ಬೆಂಗಳೂರು, ಆ.5- ಗಣತಿ ನಮೂನೆಗಳ ಗಣಕೀಕರಣದ ವೇಳೆ ದಾಖಲಾಗಿರುವ ಅಸಹಜ ವಿವರಗಳಿಗೆ ಸಂಬಂಧಿಸಿದಂತೆ ಮತದಾರರಿಗೆ ನೋಟಿಸ್ ನೀಡಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಗುವುದು ಎಂದು ಬೆಂಗಳೂರು ದಕ್ಷಿಣ ಅಪರ ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಹಿ ಮಾಡಿದ ಗಣತಿ ನಮೂನೆಗಳ ಡಿಜಿಟಲೀಕರಣ ಈಗಾಗಲೇ ಆರಂಭವಾಗಿದ್ದು, ಮತದಾರರ ನೋಂದಣಾಧಿಕಾರಿಗಳ ಹಂತದಲ್ಲಿ ಪರಿಶೀಲನೆ ನಡೆಯುತ್ತಿದೆ ಎಂದರು.
ತಂದೆ-ಮಕ್ಕಳು, ತಾತ-ಮೊಮಕ್ಕಳ ನಡುವಿನ ವಯಸ್ಸಿನ ಅಂತರ ತೀರಾ ಕಡಿಮೆ ಇರುವಂತಹ ಅಸಹಜ ವಿವರಗಳು ಕಂಡುಬಂದಲ್ಲಿ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಸಂಬಂಧಿತ ಮತದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ವಿವರಗಳನ್ನು ದೃಢಪಡಿಸಿದ ಬಳಿಕವೇ ಅಂತಹ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಮನೆಗಳಿಗೆ ಸ್ಟಿಕರ್; ಗೈರುಹಾಜರಿ, ಸ್ಥಳಾಂತರಗೊಂಡ, ಮೃತಪಟ್ಟ ಹಾಗೂ ನಕಲಿ ಮತದಾರರ ಪರಿಶೀಲನೆ ಪೂರ್ಣಗೊಂಡಿರುವ ಮನೆಗಳಿಗೆ ಗಳು ಭೇಟಿ ನೀಡಿ, ಪರಿಶೀಲನೆ ನಡೆದಿರುವುದನ್ನು ದೃಢಪಡಿಸುವ ಸ್ಟಿಕರ್‌ಗಳನ್ನು ಕಡ್ಡಾಯವಾಗಿ ಅಂಟಿಸಲಿದ್ದಾರೆ.
ಹೆಸರು ಸೇರ್ಪಡೆಗೆ ನಮೂನೆ-6:ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಅಥವಾ ಅರ್ಹರಾಗಿದ್ದರೂ ಹೆಸರು ಬಿಟ್ಟುಹೋಗಿರುವ ಮತದಾರರು ಅಗತ್ಯ ದಾಖಲೆಗಳೊಂದಿಗೆ ನಮೂನೆ-6 ಅರ್ಜಿ ಸಲ್ಲಿಸಿ ಹೊಸದಾಗಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಹೆಚ್ಚುವರಿ ಸಿಬ್ಬಂದಿ ನಿಯೋಜನೆ:ಒಬ್ಬ ಅಧಿಕಾರಿ ದಿನಕ್ಕೆ ಗರಿಷ್ಠ 150 ಗಣತಿ ನಮೂನೆಗಳನ್ನು ಪರಿಶೀಲಿಸಿ ದೃಢೀಕರಿಸಬಹುದಾಗಿದೆ. ಪರಿಶೀಲನಾ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಅನುಮೋದನೆ ದೊರೆತ ಬಳಿಕ ಹೆಚ್ಚುವರಿ ಅಧಿಕಾರಿಗಳನ್ನು ಕಾರ್ಯಕ್ಕೆ ನಿಯೋಜಿಸಲಾಗುವುದು ಎಂದು ಕೆ.ಎನ್. ರಮೇಶ್ ಹೇಳಿದರು.
ಸಭೆಯಲ್ಲಿ ಅಪರ ಆಯುಕ್ತ ರಾಚಪ್ಪ, ಚುನಾವಣಾ ತಹಸೀಲ್ದಾರ್ ರಶ್ಮಿ, ಮತದಾರರ ನೋಂದಣಾಧಿಕಾರಿಗಳು ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
