Homeರಾಜ್ಯಕೆ.ಎಚ್.ಮುನಿಯಪ್ಪನವರಿಗೆ ಸಮಾಜ ಕಲ್ಯಾಣ ಖಾತೆ ನೀಡಿದ್ದಕ್ಕೆ ಮಾದಿಗರ ಮಹಾಸಭೆ ಅಭಿನಂದನೆ

ಕೆ.ಎಚ್.ಮುನಿಯಪ್ಪನವರಿಗೆ ಸಮಾಜ ಕಲ್ಯಾಣ ಖಾತೆ ನೀಡಿದ್ದಕ್ಕೆ ಮಾದಿಗರ ಮಹಾಸಭೆ ಅಭಿನಂದನೆ

Madiga Mahasabha congratulates K.H. Muniyappa

ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಹಾಗೂ ಮಾದಿಗ ಸಮುದಾಯದ ಅಗ್ರಗಣ್ಯ ನಾಯಕರಾದ ಕೆ.ಎಚ್. ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿರುವುದನ್ನು ಕರ್ನಾಟಕ ಮಾದಿಗರ ಮಹಾಸಭೆ ಹಾಗೂ ವಿವಿಧ ಸಂಘ-ಸಂಸ್ಥೆಗಳು ಸ್ವಾಗತಿಸಿ, ಕಾಂಗ್ರೆಸ್ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸಿವೆ.

ಮುನಿಯಪ್ಪ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಎಲ್ಲ ವರ್ಗ, ಜಾತಿ ಹಾಗೂ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸುವ ಸರ್ವಜನ ಪರ ನಾಯಕರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದು, ಏಳು ಬಾರಿ ಲೋಕಸಭಾ ಸದಸ್ಯರಾಗಿ, ಎರಡು ಬಾರಿ ಕೇಂದ್ರ ಸಚಿವರಾಗಿ ಹಾಗೂ ರಾಜ್ಯದಲ್ಲಿ ಸಂಪುಟ ದರ್ಜೆ ಸಚಿವರಾಗಿ ಅಪಾರ ಆಡಳಿತ ಅನುಭವ ಹೊಂದಿದ್ದಾರೆ. ಅವರ ಹಿರಿತನ, ಅನುಭವ ಮತ್ತು ಸಾಮಾಜಿಕ ಬದ್ಧತೆಯನ್ನು ಪರಿಗಣಿಸಿ ಸಮಾಜ ಕಲ್ಯಾಣದಂತಹ ಮಹತ್ವದ ಖಾತೆ ನೀಡಿರುವುದು ಸೂಕ್ತ ನಿರ್ಧಾರ ಎಂದು ಮಹಾಸಭೆ ತಿಳಿಸಿದೆ.

ರಾಜ್ಯದ ಎಡಗೈ (ಮಾದಿಗ) ಸಮುದಾಯವು ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಬೇಕೆಂದು ಬಹುಕಾಲದಿಂದ ಒತ್ತಾಯಿಸುತ್ತಿತ್ತು. ಈ ಬೇಡಿಕೆಗೆ ಸ್ಪಂದಿಸಿರುವುದು ಸಮುದಾಯದಲ್ಲಿ ಸಂತಸ, ಗೌರವ ಹಾಗೂ ಹೊಸ ವಿಶ್ವಾಸ ಮೂಡಿಸಿದೆ. ಇದು ಕೇವಲ ವ್ಯಕ್ತಿಯೊಬ್ಬರಿಗೆ ನೀಡಿದ ಖಾತೆಯಲ್ಲ; ಸಾಮಾಜಿಕ ನ್ಯಾಯದ ಆಶಯ ಹಾಗೂ ಅವಕಾಶವಂಚಿತ ಸಮುದಾಯಗಳ ನಿರೀಕ್ಷೆಗಳಿಗೆ ನೀಡಿದ ಗೌರವವಾಗಿದೆ ಎಂದು ಹೇಳಿದೆ.

ಈ ಮಹತ್ವದ ನಿರ್ಧಾರಕ್ಕಾಗಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ಹಿರಿಯ ನಾಯಕರಿಗೆ ಮಹಾಸಭೆ ಅಭಿನಂದನೆ ಸಲ್ಲಿಸಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ (ಆಡಳಿತ), ರಾಜ್ಯಸಭಾ ಸದಸ್ಯ ಮತ್ತು ಮುಖ್ಯಮಂತ್ರಿಗಳ ಪ್ರಧಾನ ಸಲಹೆಗಾರ ಜಿ.ಸಿ. ಚಂದ್ರಶೇಖರ್ ಸೇರಿದಂತೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಗಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾಗಿ ಮುನಿಯಪ್ಪ ಅವರು ಆಹಾರ ಭದ್ರತೆ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆ ಬಲಪಡಿಸುವಲ್ಲಿ ಕೊಡುಗೆ ನೀಡಿದ್ದಾರೆ. ಇದೀಗ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗೆ ತಮ್ಮ ಅನುಭವ ಬಳಸುವ ಅವಕಾಶ ದೊರೆತಿದೆ.

‘ಹಸಿದವನಿಗೆ ಅನ್ನ ನೀಡಿದ ಕೈ, ಈಗ ಅವಕಾಶವಂಚಿತನಿಗೆ ಹಕ್ಕು ಮತ್ತು ಸ್ವಾಭಿಮಾನದ ದಾರಿ ತೆರೆದುಕೊಡಲಿ’ ಎಂಬುದು ನಮ್ಮ ಆಶಯ. ಸಾಮಾಜಿಕ ನ್ಯಾಯ, ಸಮಾನ ಅವಕಾಶ, ಶಿಕ್ಷಣ, ಉದ್ಯೋಗ, ಆರ್ಥಿಕ ಸಬಲೀಕರಣ ಹಾಗೂ ಪರಿಶಿಷ್ಟ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಮುನಿಯಪ್ಪ ಅವರ ನಾಯಕತ್ವದಲ್ಲಿ ಇಲಾಖೆ ಹೊಸ ಹೆಜ್ಜೆ ಇಡಲಿದೆ ಎಂಬ ವಿಶ್ವಾಸವಿದೆ ಎಂದು ಕರ್ನಾಟಕ ಮಾದಿಗರ ಮಹಾಸಭೆ ತಿಳಿಸಿದೆ. ಮುನಿಯಪ್ಪ ಅವರ ಅಧಿಕಾರಾವಧಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಮತ್ತು ಅವಕಾಶ ತಲುಪಿಸುವ ಸಾಮಾಜಿಕ ನ್ಯಾಯದ ಹೊಸ ಅಧ್ಯಾಯವಾಗಲಿ ಎಂದು ಮಹಾಸಭೆ ಹಾರೈಸಿದೆ.

RELATED ARTICLES
spot_img

Latest News