Homeರಾಜ್ಯಖಮೇನಿ ಹತ್ಯೆ ವಿರುದ್ಧ ಪ್ರತಿಭಟಿಸಿದವರ ಮೇಲೆ ನಿಗಾ ವಹಿಸುವ ಸ್ಥಿತಿ ಸದ್ಯಕ್ಕಿಲ್ಲ : ಪರಮೇಶ್ವರ್‌

ಖಮೇನಿ ಹತ್ಯೆ ವಿರುದ್ಧ ಪ್ರತಿಭಟಿಸಿದವರ ಮೇಲೆ ನಿಗಾ ವಹಿಸುವ ಸ್ಥಿತಿ ಸದ್ಯಕ್ಕಿಲ್ಲ : ಪರಮೇಶ್ವರ್‌

There is no situation to monitor those protesting against Khamenei's assassination: Parameshwar

ಬೆಂಗಳೂರು, ಮಾ.3- ಇರಾನ್‌ ಅಧ್ಯಕ್ಷ ಆಯಾತೊಲ್ಲಾ ಆಲಿ ಖಮೇನಿ ಹತ್ಯೆಯನ್ನು ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ನಿಗಾ ವಹಿಸುವ ಪರಿಸ್ಥಿತಿ ಸದ್ಯಕ್ಕೆ ಕಂಡು ಬಂದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್‌ನ ಅಧ್ಯಕ್ಷ ಖಮೇನಿಯವರ ಹತ್ಯೆಯ ಬಳಿಕ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ನಿಗಾ ಇಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಖ್ಯ ಕಾರ್ಯದರ್ಶಿಯವರಿಗೆ ಮಾಹಿತಿ ಬಂದಿರಬಹುದು. ಪೊಲೀಸ್‌‍ ಮಹಾನಿರ್ದೇಶಕರು ಇಲ್ಲಿಯವರೆಗೂ ಅಂತಹ ವಿಚಾರವನ್ನು ನಮ ಗಮನಕ್ಕೆ ತಂದಿಲ್ಲ ಎಂದರು.

ಇಂತಹ ವಿಚಾರಗಳು ರಾಜನೀತಿಗಳಾಗಿವೆ. ಒಂದೊಂದು ಸರ್ಕಾರಕ್ಕೆ ತನ್ನದೇ ಆದ ನೀತಿಗಳಿರುತ್ತವೆ. ಕಾಂಗ್ರೆಸ್‌‍ ಸರ್ಕಾರ ಇದ್ದಾಗ ಒಂದು ರೀತಿಯ ವಿದೇಶಾಂಗ ನೀತಿಯಿತ್ತು. ಈಗ ಬಿಜೆಪಿ ಸರ್ಕಾರ ಇದೆ. ಅವರದು ಒಂದು ರೀತಿಯ ವಿದೇಶಾಂಗ ನೀತಿ ಇರುತ್ತದೆ. ಅದರ ಆಧಾರದ ಮೇಲೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡುತ್ತದೆ. ಸದ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡುವಂತಹ ಸನ್ನಿವೇಶಗಳು ಕಂಡು ಬಂದಿಲ್ಲ, ಒಂದು ವೇಳೆ ಕಂಡು ಬಂದರೆ ಸಂಬಂಧ ಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಬೆಂಗಳೂರಿನಲ್ಲಿ ಫ್ರೀಡಂಪಾರ್ಕ್‌ ಹೊರತು ಪಡಿಸಿ ಬೇರೆ ಕಡೆ ಪ್ರತಿಭಟನೆ ನಡೆಸಿರುವುದು ಹೈಕೋರ್ಟಿನ ತೀರ್ಪಿನ ಉಲ್ಲಂಘನೆಯಾಗಿದೆ. ಎಲ್ಲರಿಗೂ ನಿಯಮ ಒಂದೆ. ಹೀಗಾಗಿ ಖಮೇನಿ ಹತ್ಯೆಯ ಬಳಿಕ ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮ ಕೈ ಗೊಳ್ಳುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ದುಬೈನಲ್ಲಿ ಕನ್ನಡಿಗರೊಬ್ಬರ ಸಾವಿನ ಬಗ್ಗೆ ನನಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಸ್ನೇಹಿತರು ಹಾಗೂ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಮಾತ್ರ ನೋಡಿದ್ದೇವೆ. ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.

