Homeರಾಜ್ಯಕುಟುಂಬದೊಂದಿಗೆ ಎಸ್‌‍ಐಆರ್‌ ಪ್ರಕ್ರಿಯೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಭಾಗಿ

ಕುಟುಂಬದೊಂದಿಗೆ ಎಸ್‌‍ಐಆರ್‌ ಪ್ರಕ್ರಿಯೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಭಾಗಿ

Union Minister Kumaraswamy participates in SIR process with family

ಬಿಡದಿ,ಜು.5-ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಭಾಗವಾಗಿ ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ತಮ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ಹಾಗೂ ಜೆಡಿಎಸ್‌‍ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮತ್ತು ನಿಖಿಲ್‌ ಅವರ ಧರ್ಮಪತ್ನಿ ರೇವತಿ ನಿಖಿಲ್‌ ಅವರು ಕೂಡ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಅಧಿಕಾರಿಗಳಿಗೆ ಅಗತ್ಯ ದಾಖಲೆ ಮತ್ತು ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಕೇತಗಾನಹಳ್ಳಿಯ ನನ್ನ ತೋಟದ ಮನೆಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ಕುಟುಂಬದೊಂದಿಗೆ ಪಾಲ್ಗೊಂಡು ಬಿಎಲ್‌ಓಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಮಾಹಿತಿ ನೀಡಲಾಯಿತು. ಈ ಪರಿಷ್ಕರಣೆ ಪಾರದರ್ಶಕವಾಗಿರಬೇಕು ಹಾಗೂ ನೈಜ ಮತದಾರರೆಲ್ಲರೂ ಮತದಾರರ ಪಟ್ಟಿಯಲ್ಲಿ ಉಳಿಯಲೇಬೇಕು ಎಂಬ ಆಶಯದೊಂದಿಗೆ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದೆ. ನಾಡಿನ ಪ್ರತಿಯೊಬ್ಬರೂ ಪ್ರಕ್ರಿಯೆಯಲ್ಲಿ ನಿಯಮಾನುಸಾರವಾಗಿ ತಪ್ಪದೇ ಪಾಲ್ಗೊಳ್ಳಬೇಕು. ಆ ಮೂಲಕ ಕೇಂದ್ರ ಚುನಾವಣಾ ಆಯೋಗ ಕೈಗೊಂಡಿರುವ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದು ಕೋರುತ್ತೇನೆ ಎಂದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ: ಕಾಂಗ್ರೆಸ್‌‍ ಪಕ್ಷ ರಾಜ್ಯದಲ್ಲಿ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡುತ್ತಿದೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಕೇಂದ್ರ ಚುನಾವಣಾ ಆಯೋಗದ ಆಶಯಗಳಿಗೆ ಎಳ್ಳುನೀರು ಬಿಟ್ಟು, ರಾಜ್ಯ ಸರ್ಕಾರವು ನೇರವಾಗಿ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಕುಮಕ್ಕು ನೀಡುತ್ತಿದೆ ಎಂದು ಅವರು ನೇರ ಆರೋಪ ಮಾಡಿದರು.

ಅನೇಕ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಎಸ್‌‍ಐಆರ್‌ ದುರ್ಬಳಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ಈ ಕೂಡಲೇ ಕೇಂದ್ರ ಚುನಾವಣಾ ಆಯೋಗವು ಮಧ್ಯಪ್ರವೇಶ ಮಾಡಬೇಕು. ಪಶ್ಚಿಮ ಬಂಗಾಳದಲ್ಲಿ ಮಾಡಿದಂತೆಯೇ ರಾಜ್ಯದಲ್ಲಿಯೂ ಎಸ್‌‍ಐಆರ್‌ ಉಸ್ತುವಾರಿಗೆ ಹೊರ ರಾಜ್ಯದ ಅಧಿಕಾರಿಯನ್ನು ನೇಮಕ ಮಾಡಬೇಕು. ತಪ್ಪು ಮಾಡಿದ ಜಿಲ್ಲಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದರು.

ಇಡೀ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ಚುನಾವಣಾ ಆಯೋಗದ ನಿಯಮಗಳಿಗೆ ಅನುಸಾರವಾಗಿ ನಡೆಸಬೇಕಾದ ಜಿಲ್ಲಾಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಅನೇಕರು ಸರ್ಕಾರದ ಮರ್ಜಿಗೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು. ಅಲ್ಲದೆ, ಈವರೆಗೂ ನಡೆಸಲಾಗಿರುವ ಸಮೀಕ್ಷೆಯನ್ನು ರದ್ದುಗೊಳಿಸಿ ಹೊಸದಾಗಿ ಸಮೀಕ್ಷೆಯನ್ನು ನಡೆಸಬೇಕು. ಈ ಬಗ್ಗೆ ಕೇಂದ್ರ ಚುನಾವಣಾ ಆಯುಕ್ತರಿಗೆ ಜೆಡಿಎಸ್‌‍ ಮತ್ತು ಬಿಜೆಪಿ ನಾಯಕರು ಸೇರಿ ದಾಖಲೆ ಸಮೇತ ದೂರು ನೀಡುತ್ತೇವೆ ಎಂದು ತಿಳಿಸಿದರು.

ಹೋರಾಟ ನಿಲ್ಲದು: ರೈತರ ಮುಂದೆ ಬಿಡದಿ ಟೌನ್‌ಶಿಪ್‌ ವಿಚಾರ ಚರ್ಚೆ ಮಾಡೋಣ ಎಂದರೆ ಮುಖ್ಯಮಂತ್ರಿ ಬರಲಿಲ್ಲ. ಆದರೆ ಇನ್ನೊಂದು ಕಡೆ ಟೆಂಟ್‌ ಹಾಕಿಸಿ ದೊಡ್ಡ ಡ್ರಾಮ ನಡೆಸಿದರು. ನೊಂದ ರೈತರ ಪರವಾಗಿ ನಾನು ಕಾನೂನು ಹೋರಾಟ ನಡೆಸುತ್ತೇನೆ. ನನ್ನ ಕೊನೆ ಉಸಿರು ಇರುವ ತನಕ ರೈತರ ಜತೆ ಇರುತ್ತೇನೆ. ಉಪನಗರ ಯೋಜನೆ ಭೂಮಿಯನ್ನೇ ಹೊಂದಿರದ ಕೆಲವರು ಅವರ ಟೆಂಟ್‌ನಲ್ಲಿ ಕೂತಿದ್ದರು ಎಂದು ಲೇವಡಿ ಮಾಡಿದರು.ಈ ಸಂದರ್ಭದಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್‌ ಉಪಸ್ಥಿತರಿದ್ದರು.

RELATED ARTICLES

Latest News