ಬಳ್ಳಾರಿ,ಜ.3-ಬ್ಯಾನರ್ ವಿಚಾರವಾಗಿ ನಡೆದ ಗಲಾಟೆ ಸಂಬಂಧ ಪೊಲೀಸರು ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಅವರ ಖಾಸಗಿ ಗನ್‌ಮ್ಯಾನ್‌ಗಳಿಂದ ಗನ್‌ಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ನಾಲ್ವರು ಗನ್‌ಮ್ಯಾನ್‌ಗಳು ನಾಪತ್ತೆಯಾಗಿದ್ದಾರೆ.
ಬ್ಯಾನರ್ ಅಳವಡಿಕೆ ವಿಚಾರವಾಗಿ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಬಳಿ ಗಲಾಟೆಯಾಗಿ ವಿಕೋಪಕ್ಕೆ ತಿರುಗಿದಾಗ ಗಾಳಿಯಲ್ಲಿ ಹಾರಿಸಿದ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಇದೀಗ ಖಾಸಗಿ ಗನ್ ಮ್ಯಾನ್‌ಗಳು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೊನ್ನೆ ಸಂಜೆ ಗಲಾಟೆ ಸಂದರ್ಭದಲ್ಲಿ ಸತೀಶ್ ರೆಡ್ಡಿ ಅವರ ಗನ್‌ಮ್ಯಾನ್‌ಗಳು ಗುಂಡು ಹಾರಿಸಿದ್ದರು. ಈಗಾಗಲೇ ಜನಾರ್ದನ ರೆಡ್ಡಿ ಹಾಗೂ ಸತೀಶ್ ರೆಡ್ಡಿಗೆ ಸಂಬಂಧಿಸಿದ ಗನ್‌ಮ್ಯಾನ್‌ಗಳಿಂದ ಐದು ಗನ್‌ಗಳನ್ನು ಹಾಗೂ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ನಡುವೆ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿರುವುದು ಪೊಲೀಸರು ಗಾಳಿಯಲ್ಲಿ ಹಾರಿಸಿದ್ದ ಗುಂಡು ತಗುಲಿ ಅಲ್ಲ. ಖಾಸಗಿ ವ್ಯಕ್ತಿಗಳು ಹಾರಿಸಿದ ಗನ್‌ನಿಂದ ಬಂದಿರುವ ಬುಲೆಟ್ ಎಂದು ಈಗಾಗಲೇ ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.
ಅಂದಿನ ಘಟನೆಗೆ ಸಂಬಂಧಿಸಿದಂತೆ ವಿಡಿಯೋಗಳು ಲಭ್ಯವಾಗಿದ್ದು, ದೃಶ್ಯಾವಳಿಯಲ್ಲಿ ಸತೀಶ್ ರೆಡ್ಡಿ ಅವರ ಗನ್‌ಮ್ಯಾನ್‌ಗಳು ಗುಂಡು ಹಾರಿಸಿರುವುದು ಕಂಡು ಬಂದಿದೆ.ಆದರೆ ಯಾರ ಗುಂಡು ತಗುಲಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
