Homeರಾಜ್ಯಹನೂರು : ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೆಳೆದಿದ್ದ 292 ಗಾಂಜಾ ಗಿಡಗಳು ವಶ

ಹನೂರು : ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೆಳೆದಿದ್ದ 292 ಗಾಂಜಾ ಗಿಡಗಳು ವಶ

ಹನೂರು,ಸೆ.28-ತಾಲೂಕಿನ ಕೂಳಿಹಟ್ಟಿ, ಬೆಳ್ಳಾಜಿ ಬೀಟ್‌ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವ ಬಗ್ಗೆ ಬಂದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅಬಕಾರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕೂಂಬಿಂಗ್‌ ಕಾರ್ಯಾಚರಣೆ ನಡೆಸಿದ್ದಾರೆ.ಈ ವೇಳೆ ಅರಣ್ಯ ಪ್ರದೇಶದಲ್ಲಿ ಬೆಳೆದಿದ್ದ 292 ಗಾಂಜಾ ಗಿಡಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶ ಪಡಿಸಿಕೊಂಡ ಗಾಂಜಾ ಗಿಡಗಳ ಒಟ್ಟು ತೂಕ 213 ಕೆ.ಜಿ. 600 ಗ್ರಾಂ ಇದೆ.

ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಸವರಾಜ ಹಡಪದ, ಬಿ.ಆರ್‌.ಟಿ. ಡಿಸಿಎಫ್‌ ಶ್ರೀಪತಿ ಚಾಮರಾಜನಗರ ಜಿಲ್ಲಾ ಅಬಕಾರಿ ಉಪ ಆಯುಕ್ತ ಚಂದ್ರ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಚಾಮರಾಜನಗರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಕೆ.ಟಿ. ವಿಜಯ್‌ ಕುಮಾರ್‌, ಅಬಕಾರಿ ನಿರೀಕ್ಷಕ ಸಿ.ಎಂ.ದಯಾನಂದ, ಉಮಾಶಂಕರ್‌, ಬೈಲೂರು ವಲಯ ಅರಣ್ಯಾಧಿಕಾರಿ ಡಿ.ದೇವರಾಜು, ಉಪ ವಲಯ ಅರಣ್ಯಾಧಿಕಾರಿ ಎಸ್‌‍.ರಾಜೇಶ್‌ ನೇತತ್ವದಲ್ಲಿ ದಾಳಿ ನಡೆದಿದೆ.

ವಶಪಡಿಸಿಕೊಂಡ ಎಲ್ಲ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಅಬಕಾರಿ ನಿರೀಕ್ಷಕ ದಯಾನಂದ್‌ ಹಾಗೂ ಉಪ ನಿರೀಕ್ಷಕಿ ನಂದಿನಿ ಅವರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದ್ದು, ಈ ಪ್ರಕರಣದ ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದರೆ ನೀಡುವಂತೆ ಅಬಕಾರಿ ಹಾಗೂ ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಈ ಸಂಬಂಧ ನೆಲ್ಲಿಕತ್ರಿ ಗ್ರಾಮದ ಐವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಬಕಾರಿ ಉಪನಿರೀಕ್ಷಕಿ ನಂದಿನಿ ಅವರು ತನಿಖೆ ಮುಂದುವರಿಸಿದ್ದಾರೆ.ಜಂಟಿ ಕಾರ್ಯಾಚರಣೆ ನಡೆಸಿ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಕಾರ್ಯವನ್ನು ಅಬಕಾರಿ ಜಂಟಿ ಆಯುಕ್ತರು ಹಾಗೂ ಹಿರಿಯ ಅರಣ್ಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

RELATED ARTICLES
spot_img

Latest News