ಮುಖ್ಯ ಕಾರ್ಯದರ್ಶಿಯವರು ಮತ್ತು ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್‌‍ ಕರೆ ತರಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ವಿಧಾನಪರಿಷತ್‌ ಎಸ್‌‍.ಎಲ್‌.ಭೋಜೇಗೌಡ ಅವರು ದಕ್ಷಿಣ ಆಫ್ರಿಕಾಗೆ ಪ್ರವಾಸಕ್ಕೆ ಹೋಗಿದ್ದರು, ಅಲ್ಲಿಂದ ವಾಪಸ್‌‍ ಬರುವಾಗ ದುಬೈನಲ್ಲಿ ಕುಟುಂಬ ಸಮೇತರಾಗಿ ಸಿಲುಕಿದ್ದರು. ಅವರೊಂದಿಗೆ ನಾನು ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರು ಆತಂಕದಲ್ಲಿರುವುದು ಕಂಡು ಬಂದಿತ್ತು. ನಮ ಪಕ್ಕದಲ್ಲೇ ಮಿಸೈಲ್‌ ಬಿದ್ದು ಒಬ್ಬರು ಸಾವನ್ನಪ್ಪಿದ್ದರು, ನಮನ್ನೆಲ್ಲಾ ಬಂಕರ್‌ನಲ್ಲಿ ಸುರಕ್ಷಿತವಾಗಿಟ್ಟಿದ್ದರು ಎಂದು ಅವರು ನನಗೆ ವಿವರಿಸಿದರು.

ಆಡಳಿತ ಪಕ್ಷದ ಶಾಸಕರ ಮೇಲೆ ನಿಗಾ ಇರಿಸಲಾಗುತ್ತಿದೆ. ಫೋನ್‌ ಟ್ಯಾಪಿಂಗ್‌ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ಸರ್ಕಾರ ನಡೆಸುತ್ತಿರುವವರು ನಾವಾ? ಅವರಾ? ನಮಗೆ ಹೆಚ್ಚಿನ ಮಾಹಿತಿ ಇರುತ್ತದೆ. ಫೋನ್‌ಟ್ಯಾಪಿಂಗ್‌ ಆರೋಪ ಮಾಡಿರುವ ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ.

ರಾಜ್ಯದಲ್ಲಿ ಯಾರ ಫೋನ್‌ಗಳನ್ನೂ ಟ್ಯಾಪ್‌ ಮಾಡುತ್ತಿಲ್ಲ. ಗುಪ್ತದಳದಲ್ಲಿ ರಾಜಕೀಯ ಬೆಳವಣಿಗೆಗಳ ಮೇಲೆ ನಿಗಾ ವಹಿಸಲು ಪ್ರತ್ಯೇಕವಾದ ಘಟಕವೇ ಇದೆ. ಅದು ತನ್ನ ಕೆಲಸವನ್ನು ನಿಭಾಯಿಸುತ್ತದೆ. ಪ್ರತಿದಿನವೂ ಮುಖ್ಯಮಂತ್ರಿಯವರಿಗೆ ಮಾಹಿತಿಯನ್ನು ನೀಡುತ್ತದೆ. ಅದಕ್ಕಾಗಿ ಫೋನ್‌ ಟ್ಯಾಪಿಂಗ್‌ ಮಾಡುವ ಅಗತ್ಯ ಇಲ್ಲ. ಎಲ್ಲಾ ಮುಖ್ಯಮಂತ್ರಿಗಳು ರಾಜಕೀಯ ಬೆಳವಣಿಗೆಗಳ ಮೇಲೆ ನಿಗಾ ವಹಿಸುವ ಕೆಲಸ ಮಾಡಿಕೊಂಡೇ ಬಂದಿದ್ದಾರೆ ಎಂದರು.

ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅಗತ್ಯವಿಲ್ಲ. ಹೈಕಮಾಂಡ್‌ ನಿರ್ಧಾರಕ್ಕೆ ಬಿಟ್ಟು ನಾವು ಸುಮನಿರುವುದು ಉತ್ತಮ ಎಂದರು.ಮಲ್ಲಿಕಾರ್ಜುನ ಮುತ್ಯ ಅವರ ವಿರುದ್ಧ ದಾಖಲಾಗಿರುವ ಪೋಕ್ಸೊ ಕಾಯ್ದೆಯಡಿಯ ಪ್ರಕರಣವನ್ನು ಹಿಂಪಡೆಯುವಂತೆ ಪ್ರತಿಭಟನೆ ಮಾಡುವುದು ಒಂದು ಮಾರ್ಗ. ಆದರೆ ನಮಗೆ ಕಾನೂನು ಪ್ರಕಾರ ನಡೆದುಕೊಳ್ಳುವ ಅಗತ್ಯ ಇದೆ. ಪೊಲೀಸರು ನಿಯಾಮಾನುಸಾರವೇ ಕ್ರಮ ಕೈಗೊಳ್ಳುತ್ತಾರೆ ಎಂದರು.

ಒಳ ಮೀಸಲಾತಿಯನ್ನು ಜಾರಿಗೊಳಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಬೇಕು ಎಂಬ ಬೇಡಿಕೆಯ ಬಗ್ಗೆ ಸಂಪುಟದಲ್ಲಿ ಸಚಿವರು ಶಾಸಕರ ಜೊತೆ ಸುದೀರ್ಘ ಚರ್ಚೆಗಳಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮತ್ತಷ್ಟು ಪರಿಷ್ಕರಣೆಯ ಅಗತ್ಯ ಇದ್ದರೆ ಅದರ ಬಗ್ಗೆ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ ಎಂದರು.

RELATED ARTICLES

Latest News