ಬೆಂಗಳೂರು,ಫೆ.24-ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕೆಂದು ಒತ್ತಾಯಿಸಿ ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆ ವೇಳೆ ಯುವ ಸಮುದಾ ಯವನ್ನು ನಿರ್ಲಕ್ಷಿಸಿದರೆ ಜೋಕೆ! ಎಂದು ಎಚ್ಚರಿಕೆ ಸಂದೇಶವನ್ನು ಸರ್ಕಾರಕ್ಕೆ ರವಾನಿಸ ಲಾಯಿತು.
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳು ಆಗಮಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಉಪನಾಯಕ ಅರವಿಂದ ಬೆಲ್ಲದ್, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಬಿಜೆಪಿ ನಾಯಕರು ಪ್ರತಿಭಟನೆಗೆ ಬೆಂಬಲ ನೀಡಿದರು. ನಗರದ ಶ್ರೀನಗರ ವೃತ್ತದಿಂದ ಆರಂಭವಾದ ಪ್ರತಿಭಟನೆ ಮಧ್ಯಭಾಗದಲ್ಲಿ ಹಾದುಬರುತ್ತಿದ್ದಂತೆ ಅವರನ್ನು ಡೆಯಲು ಯತ್ನಿಸಿದಾಗ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ತಳ್ಳಾಟ, ನೂಕಾಟ, ಆರೋಪ-ಪ್ರತ್ಯಾರೋಪಗಳು ನಡೆದವು.
ಧಾರವಾಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಸ್ಥಳಕ್ಕೆ ಬಂದು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮನವೊಲಿಸಲು ಹರಸಾಹಸಪಟ್ಟರು. ಒಂದು ಹಂತದಲ್ಲಿ ತಾಳೆ ಕಳೆದುಕೊಂಡ ವಿದ್ಯಾರ್ಥಿಗಳು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಜೊತೆ ಭಾರೀ ಮಾತಿನ ಚಕಮಕಿ ನಡೆಸಿ ವಿದ್ಯಾರ್ಥಿಗಳನ್ನು ಬಂಧಿಸಿದರೆ ಸುಮನಿರುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು. ಈ ಹಂತದಲ್ಲಿ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಸೇರಿದಂತೆ ಕೆಲವು ವಿದ್ಯಾರ್ಥಿಗಳನ್ನು ಬಂಧಿಸಲು ಮುಂದಾದಾಗ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಸಾವಿರಾರು ವಿದ್ಯಾರ್ಥಿಗಳು ಜಮಾವಣೆಗೊಂಡಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.
ಈ ಸಂದರ್ಭದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪಿಎಸ್‌ಐ ಸುನೀಲ್ ಅವರನ್ನು ತಲ್ಲಾಳಿಡಿದ್ದರಿಂದ ಅವರಿಗೆ ಸಣ್ಣಪುಟ್ಟ ಗಾಯಗಳಾದವು. ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಮನವೊಲಿಸಲು ಯತ್ನಿಸಿದ ಘಟನೆಯೂ ನಡೆಯಿತು.
ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಗಂಟೆಗಟ್ಟಲೇ ಸಂಚಾರ ದಟ್ಟನೆ ಉಂಟಾಗಿತ್ತು. ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಗಂಟೆಗಟ್ಟಲೇ ಸಂಚಾರ ದಟ್ಟನೆ ಉಂಟಾಗಿತ್ತು.ರಾಜ್ಯದಲ್ಲಿ ಒಟ್ಟು 2.84 ಲಕ್ಷ ಹುದ್ದೆಗಳು ಖಾಲಿ ಇದ್ದು, ರಾಜ್ಯ ಆರ್ಥಿಕ ಇಲಾಖೆಯಲ್ಲಿನ 9,536 ಹುದ್ದೆಗಳು ಸೇರಿದಂತೆ ಎಲ್ಲ ಇಲಾಖೆಗಳಲ್ಲೂ ಹುದ್ದೆಗಳು ಖಾಲಿ ಇವೆ.
ಹೀಗಿರುವಾಗ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಮತ್ತೊಂದು ಹೋರಾಟಕ್ಕೆ ಕರೆ ನೀಡಲಾಗಿತ್ತು. ಸುಮಾರು 30 ಸಾವಿರ ಉದ್ಯೋಗಾಕಾಂಕ್ಷಿಗಳು ಧರಣಿಗಿಳಿದಿದ್ದರು.ರಾಜ್ಯ ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲಿ ಅನೇಕ ವರ್ಷಗಳಿಂದ ನೇಮಕಾತಿಯೇ ಆಗಿಲ್ಲ. ಸರ್ಕಾರ ನೇಮಕಾತಿ ಮಾಡಿಕೊಂಡು ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಮೂಲಕ ನಿರುದ್ಯೋಗವನ್ನು ಹೋಗಲಾಡಿಸಬೇಕು ಎಂಬ ಬೇಡಿಕೆ ಮುಂದಿಟ್ಟರು.
