ಬೆಂಗಳೂರು, ಜ.31- ನಿಗೂಢವಾಗಿರುವ ಉದ್ಯಮಿ ಸಿ.ಜೆ.ರಾಯ್ ಅವರ ಆತಹತ್ಯೆ ಪ್ರಕರಣದಲ್ಲಿ ನಗರದ ಅಶೋಕಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಕುಟುಂಬದ ಸದಸ್ಯರಿಂದ ಮಾಹಿತಿ ಕಲೆ ಹಾಕಿದ್ದಾರೆ.ದುಬೈನಿಂದ ಆಗಮಿಸಿದ್ದ ಪುತ್ರ ಇಂದು ಬೆಳಗ್ಗೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ಅಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ರಾಯ್ ಅವರ ಬಗ್ಗೆ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡರು. ರಾಯ್ ಅವರ ಪತ್ನಿ ಹಾಗೂ ಮಕ್ಕಳು ಆಸ್ಪತ್ರೆಗೆ ತೆರಳಿ ಮೃತದೇಹವನ್ನು ನೋಡಿದ್ದಾರೆ. ಬೌರಿಂಗ್ ಆಸ್ಪತ್ರೆಯ ಬಳಿ ರಾಯ್ ಹಿತೈಷಿಗಳು, ಬಂಧುಗಳು ಜಮಾಯಿಸಿದ್ದರು.
ರಾಯ್ ಸಾವಿನ ಕಾರಣ ಇನ್ನೂ ನಿಗೂಢವಾಗಿದೆ. ಡಿಸೆಂಬರ್ ನಲ್ಲಿ ನಡೆದಿದ್ದ ಆದಾಯ ತೆರಿಗೆ ದಾಳಿಗೆ, ಪೂರಕವಾದ ಸ್ಪಷ್ಟನೆ ಪಡೆದುಕೊಳ್ಳಲು ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿದ್ದರು. ಆದಾಯ ತೆರಿಗೆ ದಾಳಿ ಒತ್ತಡ ಎದೆಗೆ ಗುಂಡು ಹೊಡೆದುಕೊಳ್ಳುವಷ್ಟು ತೀವ್ರವಾಗಿರಲು ಸಾಧ್ಯವೇ ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ.
ರಾಯ್ ಅವರ ಸಹೋದರ, ತಮ ಅಣ್ಣನಿಗೆ ಸಾಲವಾಗಲಿ ಬೇರೆ ಯಾವುದೇ ಒತ್ತಡ ಇರಲಿಲ್ಲ. ಶತ್ರುಗಳು ಇರಲಿಲ್ಲ. ಆದಾಯ ತೆರಿಗೆ ದಾಳಿಯಿಂದ ಕಿರುಕುಳಕ್ಕೆ ಒಳಗಾಗಿದ್ದರು ಎಂದು ನಿನ್ನೆ ಹೇಳಿದ ಬೆನ್ನಲ್ಲೇ ಪ್ರಕರಣ ಬೇರೆ ತಿರುವು ಪಡೆದುಕೊಂಡಿದೆ.
