ಬೆಂಗಳೂರು,ಮಾ.4- ಮಧ್ಯಪ್ರಾಚ್ಯದಲ್ಲಿ ಇರಾನ್ ದೇಶದ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಸತತ ದಾಳಿಯ ಪರಿಣಾಮ ಕರ್ನಾಟಕದ ಆರ್ಥಿಕತೆಯ ಮೇಲೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆ ಇದೆ.
ಇರಾಕ್ ಮೇಲೆ ಇನ್ನು ನಾಲ್ಕು ವಾರಗಳ ಕಾಲ ದಾಳಿಯನ್ನು ಮುಂದುವರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದರಿಂದ ಸಹಜವಾಗಿ ಕರ್ನಾಟಕದ ಆರ್ಥಿಕ ಚಟುವಟಿಕೆಗಳ ಮೇಲೆ ದುಷ್ಟ ಪರಿಣಾಮ ಬೀರುವ ಸಂಭವವಿದೆ ಎಂದು ತಜ್ಞರು ಆತಂಕ ಹೊರ ಹಾಕಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಆರ್ಥಿಕ ಹೊಡೆತ ಬೀಳಲಿದ್ದು ದೈನಂದಿನ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರಬಹುದು. ಈ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದ್ದೇ ಆದರೆ, ಅದರ ಪರಿಣಾಮ ಕರ್ನಾಟಕದ ಆರ್ಥಿಕತೆಯ ಮೇಲೆ ನೇರವಾಗಿ ಬೀಳುವ ಸಂಭವವನ್ನು ತಳ್ಳಿಹಾಕುವಂತಿಲ್ಲ.
ಭಾರತವು ಕಚ್ಚಾ ತೈಲದ ಅಗತ್ಯದ ಸುಮಾರು ಶೇ.90 ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಅಲ್ಲದೆ ಶೇ.60-65 ರಷ್ಟು ಎಲ್‌ಪಿಜಿ ಬೇಡಿಕೆ ಹಾಗೂ ಶೇ.60ರಷ್ಟು ಎಲ್‌ಎನ್‌ಜಿ ಆಮದು ಮಾಡಿಕೊಳ್ಳುತ್ತದೆ. ತೈಲ ಆಮದನ್ನೇ ನೆಚ್ಚಿಕೊಂಡಿರುವುದರಿಂದ ಆಮದು ವೆಚ್ಚ ಹೆಚ್ಚಳವಾಗಿ ಹಣದುಬ್ಬರದ ಒತ್ತಡಕ್ಕೂ ಕಾರಣ ಆಗಬಹುದು.
ಇದಕ್ಕಾಗಿ ಹೆಚ್ಚು, ಆಟೋ ಇಂಧನ (ಪೆಟ್ರೋಲ್-ಡೀಸೆಲ್) ಮತ್ತು ಎಲ್‌ಪಿಜಿಯನ್ನು ದೇಶೀಯ ಮಾರುಕಟ್ಟೆಗೆ ನೀಡುವಂತೆ ತೈಲ ಸಂಸ್ಕರಣಾಗಾರಗಳಿಗೆ ಸೂಚಿಸುವ ಸಾಧ್ಯತೆ ಇದೆ. ಕಚ್ಚಾ ತೈಲ ಪೂರೈಕೆಯಲ್ಲಾಗುವ ಅಡಚಣೆ ಸರಿದೂಗಿಸಲು ಸಂಸ್ಕರಣಾಗಾರರು ಪರ್ಯಾಯ ಮೂಲಗಳನ್ನೂ ಹುಡುಕುತ್ತಿದ್ದಾರೆ. ಜಾಗತಿಕ ಕಚ್ಚಾ ತೈಲ ಸರಬರಾಜು ಮಾರ್ಗಗಳಲ್ಲಿ ವ್ಯತ್ಯಯ ಉಂಟಾದರೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುವ ಸಂಭವವಿದ್ದು, ಇದರಿಂದ ಸಾರಿಗೆ, ಕೃಷಿ, ರಫ್ತು ಮತ್ತು ಕೈಗಾರಿಕಾ ವಲಯಗಳು ಒತ್ತಡಕ್ಕೆ ಸಿಲುಕುವ ಸಾಧ್ಯತೆಗಳಿವೆ.
