಿಎಂಸಿ ನೀರು ಬೇಕಾಗುತ್ತದೆ. ಸಮಿತಿಯ ಶಿಫಾರಸ್ಸನ್ನು ನಾವು ಹೇಗೆ ಒಪ್ಪಬೇಕು ಎಂದು ಕರ್ನಾಟಕದ ಅಧಿಕಾರಿಗಳು ಪ್ರಶ್ನೆ ಮಾಡಿದರು. ಈ ಹಿಂದೆ ಸಿಡಬ್ಲ್ಯುಆರ್ಸಿ ಶಿಫಾರಸ್ಸನ್ನು ಸಿಡಬ್ಲ್ಯುಎಂಎ ಎತ್ತಿ ಹಿಡಿಯಿತು. ನಮ ಸರ್ಕಾರ ಸಂಕಷ್ಟದಲ್ಲಿದ್ದರೂ ತಮಿಳುನಾಡಿಗೆ 3500 ಕ್ಯೂಸೆಕ್್ಸಗಿಂತಲೂ ಹೆಚ್ಚುವರಿ ನೀರನ್ನು 12 ದಿನಗಳ ಕಾಲ ಹರಿಸಿದ್ದೇವೆ.
ಪ್ರಾಧಿಕಾರದ ಆದೇಶವನ್ನು ಯಥಾವತ್ತಾಗಿ ಕರ್ನಾಟಕ ಸರ್ಕಾರ ಪಾಲನೆ ಮಾಡಿದೆ. ವಾಡಿಕೆಗಿಂತ ಕಡಿಮೆ ನೀರು ಇರುವಾಗ ಸಮಿತಿಯ ಶಿಫಾರಸ್ಸನ್ನು ಒಪ್ಪಿಕೊಳ್ಳುವುದು ಕಷ್ಟಸಾಧ್ಯ. ನಾವು ಇದನ್ನು ಪ್ರಾಧಿಕಾರದಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಸಭೆಯಿಂದ ನಿರ್ಗಮಿಸಿದರು.
ಕರ್ನಾಟಕದ ವಾದವನ್ನು ಒಪ್ಪದ ತಮಿಳುನಾಡು ಸಂಕಷ್ಟ ಸೂತ್ರದ ಪ್ರಕಾರ ನಮ ರಾಜ್ಯಕ್ಕೆ ಹರಿಸಬೇಕಾದ ನೀರನ್ನು ಬಿಟ್ಟಿಲ್ಲ. ಹೀಗಾಗಿ ನಮ ಪಾಲಿನ ನೀರನ್ನು ಹರಿಸಲು ಶಿಫಾರಸ್ಸು ಮಾಡಬೇಕೆಂದು ಸಮಿತಿಗೆ ಮನವಿ ಮಾಡಿಕೊಂಡಿದೆ.
ಈ ಹಿಂದೆ ಸಿಡಬ್ಲ್ಯು ಆರ್ಸಿ ಬರಗಾಲವಿದ್ದರೂ ತಮಿಳುನಾಡಿಗೆ ಪ್ರತಿದಿನ 12 ದಿನಗಳ ಕಾಲ 3500 ಕ್ಯೂಸೆಕ್್ಸ ನೀರು ಹರಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಇದನ್ನು ಸಿಡಬ್ಲ್ಯುಎಂಎ ಅಲ್ಲಿ ಪ್ರಶ್ನೆ ಮಾಡಲಾಗಿತ್ತು. ಅಂತಿಮವಾಗಿ ಸಮಿತಿಯ ಶಿಫಾರಸ್ಸನ್ನು ಯಥಾವತ್ತಾಗಿ ಪಾಲನೆ ಮಾಡಬೇಕೆಂದು ಕರ್ನಾಟಕ ಸರ್ಕಾರಕ್ಕೆ ಸೂಚನೆ ಕೊಟ್ಟಿತು. ಇದೀಗ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಮೇಲನವಿ ಅರ್ಜಿ ಗುರುವಾರ ವಿಚಾರಣೆಗೆ ಬರಲಿದೆ.
