Sunday, May 3, 2026
Homeರಾಜ್ಯಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ : ಕುತೂಹಲಗಳಿಗೆ ನಾಳೆ ತೆರೆ

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ : ಕುತೂಹಲಗಳಿಗೆ ನಾಳೆ ತೆರೆ

Countdown to five state assembly election results

ನವದೆಹಲಿ, ಮೇ 3- ದೇಶದ ಗಮನ ಸೆಳೆದಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಹೊರಬೀಳಲಿದ್ದು, ಘಟಾನುಘಟಿ ರಾಜಕೀಯ ನಾಯಕರ ಭವಿಷ್ಯ ನಿರ್ಧಾರವಾಗಲಿದೆ.

ನಾಳೆ ಬೆಳಿಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಆರಂಭವಾಗಲಿದ್ದು, ಬಹುತೇಕ ಮಧ್ಯಾಹ್ನ 2 ಗಂಟೆಯೊಳಗೆ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೇರಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಏಕಕಾಲಕ್ಕೆ ನಡೆಯಲಿದ್ದು, ಮತದಾರರ ತೀರ್ಪು ಯಾರಿಗೆ ಎಂಬುದು ನಾಳೆಯೇ ಬಹಿರಂಗವಾಗಲಿದೆ.

ಮುಂಬರುವ 2029ರ ಲೋಕಸಭಾ ಚುನಾವಣೆಗೆ ದಿಕ್ಕುಸೂಚಿ ಎಂದೇ ಹೇಳಲಾಗಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖವಾಗಿ ಬಿಜೆಪಿ, ಕಾಂಗ್ರೆಸ್‌, ಟಿಎಂಸಿ, ಡಿಎಂಕೆ, ಎಐಎಡಿಎಂಕೆ, ಪಿವಿಕೆ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಯಾರಿಗೆ ಪಶ್ಚಿಮ ಬಂಗಾಳ?

ಒಂದಿಲ್ಲೊಂದು ಕಾರಣದಿಂದ ದೇಶದ ಗಮನ ಸೆಳೆದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತವರೂರು ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಹಿಂದೆಂದಿಗಿಂತಲೂ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.

ಸರಿಯಾಗಿ 15 ವರ್ಷಗಳ ಹಿಂದೆ ಎಡಪಕ್ಷದ ಕೆಂಪು ಕೋಟೆಯನ್ನು ಛಿದ್ರ ಮಾಡಿ ಮೊದಲ ಬಾರಿಗೆ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ರಾಜ್ಯದಲ್ಲಿ ಸತತ ಮೂರು ಬಾರಿ ಅಧಿಕಾರ ನಡೆಸಿ, ನಾಲ್ಕನೇ ಬಾರಿ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಟಿಎಂಸಿಗೆ ಈ ಚುನಾವಣೆ ಒಂದು ರೀತಿ “ಮಾಡು ಇಲ್ಲವೇ ಮಡಿ” ಎಂಬಂತಾಗಿದೆ.

ಒಂದು ವೇಳೆ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಟಿಎಂಸಿ ನಾಲ್ಕನೇ ಬಾರಿ ಅಧಿಕಾರ ಗದ್ದುಗೆ ಹಿಡಿದರೆ ರಾಷ್ಟ್ರಮಟ್ಟದಲ್ಲಿ ಅದರ ಪ್ರಾಮುಖ್ಯತೆ ಹೆಚ್ಚಾಗಲಿದೆ. ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸುವ ಜವಾಬ್ದಾರಿಯನ್ನು ದೀದಿ ವಹಿಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಟಿಎಂಸಿ ತನ್ನ ತವರು ನೆಲದಲ್ಲೇ ಸೋತು ನೆಲಕಚ್ಚಿದರೆ ಇಂಡಿಯಾ ಮೈತ್ರಿಕೂಟಕ್ಕೆ ಭಾರಿ ಹೊಡೆತ ಬೀಳಲಿದೆ.

ಶತಾಯಗತಾಯ ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿಸಲೇಬೇಕೆಂದು ಪಣತೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.

ಹೀಗಾಗಿಯೇ ಕಳೆದ ಆರು ತಿಂಗಳಿನಿಂದ ಪಶ್ಚಿಮ ಬಂಗಾಳಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದ್ದ ಈ ಇಬ್ಬರು ಹಿಂದೆಂದಿಗಿಂತಲೂ ಅಬ್ಬರದ ಪ್ರಚಾರ ನಡೆಸಿ ಟಿಎಂಸಿಗೆ ನಡುಕ ಹುಟ್ಟಿಸಿದ್ದಾರೆ. 2021ರ ಚುನಾವಣೆಯಲ್ಲಿ ಆದ ಪ್ರಮಾದಗಳನ್ನು ಸರಿಪಡಿಸಿಕೊಂಡು ಪಶ್ಚಿಮ ಬಂಗಾಳಕ್ಕೆ ಲಗ್ಗೆ ಇಟ್ಟಿದ್ದ ಈ ಜೋಡಿ ಸತತವಾಗಿ ಪ್ರಚಾರ ನಡೆಸಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣತೊಟ್ಟಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ಮತದಾನ ನಡೆದಿರುವುದು ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿದೆ.

ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸ್ಪಷ್ಟ ಜನಾದೇಶ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. ಹೀಗಾಗಿ ಫಲಿತಾಂಶದ ಬಗ್ಗೆ ಎಲ್ಲರಿಗೂ ಕುತೂಹಲ ಇದೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು 294 ವಿಧಾನಸಭಾ ಕ್ಷೇತ್ರಗಳಿದ್ದು, ಸರ್ಕಾರ ರಚನೆಗೆ ಯಾವುದೇ ಪಕ್ಷ 148 ಸ್ಥಾನಗಳನ್ನು ಪಡೆಯಬೇಕು.


ಕುತೂಹಲದತ್ತ ತಮಿಳುನಾಡು

ದ್ರಾವಿಡ ಅಸ್ಮಿತೆಯ ಮೇಲೆ ರಾಜಕಾರಣ ನಡೆಯುವ ತಮಿಳುನಾಡಿನಲ್ಲಿ ಈ ಬಾರಿ ಜನಾದೇಶ ಯಾರಿಗೆ ಎಂಬುದು ಮೀನಿನ ಹೆಜ್ಜೆಯಷ್ಟೇ ನಿಗೂಢವಾಗಿಯೇ ಉಳಿದಿದೆ.

ಈವರೆಗೂ ರಾಜ್ಯದಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ನಡುವೆಯೇ ಸ್ಪರ್ಧೆ ನಡೆಯುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಖ್ಯಾತ ಚಲನಚಿತ್ರ ನಟ ವಿಜಯ್ ಅವರ ಪಿವಿಕೆ ಪಕ್ಷ ಎರಡು ಪಕ್ಷಗಳಿಗೆ ಸಮಬಲದ ಸ್ಪರ್ಧೆ ನೀಡಿದ್ದು, ಡಿಎಂಕೆ ಹಾಗೂ ಎಐಎಡಿಎಂಕೆ ನಾಯಕರು ನಿದ್ದೆ ಕಳೆದುಕೊಳ್ಳುವಂತೆ ಮಾಡಿದ್ದಾರೆ.

ಕೆಲವು ಮತದಾನೋತ್ತರ ಸಮೀಕ್ಷೆಗಳು ಆಡಳಿತರೂಢ ಡಿಎಂಕೆ ಪುನಃ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿವೆ. ಇನ್ನು ಕೆಲವು ಸಮೀಕ್ಷೆಗಳು ಪ್ರತಿಪಕ್ಷ ಎಐಎಡಿಎಂಕೆ ಅಧಿಕಾರಕ್ಕೆ ಬರಬಹುದೆಂಬ ಸುಳಿವು ಕೊಟ್ಟಿವೆ.

ಇದರ ನಡುವೆ ವಿಜಯ್ ನೇತೃತ್ವದ ಪಿವಿಕೆ ಈ ಬಾರಿ ಸರ್ಕಾರ ರಚನೆಯಲ್ಲಿ ಕಿಂಗ್ ಮೇಕರ್ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳಿರುವುದು ಮತದಾರರಲ್ಲಿ ಕುತೂಹಲ ಮೂಡಿಸಿದೆ. ಅದರಲ್ಲಿ ಕೆಲವು ಸಮೀಕ್ಷೆಗಳು ವಿಜಯ್ ಅವರೇ ಸರ್ಕಾರ ರಚನೆಗೆ ಬೇಕಾದ ಬಹುಮತವನ್ನು ಪಡೆದುಕೊಳ್ಳಬಹುದು ಎಂದು ಹೇಳಿವೆ.

ಮತದಾನೋತ್ತರ ಸಮೀಕ್ಷೆಗಳು ಹೊರಬೀಳುತ್ತಿದ್ದಂತೆ ಡಿಎಂಕೆ ಹಾಗೂ ಎಐಎಡಿಎಂಕೆ ಮುಖಂಡರು ವಿಜಯ್ ಅವರನ್ನು ಮನವೊಲಿಸುವ ಕಸರತ್ತು ಪ್ರಾರಂಭಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 234 ವಿಧಾನಸಭಾ ಕ್ಷೇತ್ರಗಳಿದ್ದು, ಸರ್ಕಾರ ರಚನೆ ಮಾಡಲು 118 ಸ್ಥಾನಗಳ ಅಗತ್ಯವಿದೆ.


ಹ್ಯಾಟ್ರಿಕ್ ನತ್ತ ಬಿಜೆಪಿ?

ಬಹುತೇಕ ವಲಸಿಗರು ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಪುನಃ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಸಮೀಕ್ಷೆಗಳು ಹೇಳಿವೆ.

ರಾಜ್ಯದ ಒಟ್ಟು 126 ವಿಧಾನಸಭಾ ಕ್ಷೇತ್ರಗಳ ಪೈಕಿ ಸರಳ ಬಹುಮತವಾಗಿ ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ 64 ಸ್ಥಾನಗಳು ಬೇಕು. ರಾಜ್ಯದಲ್ಲಿ ಸತತ ಎರಡು ಬಾರಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಈ ಬಾರಿ ಅಸ್ಸಾಂನಲ್ಲಿ ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಲು ತವಕದಲ್ಲಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಎಲ್ಲಾ ಮತದಾನೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಪುನಃ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ನೇತೃತ್ವದ ಎನ್‌ಡಿಎ ಸರ್ಕಾರ ಭಾರಿ ಜನಾದೇಶ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.