ಮೊದಲ ಹಂತದಲ್ಲೇ ರಾಜ್ಯದ ಸಾರಿಗೆ ಮತ್ತು ಕೃಷಿ ವಲಯಗಳಿಗೆ ಹೊಡೆತ ಬೀಳಬಹುಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ರಾಜ್ಯದಲ್ಲಿ ಸರಕು ಸಾಗಾಣಿಕೆಯ ಶೇ.80ರಷ್ಟು ರಸ್ತೆ ಸಾರಿಗೆಯ ಮೇಲೆಯೇ ಅವಲಂಬಿತವಾಗಿದೆ. ಡೀಸೆಲ್ ಬೆಲೆಯಲ್ಲಿ ಸ್ವಲ್ಪ ಪ್ರಮಾಣದ ಏರಿಕೆಯಾದರೂ ಸಾರಿಗೆ ವೆಚ್ಚ ಹೆಚ್ಚಾಗಿ, ಅಗತ್ಯ ವಸ್ತುಗಳ ದರ ಏರಿಕೆಗೆ ಕಾರಣವಾಗುತ್ತದೆ. ಕರ್ನಾಟಕ ಪ್ರಮುಖ ಅಕ್ಕಿ ಉತ್ಪಾದನಾ ರಾಜ್ಯವಾಗಿದ್ದು, ಗಲ್‌್ಫ ಪ್ರದೇಶಗಳಿಗೆ ರಫ್ತು ಮಾಡುವಲ್ಲಿ ದುಬೈ ಪ್ರಮುಖ ಟ್ರಾನ್ಸಿಟ್ ಕೇಂದ್ರವಾಗಿದೆ.
ಅಕ್ಕಿ, ಬೇಳೆ, ಮಸಾಲೆ ವಸ್ತುಗಳು ಸೇರಿದಂತೆ ಹಲವಾರು ಉತ್ಪನ್ನಗಳು ದುಬೈ ಮೂಲಕ ಪಶ್ಚಿಮ ಏಷ್ಯಾ, ಯುರೋಪ್ ಮತ್ತು ಇತರೆ ದೇಶಗಳಿಗೆ ಸಾಗುತ್ತವೆ.ಹಡಗು ಸಂಚಾರದಲ್ಲಿ ವಿಳಂಬ ಅಥವಾ ಬಂದರು ನಿರ್ಬಂಧ ಉಂಟಾದರೆ ರಫ್ತು ಚಟುವಟಿಕೆಗಳಿಗೆ ಅಡ್ಡಿಯಾಗಬಹುದು. ಕಚ್ಚಾ ವಸ್ತುಗಳ ಸರಬರಾಜಿನಲ್ಲಿ ವಿಳಂಬ ಉಂಟಾದರೆ ಉತ್ಪಾದನಾ ವೇಳಾಪಟ್ಟಿಗೆ ಧಕ್ಕೆಯಾಗಬಹುದು.
ತೈಲ ಬೆಲೆ ಏರಿಕೆಯ ಪರಿಣಾಮ ತಕ್ಷಣ ಗೋಚರಿಸದಿದ್ದರೂ, ಉದ್ವಿಗ್ನತೆ ಮುಂದುವರಿದರೆ ಕೆಲವು ವಾರಗಳಲ್ಲಿ ಅದರ ಪರಿಣಾಮ ತಿಳಿಯಲಿದೆ ಎನ್ನುತ್ತಾರೆ ತಜ್ಞರು.
ಕಚ್ಚಾ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾದರೆ ಪೆಟ್ರೋಲ್-ಡೀಸೆಲ್ ದರ ಏರಿಕೆ ಅನಿವಾರ್ಯ. ಇಂಧನ ದರ ಏರಿದರೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಸಹಜವಾಗಿ ಏರಿಕೆಯಾಗುತ್ತವೆ.
ಸಾರಿಗೆ ವೆಚ್ಚವು ಆಹಾರ, ತರಕಾರಿ ಮತ್ತು ದೈನಂದಿನ ಬಳಕೆಯ ವಸ್ತುಗಳ ದರದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ ಎಂದು ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಹೇಳಿದೆ. ಇದಲ್ಲದೆ ಪ್ರವಾಸೋದ್ಯಮ ವಲಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.
ತೈಲ ಬೆಲೆ ಏರಿಕೆಯಿಂದ ರೂಪಾಯಿ ಮೌಲ್ಯ ಕುಸಿತವಾಗುವ ಸಾಧ್ಯತೆ ಇದ್ದು, ಆಮದು ವೆಚ್ಚ ಹೆಚ್ಚಾಗಬಹುದು. ಉದ್ವಿಗ್ನತೆ ತೀವ್ರಗೊಂಡರೆ ಅದರ ಪರಿಣಾಮ ಕರ್ನಾಟಕದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಲೆ ಏರಿಕೆ ಎಷ್ಟಾಗಿದೆ? ಕಳೆದ ಜೂನ್‌ನಲ್ಲಿ ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದಾಗ ತೈಲವು ಬ್ಯಾರೆಲ್‌ಗೆ 70 ಡಾಲರ್‌ನಿಂದ 80 ಡಾಲರ್‌ಗೆ ಏರಿತ್ತು. ಆಗ ತಜ್ಞರು 100-120 ಡಾಲರ್‌ಗೆ ತಲುಪಬಹುದು ಎಂದೇ ವಿಶ್ಲೇಷಿಸಿದ್ದರು. ಆದರೆ, ಅದು ಕೇವಲ 12 ದಿನಗಳ ಯುದ್ಧವಷ್ಟೇ. ಈ ಬಾರಿ ಯುದ್ಧ ಯಾವಾಗ ನಿಲ್ಲುವುದು ಎಂದು ಯಾರಿಗೂ ತಿಳಿದಿಲ್ಲ.
