ತುಮಕೂರು,ಅ.7- ಕಳೆದ ಒಂದು ವಾರದಿಂದ ತರಕಾರಿ ಹಾಗೂ ಸೊಪ್ಪಿನ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಬೀನ್ಸ್ ಶತಕ ಭಾರಿಸಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.ಟೊಮ್ಯಾಟೊ, ಬೀನ್್ಸ, ಕ್ಯಾರೆಟ್, ಸೊಪ್ಪು ಸೇರಿದಂತೆ ಹಲವು ತರಕಾರಿಗಳ ಬೆಲೆ ಕಳೆದ ಒಂದು ವಾರದಿಂದ ಏರಿಕೆಯಾಗುತ್ತಿದ್ದು, ಅಡುಗೆ ಮನೆ ಬಜೆಟ್ ದುಪ್ಪಟ್ಟಾಗುತ್ತಿದೆ.
ರಾಜ್ಯದ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಬೆಳೆ ಮೇಲೆ ಪರಿಣಾಮ ಬೀರಿದ್ದು ಬೆಲೆ ಏರಿಕೆಗೆ ಕಾರಣವಾಗಿದೆ.ಇನ್ನೂ ಕೆಲವೆಡೆ ಬರದಿಂದ ಸಹ ನೀರಿನ ಕೊರತೆ ಉಂಟಾಗಿ ಉತ್ಪಾದನೆ ಕುಂಠಿತವಾಗಿ ಬೆಲೆ ಹೆಚ್ಚಳವಾಗಿದೆ.25 ದಿನಗಳ ಹಿಂದೆ ಇದ್ದ ಟೊಮ್ಯಾಟೊ ದರ ದಿಢೀರನೇ ಕೆಜಿಗೆ 50 ರೂ.ಗೆ ಏರಿಕೆಯಾಗಿದ್ದರೆ, ಬೀನ್ಸ್ ಕೂಡಾ 70 ರೂ.ಗಳಿಂದ 100 ರೂ.ವರೆಗೂ ಏರಿಕೆಯಾಗಿದೆ.
ಸೌತೆಕಾಯಿ 40-45 ರೂ., ಬೆಂಡೇಕಾಯಿ 50 ರೂ., ತೊಂಡೇಕಾಯಿ-40 ರೂ., ಮೈಸೂರು ಬದನೆಕಾಯಿ 50 ರೂ., ಕ್ಯಾಪ್ಸಿಕಂ 60 ರೂ., ಮೂಲಂಗಿ 50 ರೂ., ನವಿಲುಕೋಸು 50 ರೂ., ಬೀಟ್ರೋಟ್- 50 ರೂ., ಹೀರೇಕಾಯಿ 50 ರೂ.ಗಳಿಗೆ ಮಾರಾಟವಾಗುತ್ತಿದೆ. ಅದೇ ರೀತಿ ಮೆಂತ್ಯೆ ಸೊಪ್ಪು ಕಟ್ಟಿಗೆ 80 ರೂ., ದಂಟು 50 ರೂ., ಸಬ್ಬಕ್ಕಿ 60 ರೂ., ಪಾಲಾಕ್ 70 ರೂ., ನಾಟಿ ಕೊತ್ತಂಬರಿ ಸೊಪ್ಪು 100 ರೂ.ಗಳಿಗೆ ಏರಿಕೆಯಾಗಿದೆ.
ಕಣ್ಣೀರು ತರಿಸುತ್ತಿದೆ ಈರುಳ್ಳಿ ಬೆಲೆ :
ಕಳೆದ ಕೆಲವು ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರುತ್ತಲೇ ಇದೆ. ಗುಣಮಟ್ಟದ ಈರುಳ್ಳಿ ಕೆಜಿಗೆ 70 ರೂ.ಗಳಿಂದ 80 ರೂ.ಗೆ ಮಾರಾಟವಾಗುತ್ತಿದೆ. ಹೆಚ್ಚಾಗಿ ಈರುಳ್ಳಿ ಬೆಳೆಯುವ ಪ್ರದೇಶಗಳಾದ ಬಳ್ಳಾರಿ, ರಾಯಚೂರು, ಬಿಜಾಪುರ, ದಾವಣಗೆರೆ, ಹುಬ್ಬಳ್ಳಿ, ಧಾರವಾಡದಲ್ಲಿ ಮಳೆ ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಮಾಲು ಬಾರದಿರುವುದರಿಂದ ಬೆಲೆ ಹೆಚ್ಚಳವಾಗಿದೆ. ಮತ್ತೊಂದೆಡೆ ಮಹಾರಾಷ್ಟ್ರದಲ್ಲೂ ಸಹ ಇಳುವರಿ ಕುಂಠಿತವಾಗಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಪರಿಣಾಮ ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾಗಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿದ್ದು, ಬೆಳೆಹಾನಿ ಹಾಗೂ ಇಳುವರಿ ಕುಂಠಿತದಿಂದ ಬೆಲೆ ಏರಿಕೆಯಾಗಿದೆ. ಒಟ್ಟಾರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮಧ್ಯಮ ವರ್ಗದವರ ಜೀವನ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ.
