Homeರಾಜ್ಯಸ್ಟಿಂಗ್‌ ಆಪರೇಷನ್‌ : ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಹೆಚ್ಡಿಕೆ ಆಗ್ರಹ

ಸ್ಟಿಂಗ್‌ ಆಪರೇಷನ್‌ : ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಹೆಚ್ಡಿಕೆ ಆಗ್ರಹ

ಬೆಂಗಳೂರು,ಅ.15- ಸ್ಟಿಂಗ್‌ ಆಪರೇಷನ್‌ ವಿಚಾರದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಲು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ರಾಜ್ಯಸರ್ಕಾರವನ್ನು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಿಂಗ್‌ ಆಪರೇಷನ್‌ನ ರೂವಾರಿಗಳು ಯಾರು?, ಯಾರು ಮಾಡುತ್ತಿದ್ದಾರೆ?, ಅದರ ಹಿಂದಿರುವ ವ್ಯಕ್ತಿಗಳು ಯಾರು? ಎಂಬ ಸತ್ಯಾಂಶ ಹೊರತರಲು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಂಶಯ ಬಂದರೆ ಕುಮಾರಸ್ವಾಮಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತೇವೆ ಎಂದು ಗೃಹಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಪೊಲೀಸ್‌‍ ಆಯುಕ್ತರ ಕಚೇರಿಗೆ ನಾನೇ ಹೋಗಲು ಸಿದ್ಧ. ಬಂಧಿಸಲಿ. ಆರೋಪ ಮಾಡಿರುವುದು ನಾನು. ಅದನ್ನು ಬಿಟ್ಟು ಜೆಡಿಎಸ್‌‍ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ವಶಕ್ಕೆ ಪಡೆದು ಸಿನಿಮಾ ಮಾದರಿಯಲ್ಲಿ ಹೆದರಿಸಿ, ಬೆದರಿಸುವುದು ಏಕೆ? ಎಂದು ಪ್ರಶ್ನಿಸಿದರು.

ನಮ ಪಕ್ಷದ ಸಿಬ್ಬಂದಿ ಮತ್ತು ಕಾರ್ಯಕರ್ತರಿಗೆ ಏಕೆ ತೊಂದರೆ ಕೊಡುತ್ತೀರಿ? ಮುಖ್ಯಮಂತ್ರಿ ಮೊಬೈಲ್‌ ಮತ್ತು ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುವವರ ಮೊಬೈಲ್‌ ಅನ್ನು ತನಿಖೆ ಮಾಡಿದರೆ ಸತ್ಯಾಂಶ ಹೊರಬರಲಿದೆ ಎಂದರು.

ಮಾಧ್ಯಮದ ಹೆಸರು ಹೇಳಿಕೊಂಡು ಇಂತಹ ಕೆಲಸ ಮಾಡಿಕೊಂಡು ಬರುತ್ತಿರುವ ವ್ಯಕ್ತಿಗೆ ಏಕೆ ರಕ್ಷಣೆ ಕೊಡುತ್ತಿದ್ದೀರಿ? ಎಲ್ಲವೂ ಗೊತ್ತಿದ್ದು ಏಕೆ ಕ್ರಮ ಕೈಗೊಂಡಿಲ್ಲ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಶಯವಿದೆ ಎಂದು ಇಷ್ಟ ಬಂದಂತೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗೃಹಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಹರಿಹಾಯ್ದ ಅವರು, ನನ್ನ ತಾಳೆಯನ್ನು ಪರೀಕ್ಷೆ ಮಾಡಬೇಡಿ, ಹೋರಾಟಕ್ಕೆ ಸಿದ್ಧವಿದ್ದೇನೆ, ಅಖಾಡಕ್ಕೆ ಬನ್ನಿ ಎಂದು ಸವಾಲು ಹಾಕಿದರು.ರಾಜ್ಯದ ಡಿಜಿ ಆಗಿದ್ದ ಪೊಲೀಸ್‌‍ ಅಧಿಕಾರಿಯೊಬ್ಬರನ್ನು ಮುಗಿಸುತ್ತೇನೆ ಎಂದು ಹೇಳಿ ಕೊಲೆ ಬೆದರಿಕೆ ಹಾಕಿದ ವ್ಯಕ್ತಿಗೆ ಏಕೆ ರಕ್ಷಣೆ ಕೊಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.