ಪಿಎಸ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಅನೇಕ ವರ್ಷಗಳಿಂದ ಭರ್ತಿ ಮಾಡಿಕೊಂಡಿಲ್ಲ. ಕೂಡಲೇ ರಾಜ್ಯ ಸರ್ಕಾರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಬೇಕು ಮತ್ತು ಸ್ಪರ್ಧಾತಕ ಪರೀಕ್ಷೆಗಳ ನ್ಯಾಯಯುತ ವಯೋಮಿತಿ ಹೆಚ್ಚಿಸುವಂತೆ ಆಗ್ರಹಿಸುತ್ತಲೇ ವಯೋಮಿತಿ ಹೆಚ್ಚಳ ಮಾಡಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸುಮಾರು 3000ಕ್ಕೂ ಅಧಿಕ ಅಭ್ಯರ್ಥಿಗಳು ಸಪ್ತಾಪುರ, ಶ್ರೀನಗರ, ಕರ್ನಾಟಕ ಕಾಲೇಜು ಮೂಲಕ ಜ್ಯುಬಿಲಿ ವೃತ್ತದಲ್ಲಿ ಸಂಗಮವಾಗಿ ರಸ್ತೆ ಬಂದ್ ಮಾಡಿ ಧರಣಿ ನಡೆಸಿದರು.
ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತಕ ತರಬೇತಿ ಸಂಸ್ಥೆಗಳು ದೀರ್ಘಕಾಲದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಅನೇಕ ಇಲಾಖೆಗಳ ನೇಮಕಾತಿ ನಡೆಯದ ಕಾರಣ ಅಭ್ಯರ್ಥಿಗಳು ವಯೋಮಿತಿ ಮೀರಿದ್ದಾರೆ. ನಾಲ್ಕೈದು ವರ್ಷಗಳಿಂದ ಕಾನ್‌ಸ್ಟೇಬಲ್, ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿದೆ.
ಏಳೆಂಟು ವರ್ಷಗಳಿಂದ ಎಫ್‌ಡಿಎ, ಎಸ್‌ಡಿಎ ಹುದ್ದೆಗಳ ನೇಮಕಾತಿ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಕನಿಷ್ಠ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಿ ತಕ್ಷಣವೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂದು ಆಗ್ರಹಿಸಲಾಯಿತು.
ರೊಚ್ಚಿಗೆದ್ದ ವಿದ್ಯಾರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ್, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಭಾವಚಿತ್ರಗಳನ್ನು ರಸ್ತೆ ಮಧ್ಯೆಯೇ ಧರಣಿ ಕುಳಿತು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಪೊಲೀಸರ ಅನುಮತಿಯನ್ನು ನಿರಾಕರಿಸಿ ಶ್ರೀನಗರ ವೃತ್ತದಿಂದ ವಿಚಿಗನ್ ಕಾಂಪೌಂಡ್ ನವರೆಗೆ ಪ್ರತಿಭಟನೆ ನಡೆಸಲು ಮುಂದಾದಾಗ ಭಾರೀ ನೂಕಾಟ ಉಂಟಾಯಿತು.
ಬೇಕೇ… ಬೇಕು… ನ್ಯಾಯ ಬೇಕು… ಉದ್ಯೋಗ ಕೊಡಿ. ಸರ್ಕಾರಿ ಉದ್ಯೋಗ ಕೊಡಿ ಸಾರ್ ಎಂದು ಕೈಯಲ್ಲಿ ಭಿತ್ತಿಪತ್ರ ಹಿಡಿದಿದ್ದ ವಿದ್ಯಾರ್ಥಿಗಳಿಗೆ ಪೊಲೀಸರು ಎಷ್ಟೇ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಬಂದು ಮನವಿ ಪತ್ರವನ್ನು ಸ್ವೀಕರಿಸಬೇಕು. ಇಲ್ಲದಿದ್ದರೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ರಸ್ತೆ ಮಧ್ಯೆಯೇ ಕೂತು ಪ್ರತಿಭಟನೆ ನಡೆಸಿದರು.ಜತೆಗೆ ಕೆಎಎಸ್ ಅಧಿಸೂಚನೆಯಲ್ಲಿ ಕಂಡುಬಂದಿರುವ ಕನ್ನಡ ಅನುವಾದದ ತಪ್ಪುಗಳನ್ನು ಪರಿಶೀಲಿಸಿ, ಅಧಿಸೂಚನೆ ರದ್ದುಪಡಿಸುವ ಅಗತ್ಯವಿದೆ ಎಂದು ಆಗ್ರಹಿಸಿದರು.