ಈಗ ಬ್ಯಾರೆಲ್‌ಗೆ 72.8 ಡಾಲರ್ ಇದ್ದು ಯುದ್ಧ ಹೀಗೆ ಮುಂದುವರಿದರೆ ಅಂತಿಮವಾಗಿ 100 ಡಾಲರ್ ಮುಟ್ಟುವ ನಿರೀಕ್ಷೆಯಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಪ್ರತಿದಿನ ಸುಮಾರು 20 ದಶಲಕ್ಷ ಬ್ಯಾರೆಲ್ ತೈಲ ಪೂರೈಕೆಯಾಗುತ್ತದೆ. ಈ ಪ್ರಮಾಣವು ಭಾರತ-ಚೀನಾ ಒಟ್ಟು ದೈನಂದಿನ ಬೇಡಿಕೆಗೆ ಸಮ. ಅದನ್ನು ಬದಲಾಯಿಸಲು ಯಾವುದೇ ಸುಲಭ ಮಾರ್ಗವಿಲ್ಲ. ಅಮೆರಿಕದ ಒತ್ತಡದಿಂದಾಗಿ ಭಾರತವು ರಷ್ಯಾದ ಸರಬರಾಜುಗಳನ್ನು ತಗ್ಗಿಸಿದ ನಂತರ, ಇರಾಕ್ ಮತ್ತು ಸೌದಿ ಅರೇಬಿಯಾದಿಂದ ತೈಲದ ಮೇಲಿನ ಅವಲಂಬನೆ ಹೆಚ್ಚಾಗಿದೆ.
ಆದರೆ ಸದ್ಯಕ್ಕೆ ಭಾರತೀಯ ಕಂಪನಿಗಳು ಅಮೆರಿಕ ಸೇರಿದಂತೆ ಇತರ ಮೂಲಗಳಿಂದ ಎಲ್‌ಎನ್‌ಜಿ ಪಡೆಯಲು ಅವಕಾಶ ಇದೆ. ಹಡಗುಗಳನ್ನು ಕೂಡಾ ಸೂಯೆಜ್ ಕಾಲುವೆ ಮೂಲಕ ತರಿಸಿಕೊಳ್ಳಬಹುದಾಗಿದೆ. ಅಲ್ಲದೆ ಭಾರತಕ್ಕೆ ಪರ್ಯಾಯ ತೈಲ ಪೂರೈಕೆ ಮಾರ್ಗಗಳೂ ಇವೆ, ಅಲ್ಲದೆ ಯಾರೂ ಅನಿರ್ದಿಷ್ಟವಾಗಿ ಸರಬರಾಜು ನಿಲ್ಲಿಸುವುದಿಲ್ಲ ಎಂಬುದು ಅಧಿಕಾರಿಗಳ ಲೆಕ್ಕಾಚಾರವಾಗಿದೆ. ಆದರೆ, ಇಂದು ಸಂತಸದ ವಿಷಯ ಏನೆಂದರೆ, ತೈಲ ಕಂಪನಿಗಳು ಬೆಲೆ ಏರಿಕೆಯ ನಷ್ಟವನ್ನು ತಾವೇ ಭರಿಸಿ, ಬೆಲೆ ಇಳಿಕೆಯಾದಾಗ ಅದನ್ನು ಸರಿದೂಗಿಸಿಕೊಳ್ಳುವ ವಿಧಾನ ಅನುಸರಿಸುತ್ತದೆ.
ಗಮನಿಸಬೇಕಾದ ಅಂಶವೆಂದರೆ ಏಪ್ರಿಲ್ 2022 ರಿಂದ ಚಿಲ್ಲರೆ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದು ಗಮನಾರ್ಹ. ಹೀಗಾಗಿ ಚಿಲ್ಲರೆ ಡೀಸೆಲ್-ಪೆಟ್ರೋಲ್ ದರ ತಕ್ಷಣಕ್ಕೆ ಏರಿಕೆ ಆಗದಿರಬಹುದು, ಜನಸಾಮಾನ್ಯರು ತಕ್ಷಣವೇ ಬೆಲೆ ಏರಿಕೆಯ ಸಂಕಷ್ಟಕ್ಕೆ ಎದುರಾಗುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗಿದೆ.
