Thursday, May 14, 2026
Homeರಾಜ್ಯಇಂದಿನ ಚಿನ್ನ-ಬೆಳ್ಳಿ ದರಗಳು ಎಷ್ಟಿದೆ..?

ಇಂದಿನ ಚಿನ್ನ-ಬೆಳ್ಳಿ ದರಗಳು ಎಷ್ಟಿದೆ..?

What are the gold and silver rates today?

ಬೆಂಗಳೂರು, ಮೇ11-ಕಳೆದ ನಾಲ್ಕು ದಿನಗಳಿಂದ ಚಿನ್ನದ ದರ ಇಳಿಮುಖವಾಗಿದ್ದರೆ, ಬೆಳ್ಳಿಯ ದರ ಸ್ಥಿರವಾಗಿದೆ. ಮೇ 6 ಮತ್ತು 7ರಂದು ಏರಿಕೆ ಕಂಡಿದ್ದ ಚಿನ್ನವು ಅನಂತರ ಇಳಿಮುಖವಾಗಿದೆ. ಚಿನ್ನದ ದರ ಇಳಿಮುಖವಾಗಿದ್ದರೂ ಏರಿಕೆಯಾಗಿದ್ದ ದರಕ್ಕೆ ಹೋಲಿಸಿದರೆ ನಾಲ್ಕು ದಿನಗಳಲ್ಲಿ ಇಳಿಕೆಯಾಗಿರುವ ಚಿನ್ನದ ಪ್ರಮಾಣ ಕಡಿಮೆಯಾಗಿದೆ.

ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಮೇ 8ರಿಂದ ಸತತ ಇಳಿಕೆಯತ್ತ ಚಿನ್ನದ ದರ ಸಾಗಿದೆ. ಅಂದಿನಿಂದ ಇಂದಿನವರೆಗೆ ಅಲ್ಪ ಪ್ರಮಾಣದಲ್ಲಿ ಚಿನ್ನದ ದರ ಕಡಿಮೆಯಾಗಿದೆ. ಇಂದು 24 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 22 ರೂ. ಕಡಿಮೆಯಾಗಿದ್ದು, 15,213ರೂ. ನಷ್ಟಿದೆ.

22 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 20 ರೂ. ಇಳಿಕೆಯಾಗಿದ್ದು, 13,945ರೂ.ನಷ್ಟಿದೆ. 18 ಕ್ಯಾರೆಟ್‌ನ ಆಭರಣ ಚಿನ್ನವು 16 ರೂ. ಕಡಿಮೆಯಾಗಿದ್ದು, 11,410 ರೂ.ನಷ್ಟಿದೆ. ಪ್ಲಾಟಿನಂ ದರದಲ್ಲೂ 10 ಗ್ರಾಂಗೆ 80 ರೂ. ಕಡಿಮೆಯಾಗಿದೆ. ಪ್ರಸ್ತುತ 10 ಗ್ರಾಂಗೆ 62, 370 ರೂ.ನಷ್ಟಿದೆ.

ಮೇ 5ರಂದು ಕುಸಿತ ಕಂಡಿದ್ದ ಬೆಳ್ಳಿಯು ಅನಂತರ ಏರುಗತಿಯಲ್ಲಿ ಸಾಗಿ ಮತ್ತೆ ನಾಗಾಲೋಟದಲ್ಲಿ ಏರಿಕೆಯಾಗುವ ಆತಂಕ ಸೃಷ್ಟಿಸಿತ್ತು. ಅಂದು 10 ಸಾವಿರ ರೂ. ಇಳಿಕೆಯಾಗಿ ಪ್ರತಿ ಕೆ.ಜಿ. ಬೆಳ್ಳಿ ದರವು 2.55ಲಕ್ಷ ರೂ. ನಷ್ಟಿತ್ತು. ಮೇ 6ರಂದು ಪ್ರತಿ ಕೆ.ಜಿ.ಬೆಳ್ಳಿಗೆ 10 ಸಾವಿರ ರೂ., ಮೇ 7ರಂದು ಐದು ಸಾವಿರ ರೂ., ಮೇ 8ರಂದು ಐದು ಸಾವಿರ ರೂ. ಏರಿಕೆಯಾಗಿದ್ದು, 2.75 ಲಕ್ಷ ರೂ.ಗೆ ತಲುಪಿತ್ತು. ಅಂದಿನಿಂದ ನಾಲ್ಕು ದಿನಗಳು ಬೆಳ್ಳಿ ದರದಲ್ಲಿ ಏರಿಳಿತವಾಗದೇ ಸ್ಥಿರವಾಗಿದೆ.

ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಳಿಕೆ ಸಹಜವಾದರೂ ಈಗಾಗಲೇ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಕಂಡಿರುವುದರಿಂದ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ವಿರಳ ಎಂಬುದು ವರ್ತಕರ ಅಭಿಪ್ರಾಯ. ಅಲ್ಲದೆ, ಜಾಗತಿಕ ಮಟ್ಟದಲ್ಲಿ ಆಗಾಗ್ಗೆ ಉಂಟಾಗುವ ವಿದ್ಯಮಾನಗಳು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತವೆ.

RELATED ARTICLES

Latest News