ಆದರೆ ಸಾವಿರಾರು ಕೋಟಿ ರೂಪಾಯಿಗಳ ಆಸ್ತಿಯ ಒಡೆಯ ಸಿ.ಜೆ.ರಾಯ್ ಗೆ ಆದಾಯ ತೆರಿಗೆ ದಾಳಿಗೆ ಬೆದರಿ ಜೀವ ಕಳೆದುಕೊಳ್ಳುವ ಅನಿವಾರ್ಯತೆ ಇತ್ತೇ ಎಂಬ ಪ್ರಶ್ನೆ ಮೂಡಿದೆ. ಆದಾಯ ತೆರಿಗೆ ಅಧಿಕಾರಿಗಳು ನಿನ್ನೆ ರಾಯ್ ಕಚೇರಿಯಲ್ಲಿದ್ದ ಲಾಕರ್ ಒಂದನ್ನು ತೆರೆಯಲು ಸೂಚಿಸಿದ್ದರು ಎಂದು ಹೇಳಲಾಗಿದೆ. ಅದಕ್ಕೆ ಒಪ್ಪದ ರಾಯ್ ಐದು ನಿಮಿಷ ಸಮಯ ಕೊಡಿ ಎಂದು ಹೇಳಿ ತಮ ಕೊಠಡಿಗೆ ಹೋಗಿದ್ದರು, ಅಲ್ಲಿ ತನ್ನ ತಾಯಿಗೆ ಕರೆ ಮಾಡಬೇಕು ಎಂದು ಹೇಳಿ ಕಾನ್ಫಿಡೆಂಟ್ ಗ್ರೂಪ್ ನ ಬೆಂಗಳೂರು ವಲಯದ ವ್ಯವಸ್ಥಾಪಕ ನಿರ್ದೇಶಕ ಜೋಸೆಫ್ ರನ್ನು ಹೊರ ಕಳುಹಿಸಿದ್ದರು. ಯಾರನ್ನೂ ಒಳಗೆ ಬಿಡದಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದರು ಎಂದು ಹೇಳಿಕೆಗಳು ದಾಖಲಾಗಿವೆ.
ಐಶರಾಮಿ ಜೀವನ, ದೇಶ ವಿದೇಶದಲ್ಲಿ ಲಾಭದಲ್ಲೇ ನಡೆಯುತ್ತಿದ್ದ ವ್ಯವಹಾರ, ಐಶರಾಮಿ ವಿಲ್ಲಾ, ಹೈಟೆಕ್ ಕಾರುಗಳು, ಭಾರೀ ಜನಪ್ರಿಯತೆ ಎಲ್ಲವೂ ಇದ್ದ ಉದ್ಯಮಿ ರಾಯ್ ಏಕಾಏಕಿ ತನ್ನದೇ ಪಿಸ್ತೂಲಿನಿಂದ ಎದೆ ಸೀಳಿಕೊಂಡಿದ್ದೇಕೆ ಎಂಬ ಪ್ರಶ್ನೆಗಳು ತನಿಖೆ ನಡೆಸುತ್ತಿರುವ ಪೊಲೀಸರ ತಲೆ ಕೆಡಿಸುತ್ತಿವೆ.
ಆದಾಯ ತೆರಿಗೆ ದಾಳಿಯೇ ಕಾರಣವಾಯಿತೆ ಅಥವಾ ಇತರೇ ಬಾಹ್ಯ ಕಾರಣಗಳು ಇರಬಹುದೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತಮ ಕೊಠಡಿಗೆ ಹೋಗಿದ್ದ ರಾಯ್ ಅಲ್ಲಿ 15 ನಿಮಿಷ ಕರೆ ಮಾಡಿದ್ದು ಯಾರಿಗೆ, ಯಾರೊಂದಿಗೆ ಮಾತನಾಡಿದ್ದರು ಎಂಬ ಅನುಮಾನಗಳು ಇವೆ.
ಕಾನ್ಫಿಡೆಂಟ್ ಗ್ರೂಪ್ ನಷ್ಟದಲ್ಲಿತ್ತು, ಆ ಒತ್ತಡಕ್ಕೆ ಒಳಗಾಗಿ ಆತಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿತ್ತು. ಆದರೆ ಸಿ.ಜೆ.ರಾಯ್ ಅವರ ಸಹೋದರ ಹೇಳಿಕೆ ನೀಡಿದ್ದು, ವ್ಯಾಪಾರದಲ್ಲಿ ನಷ್ಟವಾಗಿರಲಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಹಾಗಿದ್ದರೆ ಸಾವಿಗೆ ನಿಖರ ಕಾರಣವೇನು ಎಂಬ ಪ್ರಶ್ನೆಗಳು ಕಾಡುತ್ತಿವೆ. ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದಿರುವ ಪೊಲೀಸರು, ವ್ಯಕ್ತಿಗತ ನಡವಳಿಕೆ ಹಾಗೂ ಕೌಟುಂಬಿಕ ವರ್ತನೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