ಬಿಎಂಐಸಿ ಯೋಜನೆಯ ಅಕ್ರಮಗಳನ್ನು ಬಹಿರಂಗ ಮಾಡುತ್ತಿರುವುದನ್ನು ಜನತೆಗೆ ಹೋಗಬಾರದು ಎಂಬ ಉದ್ದೇಶದಿಂದ ಸಂಪುಟ ಸಭೆಯಲ್ಲಿ ಸ್ಟಿಂಗ್‌ ಆಪರೇಷನ್‌ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ಅವರು ಆರೋಪಿಸಿದರು.ಸಂಪುಟ ಸಭೆಯಲ್ಲಿ ನಡೆಯುವ ರಹಸ್ಯ ವಿಚಾರವನ್ನು ಮಾಧ್ಯಮಗಳಿಗೆ ನೀಡಿದವರು ಯಾರು?, ಅದಕ್ಕೂ ಮುನ್ನ ಖಾಸಗಿ ಹೋಟೆಲ್‌ನಲ್ಲಿ ಯಾವ ವ್ಯಕ್ತಿಯನ್ನು ಮುಖ್ಯಮಂತ್ರಿ ಭೇಟಿಯಾಗಿದ್ದರು?, ಅಲ್ಲದೆ ತಮ ಮನೆಗೆ ಅವರನ್ನು ಏಕೆ ಕರೆಸಿಕೊಂಡಿದ್ದೀರಿ ? ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಎಂಐಸಿ ಯೋಜನೆ ಗುತ್ತಿಗೆದಾರರು ನಿಮ ಮನೆಗೆ ಬಂದು ಹೋಗಿದ್ದಾರೆ. ಅವರನ್ನು 16 ಗಂಟೆವರೆಗೆ ವಾಹಿನಿಯೊಂದು ಸಂದರ್ಶನ ಮಾಡಿದೆ. ಈ ಸಂದರ್ಶನ ಎಲ್ಲಿ ಮಾಡಿದ್ದು? ಎಂದು ಅವರು ಪ್ರಶ್ನಿಸಿದರು.ಕಾಂಗ್ರೆಸ್‌‍ನವರು ನನ್ನ ನಿದ್ದೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ನಾನು ಚೆನ್ನಾಗಿ ನಿದ್ದೆ ಮಾಡುತ್ತಿದ್ದೇನೆ. ಅವರು ಸ್ಟಿಂಗ್‌ ಆಪರೇಷನ್‌ ಇ.ಡಿ ಭಯದಿಂದ ನಿದ್ದೆಗೆಟ್ಟಿರಬೇಕು ಎಂದು ಹೇಳಿದರು.

ಸಾಮಾಜಿಕ ಜಾಲತಾಣದ ಸಿಬ್ಬಂದಿಯನ್ನು ಹೆದರಿಸಿ, ಬೆದರಿಸಿ ಹೇಳಿಕೆ ಪಡೆದು ಕುಮಾರಸ್ವಾಮಿಯವರನ್ನು ಸಿಲುಕಿಸಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಹೆಣ್ಣುಮಗಳೊಬ್ಬಳ ಕೈಯಲ್ಲಿ ದೂರು ಪಡೆದು ಮಾಜಿ ಸಚಿವ ರೇವಣ್ಣ ಅವರನ್ನು ಜೈಲಿಗೆ ಕಳುಹಿಸಿದ ರೀತಿ ಅಂದುಕೊಂಡಿದ್ದರೆ ಅದು ನಿಮ ಭ್ರಮೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳಲ್ಲಿ ಪ್ರಸಾರಕ್ಕೆ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ಪಡೆಯಲು ಎಲ್ಲಾ ವಿಚಾರವನ್ನೂ ಅವರು ಗೊತ್ತಿಲ್ಲದೆ ಉಲ್ಲೇಖಿಸಿದ್ದಾರೆ. ಏಕೆ ತಡೆಯಾಜ್ಞೆ ತರುತ್ತೀರಿ, ಧೈರ್ಯವಾಗಿ ಎದುರಿಸಿ ಎಂದು ಹೇಳಿದ್ದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಹನಿಟ್ರ್ಯಾಪ್‌ ವಿಚಾರದ ಮಾಹಿತಿ ಅವರಿಗೆ ಗೊತ್ತಿತ್ತು. ಆದರೂ ಮಾಧ್ಯಮದ ಸೋಗು ಹಾಕಿಕೊಂಡಿರುವ ವ್ಯಕ್ತಿಯ ಮನೆ ಹಾಗೂ ಕಾರ್ಯಕ್ರಮಗಳಿಗೆ 2011 ರಿಂದ 2025 ರವರೆಗೆ ಎಷ್ಟು ಬಾರಿ ಸಿದ್ದರಾಮಯ್ಯ ಹೋಗಿದ್ದರು? ಏಕೆ ಹೋಗಿದ್ದರು? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ ಮೇಲೆ ಬಂದಿರುವ ಆರೋಪಗಳಿಗೆ ಅವರೇ ಪರಿಹಾರ ಕಂಡುಕೊಳ್ಳಬೇಕು ಎಂದ ಅವರು, ರಾಜ್ಯದ ಅಕ್ರಮಗಳ ವಿರುದ್ಧ ಹೋರಾಟ ಮಾಡುತ್ತಿರುವುದರಿಂದ ಅದನ್ನು ಹತ್ತಿಕ್ಕಲು ನನ್ನ ದನಿ ಅಡಗಿಸಲು ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನನಗೆ ದನಿ ಕೊಟ್ಟಿರುವುದು ನಾಡಿನ ಜನರು ಹಾಗೂ ಪಕ್ಷದ ಕಾರ್ಯಕರ್ತರು. ಅದನ್ನು ಅಡಗಿಸಲು ಆಗುವುದಿಲ್ಲ. ಭವಿಷ್ಯದಲ್ಲಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌‍ ನಡುವೆಯೇ ಹೋರಾಟ ನಡೆಯಲಿದೆ ಎಂದರು.

ಯಾರು ಏನೇ ಮಾಡಿದರೂ ಮೇಲಿರುವ ದೇವರು ನೋಡುತ್ತಿರುತ್ತಾನೆ. ಆ ದೇವರೇ ಅಂತಿಮ ತೀರ್ಪನ್ನು ನೀಡುತ್ತಾನೆ ಎಂದು ಮಾರ್ಮಿಕವಾಗಿ ನುಡಿದರು.ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಮಾಜಿ ಶಾಸಕರಾದ ಎ.ಮಂಜುನಾಥ್‌, ರಮೇಶ್‌ಗೌಡ, ಸುರೇಶ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
spot_img

Latest News