Monday, March 16, 2026
Homeರಾಜ್ಯಎಸ್ಸೆಸ್ಸೆಲ್ಸಿ-ಪರೀಕ್ಷೆ 1 : ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಸೂಚನೆ

ಎಸ್ಸೆಸ್ಸೆಲ್ಸಿ-ಪರೀಕ್ಷೆ 1 : ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಸೂಚನೆ

SSLC-Exam 1: Instructions to download admit card

ಬೆಂಗಳೂರು,ಮಾ.3- ಪ್ರಸಕ್ತ 2025-26ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ-ಪರೀಕ್ಷೆ 1ಕ್ಕೆ ಹಾಜರಾಗುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತನ್ನ ಜಾಲತಾಣದ ಶಾಲಾ ಲಾಗಿನ್‌ನಲ್ಲಿ ಅಪ್‌ಲೌಡ್‌ ಮಾಡಿದೆ.
ಮಾ.18ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಆಯಾ ಶಾಲಾ ಮುಖ್ಯೋಪಾಧ್ಯಾಯರು ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ ಮೂಲಕ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಸಕಾಲದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದು ಮಂಡಳಿ ತಿಳಿಸಿದೆ.

ಪರೀಕ್ಷೆಗೆ ನೊಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆ, ಡೌನ್‌ಲೋಡ್‌ ಮಾಡಲಾದ ಪ್ರವೇಶಪತ್ರಗಳ ಸಂಖ್ಯೆ ಸರಿಹೊಂದುವ ಬಗ್ಗೆ ಪರಿಶೀಲಿಸಿ ಒಂದು ವೇಳೆ ವ್ಯತ್ಯಾಸವಿದ್ದರೆ ಅಥವಾ ಪ್ರವೇಶಪತ್ರ ಬಾರದಿದ್ದರೆ ಅಂಥ ವಿದ್ಯಾರ್ಥಿಗಳ ವಿವರವನ್ನು ಸಮರ್ಥನೆ ಹಾಗೂ ದಾಖಲೆಗಳೊಂದಿಗೆ ಪರಿಶೀಲನಾ ಶಾಖೆಯ ಶಾಖಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದೆ.

ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ /ವಿನಾಯ್ತಿ ನೀಡುವ ಸಂಬಂಧ ಉಪನಿರ್ದೇಶಕರ ಮಾಪನದ ಅಧ್ಯಯನದ ದೈಹಿಕ ಸ್ಥಿತಿ, ಭಾಷಾ ವಿನಾಯ್ತಿ, ಬದಲಿ ವಿಷಯಗಳ ಮಾಹಿತಿಗಳು ಪ್ರವೇಶಪತ್ರದಲ್ಲಿ ಮುದ್ರಿತವಾಗಿರುವ ಬಗ್ಗೆ ಮುಖ್ಯ ಶಿಕ್ಷಕರು ಖಚಿತಪಡಿಸಿಕೊಳ್ಳಬೇಕು.

ಯಾವುದೇ ವಿದ್ಯಾರ್ಥಿಯ ಭಾವಚಿತ್ರ ಬದಲಾವಣೆಗೆ ಸಂಬಂಧಿಸಿದಂತೆ ಪರೀಕ್ಷಾ ಪೂರ್ವದಲ್ಲಿಯೇ ಮಾಡುವ ಬದಲಾವಣೆಯನ್ನು ಮಂಡಳಿ ಪರಿಗಣಿಸಲಿದ್ದು, ಪರೀಕ್ಷೆಯ ನಂತರ ಭಾವಚಿತ್ರ ಬದಲಾವಣೆ ಕುರಿತ ಮನವಿಯನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದಕ್ಕೆ ಸಂಬಂಧಿಸಿದ ಶಾಲಾ ಮುಖ್ಯಸ್ಥರು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ನೇರ ಜವಾಬ್ದಾರಿಯಾಗುತ್ತಾರೆ. ಬದಲಿ ವಿದ್ಯಾರ್ಥಿ ಪರೀಕ್ಷೆ ಬರೆಯಲು ಸಹಕರಿಸಿ ಪರೀಕ್ಷಾ ಅವ್ಯವಹಾರದಲ್ಲಿ ಭಾಗಿಯಾದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು.

ಈಗಾಗಲೇ ವಿದ್ಯಾರ್ಥಿಗಳ, ಪೋಷಕರ ನೊಂದಾಯಿತ ದೂರವಾಣಿಗೆ ಪ್ರವೇಶಪತ್ರ ಲಭ್ಯವಿರುವ ಬಗ್ಗೆ ಸಂದೇಶ ರವಾನಿಸಲಾಗಿದೆ. ಹೀಗಾಗಿ ಶಾಲಾ ಮುಖ್ಯ ಶಿಕ್ಷಕರ ವಿಳಂಬವಾಗದಂತೆ ಪ್ರವೇಶ ಪತ್ರಗಳನ್ನು ಆದ್ಯತೆ ಮೇರೆಗೆ ಕಡ್ಡಾಯವಾಗಿ ಪರಿಶೀಲಿಸಿ ವಿದ್ಯಾರ್ಥಿಗಳಿಗೆ ನೀಡುವುದು, ಒಂದು ವೇಳೆ ಪ್ರವೇಶಪತ್ರ ವಿತರಣೆ ವಿಳಂಬವಾದ ಬಗ್ಗೆ ದೂರು ಸ್ವೀಕಾರವಾದರೆ ಶಾಲಾ ಮುಖ್ಯಶಿಕ್ಷಕರ ವಿರುದ್ದ ಸೂಕ್ತ ಕ್ರಮ ಜರುಗಿಸುವುದಾಗಿ ಮಂಡಳಿ ಎಚ್ಚರಿಸಿದೆ.

RELATED ARTICLES

Latest News