ಶಿರಾ, ಜೂ.28- ತಾಲ್ಲೂಕಿನ ಜೋಗಿಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಯುವಕನೊಬ್ಬ ನಾಡಬಾಂಬ್ ಬಳಸಿ ಕಾರು ಸ್ಫೋಟಿಸಿಕೊಂಡು ಸಜೀವ ದಹನವಾಗಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.
ಅಂಕೋಲಾ ಮೂಲದ ನಾಗೇಂದ್ರ ಆತಹತ್ಯೆ ಮಾಡಿಕೊಂಡ ಯುವಕ.ಬೆಂಗಳೂರಿನಲ್ಲಿದ್ದ ಅಂಕೋಲಾ ಮೂಲದ ನಾಗೇಂದ್ರ ಮತ್ತು ರಮ್ಯಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವೈಮನಸ್ಸುಮೂಡಿದ್ದು ಘಟನೆಗೆ ಕಾರಣ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ಹಿನ್ನಲೆ:
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಶನ್ ಆಗಿದ್ದ ರಮ್ಯಾ ಜಯನಗರ ವ್ಯಾಪ್ತಿಯ ಸಿದ್ದಾಪುರದಲ್ಲಿ ಸ್ನೇಹಿತೆ ಜೊತೆಯಲ್ಲಿ ವಾಸವಿದ್ದರು. ಡೆಲಿವರಿ ಬಾಯ್ ಆಗಿದ್ದ ನಾಗೇಂದ್ರ ನಿನ್ನೆ ಬೆಳಿಗ್ಗೆ 11ರ ಸುಮಾರಿಗೆ ಉಬರ್ ಕ್ಯಾಬ್ ಅನ್ನು ಅಂಕೋಲಾಗೆ ಬುಕ್ ಮಾಡಿದ್ದ. ಈ ವೇಳೆ ಸಿದ್ದಾಪುರಕ್ಕೆ ಹೋಗಿ ರಮ್ಯಾ ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದ ಎಂದು ರಮ್ಯಾ ಸ್ನೇಹಿತೆ ಸಿದ್ದಾಪುರ ದೂರು ನೀಡಿದ್ದಾರೆ.
ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಕಾರು ಅಂಕೋಲಾಕ್ಕೆ ತೆರಳುವಾಗ ಸಿದ್ದಾಪುರ ಪೊಲೀಸ್ ಠಾಣೆಯಿಂದ ಕಾರಿನ ಚಾಲಕನಿಗೆ ಕರೆ ಬಂದಿದೆ. ಕಾರು ಇರುವ ಸ್ಥಳದಲ್ಲೇ ನಿಲ್ಲಿಸುವಂತೆ ಸೂಚಿಸಿದ್ದಾರೆ. ಇದರಿಂದ ಅನುಮಾನಗೊಂಡ ಯುವಕ ನಾಗೇಂದ್ರ, ರಮ್ಯಾ ಜತೆಗೆ ಜಗಳ ವಾಡಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ದಿಗಿಲುಗೊಂಡ ಕ್ಯಾಬ್ ಚಾಲಕ ಪ್ರವೀಣ್ ಅವರು ಕಾರನ್ನು ಜೋಗಿಹಳ್ಳಿ ಬಳಿಯ ಹೆದ್ದಾರಿ ಪಕ್ಕದಲ್ಲೇ ನಿಲ್ಲಿಸಿದ್ದಾನೆ.
ಚಾಕು ಇರಿತದಿಂದ ಗಾಯಗೊಂಡಿದ್ದ ರಮ್ಯಾ ತಕ್ಷಣವೇ ಕಾರಿನಿಂದ ಇಳಿದು ಓಡಿದ್ದಾಳೆ. ಆಗ ಕಾರು ಚಾಲಕ ಪ್ರವೀಣ್ ಅವರು ನಾಗೇಂದ್ರನ ಕೈಯಿಂದ ಚಾಕು ಕಿತ್ತು ಹೊರಕ್ಕೆ ಎಸೆದಿದ್ದಾರೆ.
ಈ ವೇಳೆ ಬ್ಯಾಗ್‌ನಲ್ಲಿ ನಾಡಬಾಂಬ್‌ನ್ನು ಕೈಗೆತ್ತಿಕೊಂಡು ಲೈಟರ್ ನಿಂದ ಹೊತ್ತಿಸುವ ಪ್ರಯತ್ನದಲ್ಲಿದ್ದಾಗ ಅದನ್ನೂ ಕಿತ್ತುಕೊಂಡು ಹೊರಕ್ಕೆ ಎಸೆದಿದ್ದಾರೆ.
ಅಣ್ಣಾ ಬಾಂಬ್ ತಂದಿದ್ದಾನೆ ದೂರ ಓಡಿಹೋಗಿ ಎಂದು ಯುವತಿ ಕೂಗಿದ್ದರಿಂದ ಕಾರಿನಿಂದ ದೂರಕ್ಕೆ ಓಡಿದೆ. ಈ ವೇಳೆ ಮತ್ತೊಂದು ನಾಡಬಾಂಬ್ ಕೈಗೆತ್ತಿಕೊಂಡ ಯುವಕ ಲೈಟರ್‌ನಿಂದ ಹೊತ್ತಿಸಿ, ಸ್ಫೋಟಿಸಿಕೊಂಡ ಎಂದು ಪ್ರವೀಣ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಚಾಕು ಇರಿತದಿಂದ ತಲೆ ಮತ್ತು ಕೈಗೆ ಗಾಯಗಳಾಗಿದ್ದ ಯುವತಿ ರಮ್ಯಾಗೆ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕಾರು ಸ್ಫೋಟಗೊಂಡ ಸ್ಥಳಕ್ಕೆ ಭೇಟಿ ನೀಡಿದ್ದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ. ಅವರು ಯುವತಿ ಮತ್ತು ಕಾರು ಚಾಲಕನಿಂದ ಹೆಚ್ಚಿನ ಮಾಹಿತಿ ಪಡೆದು ತನಿಖೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.
