Homeರಾಜ್ಯರಾಜ್ಯದ ಹಲವೆಡೆ ವರುಣನ ಆರ್ಭಟಕ್ಕೆ 6 ಮಂದಿ ಬಲಿ

ರಾಜ್ಯದ ಹಲವೆಡೆ ವರುಣನ ಆರ್ಭಟಕ್ಕೆ 6 ಮಂದಿ ಬಲಿ

Six killed in rainstorm in several parts of the state

ಬೆಂಗಳೂರು,ಮೇ 15- ನಿನ್ನೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ ಆರ್ಭಟಕ್ಕೆ ಮನೆ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸೇರಿದಂತೆ ಆರು ಮಂದಿ ಬಲಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ಮೊರಟಗಿ ಗ್ರಾಮದಲ್ಲಿ ಭಾರೀ ಮಳೆಗಾಳಿಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಪತಿ, ಪತ್ನಿ, ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುರುನಾಥ್‌ ಬಡಿಗೇರ (35), ಜ್ಯೋತಿ ಬಡಿಗೇರ (28), ಕಾಳಮ ಬಡಿಗೇರ (13), ಕೀರ್ತಿ ಬಡಿಗೇರ (9) ಮೃತಪಟ್ಟ ದುರ್ದೈವಿಗಳು.

ಗುರುನಾಥ್‌ ಅವರು ಸ್ವಂತ ಮನೆಯನ್ನು ದುರಸ್ಥಿ ಮಾಡಿಸುತ್ತಿದ್ದ ಕಾರಣ ಈ ಕುಟುಂಬ ಬೇರೆ ಮನೆಯೊಂದರಲ್ಲಿ ಬಾಡಿಗೆಗೆ ವಾಸವಿದ್ದರು. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಹಳೆಯ ಮನೆಯ ಮೇಲ್ಛಾವಣಿ ಏಕಾಏಕಿ ಮಧ್ಯರಾತ್ರಿ ಕುಸಿದುಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಜೀವಂತ ಸಮಾಧಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸಿಂದಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಅವಶೇಷಗಳಡಿಯಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೊರಟಗಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಕುಟುಂಬಸ್ಥರು ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ್‌ ತಾಲ್ಲೂಕಿನ ಬಿದರಕುಂಡೆಯಲ್ಲಿ ಬಿರುಗಾಳಿಗೆ ಬೃಹತ್‌ ಮರವೊಂದು ಬಿದ್ದು ವೃದ್ಧರೊಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ.

ದಾವಣಗೆರೆಯಲ್ಲಿ ಸಿಡಿಲು ಬಡಿದು 19 ವರ್ಷದ ಕುರಿಗಾಹಿ ಅಜಿತ್‌ ಎಂಬ ಯುವಕ ಸಾವನ್ನಪ್ಪಿದ್ದಾರೆ. ಮಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ರನ್‌ವೇ ಸ್ಪಷ್ಟವಾಗಿ ಕಾಣಿಸದ ಪರಿಣಾಮ ಬೆಂಗಳೂರಿನಿಂದ ಬಂದಿದ್ದ ಏರ್‌ ಇಂಡಿಯಾದ ಎರಡು ವಿಮಾನಗಳು ಆಗಸದಲ್ಲೇ ಸುಮಾರು ಹೊತ್ತು ಸುತ್ತುವರಿದಿವೆ.

ದಾವಣಗೆರೆ, ವಿಜಯಪುರ, ಬೆಳಗಾವಿ, ಹಾವೇರಿ, ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಭಾರೀ ಬಿರುಗಾಳಿಗೆ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ.

ಚಿಕ್ಕಮಗಳೂರು, ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಮರಗಳು ಬಿದ್ದು ಹಲವೆಡೆ ಸಂಚಾರಕ್ಕೆ ಅಡಚಣೆಯಾಗಿತ್ತು. ಉತ್ತರಕನ್ನಡದ ಹೊನ್ನಾವರ, ಭಟ್ಕಳದಲ್ಲೂ ಗುಡುಗು ಸಹಿತ ಮಳೆಯಾಗಿ ವಿದ್ಯುತ್‌ ಸಂಪರ್ಕ ಕಡಿತವಾಗಿ ಜನ ಸಮಸ್ಯೆ ಅನುಭವಿಸಬೇಕಾಯಿತು.

RELATED ARTICLES

Latest News