ಹಾಸನ,ಮೇ 15- ಶೃಂಗೇರಿ ಶಾಸಕ ಸ್ಥಾನದ ವಿವಾದಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದ ಬೆನ್ನಲ್ಲೇ ಶಾಸಕ ಟಿ.ಡಿ. ರಾಜೇಗೌಡ ಅವರು ಜಿಲ್ಲೆಯ ಶಕ್ತಿ ದೇವತೆ ಪುರದಮ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ತೀರಿಸಿದರು.
ಪುರದಮಾ ನನ್ನ ಉಳಿಸಿಬಿಟ್ಟೆ ಎಂದು ನಿಟ್ಟುಸಿರು ಬಿಡುತ್ತ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಶೃಂಗೇರಿ ಕ್ಷೇತ್ರದ ಶಾಸಕ ಸ್ಥಾನ ಹಾವು-ಏಣಿ ಆಟದಂತೆ ಕಾಂಗ್ರೆಸ್, ಬಿಜೆಪಿ, ಮತ್ತೆ ಕಾಂಗ್ರೆಸ್ ಪಾಲಾಗಿದ್ದು ಇಡೀ ದೇಶದ ಗಮನ ಸೆಳೆದಿತ್ತು. ಚುನಾವಣಾ ಫಲಿತಾಂಶ, ಹೈಕೋರ್ಟ್ ತೀರ್ಪು, ಬಳಿಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಪ್ರಕರಣ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಇದೀಗ ತೀರ್ಪು ರಾಜೇಗೌಡ ಅವರ ಪರ ಬಂದಿರುವ ಹಿನ್ನೆಲೆಯಲ್ಲಿ ದೇವರಿಗೆ ಹರಕೆ ತೀರಿಸಿದ್ದಾರೆ.
ದೆಹಲಿಗೆ ಹೊರಡುವ ಮುನ್ನ ಹರಕೆ :
ಸುಪ್ರೀಂ ಕೋರ್ಟ್‌ನಲ್ಲಿ ಅಂತಿಮ ವಿಚಾರಣೆಗೂ ಮುನ್ನ ರಾಜೇಗೌಡ ಅವರು ಪುರದಮ ಕ್ಷೇತ್ರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ದೆಹಲಿಗೆ ತೆರಳಿದ್ದರು. ನ್ಯಾಯ ಸಿಕ್ಕರೆ ಮತ್ತೆ ನಿನ್ನ ಸನ್ನಿಧಿಗೆ ಬಂದು ಹರಕೆ ತೀರಿಸುತ್ತೇನೆ ಎಂದು ದೇವಿಗೆ ಹರಕೆ ಹೊತ್ತಿದ್ದರು.ಬಳಿಕ ಸುಪ್ರೀಂ ಕೋರ್ಟ್ ರಾಜೇಗೌಡರ ಪರ ತೀರ್ಪು ನೀಡಿ ಶಾಸಕ ಸ್ಥಾನವನ್ನು ಎತ್ತಿಹಿಡಿಯಿತು. ತೀರ್ಪು ಹೊರಬಿದ್ದ ತಕ್ಷಣ ಬುಧವಾರ ರಾತ್ರಿಯೇ ಬೆಂಗಳೂರಿಗೆ ವಾಪಸಾದ ರಾಜೇಗೌಡ, ನಿನ್ನೆ ಬೆಳಿಗ್ಗೆ ನೇರವಾಗಿ ಕ್ಷೇತ್ರಕ್ಕೆ ಆಗಮಿಸಿದರು.
ಕ್ಷೇತ್ರಕ್ಕೆ ಕಾಲಿಡುವ ಮುನ್ನವೇ ಪತ್ನಿ, ಪುತ್ರ ರಾಜ್ ದೇವ್ ಹಾಗೂ ಸೊಸೆಯೊಂದಿಗೆ ಪುರದಮ ದೇವಸ್ಥಾನಕ್ಕೆ ತೆರಳಿದ ಶಾಸಕರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.
ದೇವಸ್ಥಾನದ ಅರ್ಚಕರು ಪೂರ್ಣಕುಂಭ ಸ್ವಾಗತ ನೀಡಿ ಆಶೀರ್ವದಿಸಿದರು. ಕಳೆದ ಕೆಲವು ತಿಂಗಳುಗಳಿಂದ ಅನುಭವಿಸಿದ ಮಾನಸಿಕ ಒತ್ತಡ, ರಾಜಕೀಯ ಏರಿಳಿತಗಳ ನಡುವೆ ಪುರದಮನ ಮೇಲಿನ ನಂಬಿಕೆಯೇ ನನಗೆ ಶಕ್ತಿ ನೀಡಿತ್ತು. ಇಂದು ನ್ಯಾಯ ಸಿಕ್ಕಿದೆ.
ಮೊದಲು ದೇವಿಗೆ ನಮಿಸಿ ನಂತರವೇ ಕ್ಷೇತ್ರದ ಜನರ ಬಳಿ ಹೋಗುತ್ತೇನೆ ಎಂದು ಶಾಸಕರು ಈ ಸಂದರ್ಭದಲ್ಲಿ ಭಾವುಕರಾಗಿ ನುಡಿದರು. ತೀರ್ಪಿನ ಬಳಿಕ ಶೃಂಗೇರಿ ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದು, ಶಾಸಕರನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಿದ್ಧತೆ ನಡೆಸಿದ್ದಾರೆ.
