ಬೆಂಗಳೂರು,ಜೂ.11-ಸ್ವಯಂ ಉದ್ಯೋಗದ ಹೆಸರಿನಲ್ಲಿ ಎಸ್ಎಲ್ವಿ ಮಹಿಳಾ ಮಾರ್ಟ್ ಅಂಡ್ ಮಾರ್ಕೆಟಿಂಗ್ ಎಂಬ ಕಂಪನಿಯೊಂದು ಮಹಿಳೆಯರಿಗೆ ಕೋಟ್ಯಂತರ ರೂ. ವಂಚಿಸಿದೆ ಎಂದು ಆರೋಪಿಸಲಾಗಿದೆ.ಈ ಸಂಬಂಧ ಹಾವೇರಿ ಪಟ್ಟಣ ಮತ್ತು ತುಮಕೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿವೆ.
ಹಾವೇರಿ ವರದಿ: ಮನೆಯಲ್ಲೇ ಕುಳಿತು ಕೆಲಸ ಮಾಡಿದರೆ ಒಳ್ಳೆಯ ಸಂಬಳ ಕೊಡುವುದಾಗಿ ಅಶ್ವಿನಿ ನಗರದಲ್ಲಿರುವ ಈ ಕಂಪನಿ ನಂಬಿಸಿ ಸಾವಿರಾರು ಮಹಿಳೆಯರಿಗೆ ವಂಚಿಸಿ ಕಂಪನಿಗೆ ಬೀಗ ಹಾಕಿ ಖರ್ತನಾಕ್ ಜೋಡಿ ತಲೆ ಮರೆಸಿಕೊಂಡಿದೆ.ವರ್ಕ್ ಫ್ರಮ್ ಹೋಮ್ ಹೆಸರಿನಲ್ಲಿ ಹಣ ಕಳೆದುಕೊಂಡವರು ಇದೀಗ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದಾರೆ.
ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ನಾವೇ ಅಗರಬತ್ತಿ, ಮೇಣದ ಬತ್ತಿ ಇನ್ನಿತರ ಸಾಮಾಗ್ರಿಗಳನ್ನು ಕೊಡುತ್ತೇವೆ. ಮನೆಯಲ್ಲೇ ಪ್ಯಾಕ್ ಮಾಡಬೇಕು ಎಂದು ಈ ಜೋಡಿ ನಂಬಿಸಿದೆ.ಅದಕ್ಕಾಗಿ ನೀವು 25 ಸಾವಿರದಿಂದ 50 ಲಕ್ಷದ ವರೆಗೆ ಡೆಪಾಸಿಟ್ ಇಡಬೇಕು. 1 ಲಕ್ಷಕ್ಕೆ ಪ್ರತಿ ತಿಂಗಳಿಗೆ 26 ಸಾವಿರ ರೂ. ಆದಾಯ ಬರುತ್ತದೆ ಎಂದು ನಂಬಿಸಿದ್ದು, ಇದುವರೆಗೂ 10 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿದೆ ಎಂದು ಆರೋಪಿಸಿರುವ ನೊಂದ ಮಹಿಳೆಯರು ಕಣ್ಣೀರು ಹಾಕಿದ್ದಾರೆ.
ತುಮಕೂರು ವರದಿ:
ಈ ಪ್ರಕರಣದ ಬೆನ್ನಲ್ಲೇ ತುಮಕೂರಿನಲ್ಲೂ ಇದೇ ಹೆಸರಿನ ಕಂಪನಿ ಗೃಹ ಉದ್ಯೋಗದ ನೆಪದಲ್ಲಿ ನೂರಾರು ಮಹಿಳೆಯರಿಗೆ ಲಕ್ಷಾಂತರ ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ.ಜಯನಗರದಲ್ಲಿ ಈ ಸಂಸ್ಥೆ ಶಾಖೆ ತೆರೆದಿದ್ದು, ಗೃಹಿಣಿಯರು ಹಾಗೂ ವಿದ್ಯಾವಂತ ಮಹಿಳೆಯರಿಗೆ ಸ್ವಯಂ ಉದ್ಯೋಗದ ಆಮಿಷವೊಡ್ಡಿ ಮುಂಗಡವಾಗಿ ಲಕ್ಷ ಲಕ್ಷ ಹಣ ಡೆಪಾಸಿಟ್ ಮಾಡಿಸಿಕೊಂಡು, ಹೂಡಿಕೆ ಮಾಡಿದ ಹಣ ಕೆಲವು ತಿಂಗಳುಗಳಲ್ಲಿ ದುಪ್ಪಟ್ಟಾಗಲಿದೆ ಎಂದು ನಂಬಿಸಲಾಗಿತ್ತು.ಕಳೆದ 1 ವರ್ಷದಿಂದ ಈ ಕಂಪನಿ ವ್ಯವಹಾರ ನಡೆಸುತ್ತಿತ್ತು. ಠೇವಣಿ ರೂಪದಲ್ಲಿ ಹಣ ಹೂಡಿಕೆ ಮಾಡಿಸಿಕೊಂಡಿದ್ದ ಕಂಪನಿ ಇದೀಗ ಕಚೇರಿಗೆ ಬಾಗಿಲು ಹಾಕಿದೆ.
ಹಣ ಕಳೆದುಕೊಂಡ ಕೆಲವರು ಮರ್ಯಾದೆಗೆ ಅಂಜಿ ದೂರು ನೀಡಿಲ್ಲ. ಯಾವಾಗ ಈ ಹೆಸರಿನ ಕಂಪನಿ ಹಾವೇರಿಯಲ್ಲಿ ಇದೇ ರೀತಿ ಮೋಸ ಮಾಡಿದೆ ಎಂಬುವುದು ಗೊತ್ತಾಗುತ್ತಿದ್ದಂತೆ ಧೈರ್ಯ ತಂದುಕೊಂಡು ಇದೀಗ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಎನ್ಸಿಆರ್ ದಾಖಲಿಸಿಕೊಂಡಿರುವ ಪೊಲೀಸರು ಎಸ್ಎಲ್ವಿ ಮಹಿಳಾ ಮಾರ್ಟ್ ಅಂಡ್ ಮಾರ್ಕೆಟಿಂಗ್ ಕಂಪನಿಯ ಹಿನ್ನಲೆ, ಅಲ್ಲಿ ಕೆಲಸ ಮಾಡುತ್ತಿದ್ದವರ ಬಗ್ಗೆ ಮಾಹಿತಿಗಳನ್ನು ಕಲೆಹಾಕಿ ತನಿಖೆ ಚುರುಕುಗೊಳಿಸಿದ್ದಾರೆ.
