ಬೆಂಗಳೂರು, ಮೇ 3 – ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಕುರುಕ್ಷೇತ್ರವಾಗಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಅಭ್ಯರ್ಥಿಗಳಲ್ಲಿ ಆತಂಕ ಹೆಚ್ಚಾಗಿದೆ.
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ತೀರ್ಮಾನವಾಗಲಿದೆ.
ಬೆಳಗ್ಗೆ 8 ಗಂಟೆಯಿಂದ ಎರಡೂ ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಾರಂಭವಾಗಲಿದ್ದು, ಬಹುತೇಕ ಮಧ್ಯಾಹ್ನ 2 ಗಂಟೆಯೊಳಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ. ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎರಡೂ ಕಡೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಬಿಗಿಭದ್ರತೆ ಕೈಗೊಳ್ಳಲಾಗಿದೆ.
ಮತ ಎಣಿಕೆ ನಡೆಯುವ ಕೇಂದ್ರದ ಬಳಿ 144 ಸೆಕ್ಷನ್ ವಿಧಿಸಲಾಗಿದ್ದು, ಅಧಿಕೃತ ಅಭ್ಯರ್ಥಿಗಳು ಹಾಗೂ ಸಂಬಂಧಪಟ್ಟ ರಾಜಕೀಯ ಪಕ್ಷಗಳ ಏಜೆಂಟರನ್ನು ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶವಿಲ್ಲದಂತೆ ನಿರ್ಬಂಧ ವಿಧಿಸಲಾಗಿದೆ.
ದಾವಣಗೆರೆ ಬೆಣ್ಣೆದೋಸೆ ಯಾರಿಗೆ?
ದೇಶದಲ್ಲೇ ಅತಿ ಹಿರಿಯ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಹಣಾಹಣಿ ಏರ್ಪಟ್ಟಿದೆ.
ಶಾಮನೂರು ಕುಟುಂಬದ 3ನೇ ಕುಡಿ ಹಾಗೂ ಹಾಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ್ ಶಾಮನೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರೆ, ಬಿಜೆಪಿಯಿಂದ ಶ್ರೀನಿವಾಸ ದಾಸ್ ಕರಿಯಪ್ಪ ಕಣದಲ್ಲಿದ್ದಾರೆ. ಇಲ್ಲಿನ ಡಿಆರ್‌ಆರ್ ವಿದ್ಯಾಸಂಸ್ಥೆಯಲ್ಲಿ ಮತ ಎಣಿಕೆ ನಡೆಯಲಿದೆ. 14 ಟೇಬಲ್‌ಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದೆ.
ಮೂರು ಹಂತದ ಭದ್ರತೆ
ಮತ ಎಣಿಕೆ ಕೇಂದ್ರದ ಸುತ್ತಲಿನ 100 ಮೀಟರ್ ಪ್ರದೇಶವನ್ನು ವಾಹನ ಮುಕ್ತ ವಲಯ ಎಂದು ಘೋಷಿಸಲಾಗಿದೆ. ಎಣಿಕೆ ಕೇಂದ್ರದ ಗೇಟ್‌ನಿಂದ ಸುತ್ತಲಿನ 100 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಕೇಂದ್ರದ ಸುತ್ತಲೂ ಮೂರು ಹಂತದ ಸಮನ್ವಯ ಭದ್ರತಾ ವ್ಯವಸ್ಥೆ ಅಳವಡಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆಯಿಂದ ಪರ್ಯಾಯ ಸಂಚಾರ ಮಾರ್ಗ ಗುರುತಿಸಲಾಗಿದೆ.
ಬಾಗಲಕೋಟೆ ಯಾರಿಗೆ?
ಮಾಜಿ ಸಚಿವ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಾಳೆ ಭಾರೀ ಪೊಲೀಸ್ ಬಿಗಿಭದ್ರತೆಯೊಂದಿಗೆ ನಡೆಯಲಿದೆ.
ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬೆಳಿಗ್ಗೆ 8ರಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆಗೆ ಸಕಲ ರೀತಿಯಲ್ಲೂ ಸಜ್ಜುಗೊಳಿಸಲಾಗಿದೆ.