ಚುನಾವಣೆಗೆ ಮುನ್ನ ರಾಜ್ಯದ್ಯಂತ ನಡೆಸಿದ ಜನಾಶೀರ್ವಾದ ಯಾತ್ರೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಅಬ್ಬರದ ಪ್ರಚಾರ ಬಿಜೆಪಿಗೆ ವರವಾಗಿ ಪರಿಣಮಿಸುವ ಸಂಭವವಿದೆ. ಸಾಲು ಸಾಲು ನಾಯಕರ ನಿರ್ಗಮನದಿಂದ ಚುನಾವಣೆಗೂ ಮೊದಲೇ ಬಹುತೇಕ ಶಕ್ತಿ ಕಳೆದುಕೊಂಡಿದ್ದ ಕಾಂಗ್ರೆಸ್ ಈ ಬಾರಿ ಹಿಂದಿನ ಚುನಾವಣೆಗಿಂತಲೂ ಕಳಪೆ ಪ್ರದರ್ಶನ ನೀಡುವ ಸಾಧ್ಯತೆ ಇದೆ.


ಕೇರಳದಲ್ಲಿ ಯುಡಿಎಫ್?

ಶೇ. 100ಕ್ಕೆ 100ರಷ್ಟು ಸಾಕ್ಷರತೆ ಸಾಧಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರವಾಸಿಗರ ಸ್ವರ್ಗ ಹಾಗೂ ದೇವರ ನಾಡು ಎಂದೇ ಕರೆಯುವ ಕೇರಳದಲ್ಲಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ಸಮೀಕ್ಷೆಗಳು ಸೂಚಿಸಿವೆ.

ಸತತ ಎರಡು ಬಾರಿ ಅಧಿಕಾರ ನಡೆಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಅಧಿಕಾರ ಕಳೆದುಕೊಳ್ಳುವ ಸುಳಿವನ್ನು ಸಮೀಕ್ಷೆಗಳು ಕೊಟ್ಟಿವೆ. ಆಡಳಿತ ವಿರೋಧಿ ಅಲೆ ಹಾಗೂ ಸರ್ಕಾರದಲ್ಲಿ ಹೆಚ್ಚಿರುವ ಭ್ರಷ್ಟಾಚಾರದಿಂದ ರಾಜ್ಯದ ಜನತೆ ಬದಲಾವಣೆ ಬಯಸಿದ್ದು ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಮಣೆ ಹಾಕುವ ಸಾಧ್ಯತೆ ಇದೆ.

ವ್ಯವಸ್ಥಿತ ಪ್ರಚಾರ ಹಾಗೂ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ರೀತಿಯ ಅಸಮಾಧಾನಕ್ಕೆ ಆಸ್ಪದವಿಲ್ಲದೆ ಯೋಜಿತ ಪ್ರಚಾರ ನಡೆಸಿದ್ದ ಕಾಂಗ್ರೆಸ್ ಬಹುದಿನಗಳ ನಂತರ ರಾಜ್ಯವೊಂದರಲ್ಲಿ ಅಧಿಕಾರ ಹಿಡಿಯುವ ಕನಸು ಕಂಡಿದೆ. ಕೇರಳದಲ್ಲಿ ಒಟ್ಟು 140 ಸ್ಥಾನಗಳಿದ್ದು, ಸರಳ ಬಹುಮತವಾಗಿ ಸರ್ಕಾರ ರಚನೆಗೆ 71 ಸ್ಥಾನಗಳ ಅಗತ್ಯವಿದೆ.


ಎನ್‌ಡಿಎ ಅಧಿಕಾರಕ್ಕೆ?

ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೇರಿಯಲ್ಲಿ ಪುನಃ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಬಹುದೆಂದು ಸಮೀಕ್ಷೆಗಳು ಅಂದಾಜಿಸಿವೆ. ರಾಜ್ಯದ ಒಟ್ಟು 30 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ 15ರಿಂದ 20 ಸ್ಥಾನಗಳನ್ನು ಪಡೆದು ಎರಡನೇ ಬಾರಿಗೆ ಅಧಿಕಾರ ಗದ್ದುಗೆ ಹಿಡಿಯಬಹುದೆಂದು ಹೇಳಲಾಗಿದೆ.

ಮುಖ್ಯಮಂತ್ರಿ ಎನ್. ರಂಗಸ್ವಾಮಿ ನೇತೃತ್ವದ ಎಐಎನ್‌ಆರ್‌ಸಿ ಹಾಗೂ ಬಿಜೆಪಿ ಮೈತ್ರಿ ಅಧಿಕಾರಕ್ಕೆ ಬರಬಹುದೆಂದು ಅಂದಾಜಿಸಲಾಗಿದೆ.

RELATED ARTICLES

Latest News