ಮೈಸೂರು,ಸೆ.28- ಮಾವುತರು ಹಾಗೂ ಕಾವಾಡಿಗರಿಗೆ ಆಯೋಜಿಸಿದ್ದ ಉಪಹಾರ ಕೂಟ ಮತ್ತು ಕಿಟ್ ವಿತರಣಾ ಕಾರ್ಯಕ್ರಮ ವಿಳಂಬವಾಗಿದ್ದಕ್ಕೆ ಅಸಮಾಧಾನಗೊಂಡ ಶಾಸಕ ತನ್ವೀರ್ ಸೇಠ್ ಸ್ಥಳದಿಂದ ನಿರ್ಗಮಿಸಿದ ಪ್ರಸಂಗ ನಡೆಯಿತು.
ಅರಮನೆ ಆವರಣದಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಾವುತರು ಮತ್ತು ಕಾವಾಡಿಗರಿಗೆ ಉಪಹಾರ ಕೂಟ ಆಯೋಜಿಸಲಾಗಿತ್ತು. ಆದರೆ 9.30 ಆದರೂ ಕಾರ್ಯಕ್ರಮ ಆರಂಭವಾಗದ ಕಾರಣ ಬೇಸರಗೊಂಡ ಶಾಸಕ ತನ್ವೀರ್ ಸೇಠ್ ಸ್ಥಳದಿಂದ ಹೊರನಡೆದರು.
ಬೆಳಗ್ಗೆಯಿಂದ ಕಾಯುತ್ತಿದ್ದ ಮಾವುತರಿಗೆ ಗೌರವ ನೀಡಬೇಕು, ಸಮಯಕ್ಕೆ ಸರಿಯಾಗಿ ಉಪಹಾರ ನೀಡಬೇಕು, ಅವರನ್ನು ಊಟಕ್ಕಾಗಿ ಕಾಯಿಸುವುದು ಸರಿಯಲ್ಲ ಎಂದು ಶಾಸಕರು ಬೇಸರ ವ್ಯಕ್ತಪಡಿಸಿ ಕೂಡಲೇ ಅಧಿಕಾರಿಗಳಿಗೆ ಕಾರ್ಯಕ್ರಮ ಆರಂಭಿಸುವಂತೆ ಸೂಚಿಸಿದರು. ಆದರೆ ಅಧಿಕಾರಿಗಳು ಸಹ ಕಾರ್ಯಕ್ರಮವನ್ನು ಆರಂಭಿಸಲು ವಿಳಂಬ ಮಾಡಿದ್ದಕ್ಕೆ ಮತ್ತಷ್ಟು ಸಿಡಿಮಿಡಿಗೊಂಡು ಸ್ಥಳದಿಂದ ಹೊರನಡೆದರು.