ಅಭ್ಯರ್ಥಿಗಳು, ಚುನಾವಣಾ ಏಜೆಂಟರು ಹಾಗೂ ಮತ ಎಣಿಕೆ ಏಜೆಂಟರುಗಳು ಅಂದು ಬೆಳಿಗ್ಗೆ 7 ಗಂಟೆಗೆ ಹಾಜರಿರಲು ತಿಳಿಸಲಾಗಿದೆ. ಭದ್ರತಾ ಕೊಠಡಿಯನ್ನು ಬೆಳಿಗ್ಗೆ 7 ಗಂಟೆಗೆ ಚುನಾವಣಾ ವೀಕ್ಷಕರ, ಅಭ್ಯರ್ಥಿಗಳ, ಏಜೆಂಟರ ಸಮಕ್ಷದಲ್ಲಿ ತೆರೆಯಲಾಗುತ್ತದೆ.
ಇವಿಎಂ ಮತ ಎಣಿಕೆ ಕಾರ್ಯಕ್ಕಾಗಿ ನೆಲ ಮಹಡಿಯ ರೂಂ ನಂ. 4ರಲ್ಲಿ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತಪತ್ರಗಳ ಎಣಿಕೆಗಾಗಿ ನೆಲ ಮಹಡಿಯ 9ನೇ ಕೊಠಡಿಯಲ್ಲಿ ಒಂದು ಟೇಬಲ್ ಹಾಗೂ ಇಟಿಪಿಬಿಎಸ್ ಸ್ಕ್ಯಾನಿಂಗ್‌ಗಾಗಿ ಒಂದು ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ತಲಾ ಒಬ್ಬ ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕ ಹಾಗೂ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬ ಸಹಾಯಕ ಚುನಾವಣಾಧಿಕಾರಿ ಇರುತ್ತಾರೆ.
ಸೇವಾ ಮತದಾರರಿಂದ ಸ್ವೀಕರಿಸಲ್ಪಡುವ ಅಂಚೆ ಮತಪತ್ರಗಳ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಸಲುವಾಗಿ ಒಂದು ಟೇಬಲ್ ಮಾಡಲಾಗಿದ್ದು, ಒಬ್ಬ ಸ್ಕ್ಯಾನಿಂಗ್ ಮೇಲ್ವಿಚಾರಕ, ಒಬ್ಬ ಅಸಿಸ್ಟಂಟ್ ಹಾಗೂ ಇಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ.
ಅಭ್ಯರ್ಥಿ ಹಾಗೂ ಅಭ್ಯರ್ಥಿ ಏಜೆಂಟರಿಗೆ ಮತ ಎಣಿಕೆ ಪೂರ್ವ ದಿಕ್ಕಿನಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಏಜೆಂಟರಿಗೆ ಮುಖ್ಯ ದ್ವಾರದಲ್ಲಿ ಪ್ರವೇಶ ಇರುವುದಿಲ್ಲ. ಸದರಿ ವಾಹನಗಳಿಗೆ ಮುಖ್ಯದ್ವಾರದ 200 ಮೀಟರ್ ಮುಂಚಿತವಾಗಿ ಇರುವ ಜಿಲ್ಲಾ ಪಶು ಸಂಗೋಪನಾ ಆಸ್ಪತ್ರೆ ಎದುರಿನ ರಸ್ತೆಯ ಮೂಲಕ ಮತ ಎಣಿಕೆ ಕೇಂದ್ರದಿಂದ ಸುಮಾರು 200 ಮೀಟರ್ ಅಂತರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಮತ ಎಣಿಕೆ ಸಿಬ್ಬಂದಿ ಹಾಗೂ ಮಾಧ್ಯಮದವರಿಗೆ ಮಾತ್ರ ಮುಖ್ಯ ದ್ವಾರದಿಂದ ಪ್ರವೇಶವಿರುತ್ತದೆ. ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೋನ್‌ಗಳನ್ನು ನಿರ್ಬಂಧಿಸಲಾಗಿದೆ.
ಕಳೆದ ಏಪ್ರಿಲ್ 10ರಂದು ನಡೆದ ಉಪಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಶೇ. 68.74 ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ. 68.43ರಷ್ಟು ಮಂದಿ ಮತ ಚಲಾಯಿಸಿದ್ದರು.
