Thursday, April 16, 2026
Homeರಾಜ್ಯಕಾಂಗ್ರೆಸ್‌‍ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ : ಬಿ.ವೈ.ವಿಜಯೇಂದ್ರ

ಕಾಂಗ್ರೆಸ್‌‍ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ : ಬಿ.ವೈ.ವಿಜಯೇಂದ್ರ

Zero development in Congress government: B.Y. Vijayendra

ಬೆಂಗಳೂರು,ಜ.30- ರಾಜ್ಯದ ಕಾಂಗ್ರೆಸ್‌‍ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಜನರ ವಿಶ್ವಾಸ ಕಳೆದುಕೊಂಡಿದೆ. ಎಲ್ಲಾ ರಂಗದಲ್ಲೂ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ವಿಧಾನಸಭೆಯಲ್ಲಿಂದು ಆರೋಪಿಸಿದರು.

ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಮಾಡಿದ್ದ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯಪಾಲರ ಮೂಲಕ ಈ ಸರ್ಕಾರ ಸತ್ಯ ಹೇಳಿಸಬೇಕಿತ್ತು. ಆದರೆ ಅದನ್ನು ಮಾಡಿಲ್ಲ. ವಾಲೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಹಗರಣ, ಅಕ್ರಮ ಬಾಂಗ್ಲಾ ವಲಸಿಗರಿಗೆ ರಕ್ಷಣೆ, ನೀಟ್‌ ತಡೆ ಹಿಡಿದಿರುವುದು ಸೇರಿದಂತೆ ಎಲ್ಲಾ ವಿಚಾರ ಹೇಳಬೇಕಿತ್ತು. ಎಲ್ಲವುದರ ಮೇಲೆ ತೆರಿಗೆ ಹಾಕಿ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಟೀಕಿಸಿದರು.

ಕಳೆದ ಎರಡೂವರೆ ವರ್ಷದಲ್ಲಿ 3.7 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಇದು ಮುಂಬರುವ ಸರ್ಕಾರಗಳ ಮೇಲೆ ಸಾಲ ತೀರಿಸಬೇಕಾದ ಹೊರೆಯಾಗಲಿದೆ ಎಂದರು. ದ್ವೇಷಭಾಷಣ ಕಾಯ್ದೆ ಜಾರಿಗೆ ಬರುವ ಮುನ್ನವೇ ಆ ಕಾಯ್ದೆಯಡಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ ಹಿಡಿದುಕೊಟ್ಟಂತಹ ಹಿಂದೂ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿ ಅವರನ್ನು ಬಂಧಿಸಿರುವುದು ಅಕ್ಷಮ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಯಲ್ಲಾಪುರದಲ್ಲಿ ದಲಿತ ಮಹಿಳೆಯನ್ನು ಹಾಡುಹಗಲೇ ಕೊಲೆ ಮಾಡಲಾಗಿದೆ. ಮಂಗಳೂರು ಮತ್ತು ಬಳ್ಳಾರಿಯಲ್ಲಿ ಕೊಟ್ಟಂತೆ 50 ಲಕ್ಷ ರೂ. ಪರಿಹಾರ ಕೊಡಬೇಕು. ಬಳ್ಳಾರಿ ಘರ್ಷಣೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಗ್ಯಾರಂಟಿ ಯೋಜನೆಗೆ ಹಣ ಒದಗಿಸಲು ಅಬಕಾರಿ ಇಲಾಖೆಗೆ ವಾರ್ಷಿಕ 40 ಸಾವಿರ ಕೋಟಿ ರೂ. ಸಂಗ್ರಹದ ಗುರಿ ನೀಡಲಾಗಿದೆ. ಇದರಿಂದ ದಿನಸಿ ಅಂಗಡಿಯಲ್ಲೂ ಮದ್ಯ ಮಾರಾಟ ಮಾಡುವ ದುಸ್ಥಿತಿ ಬಂದೊದಗಿದೆ. ಕುಡುಕರ ರಾಜ್ಯ ಮಾಡಲು ಸರ್ಕಾರ ಹೊರಟಿದೆ. ಇದರಿಂದ ಮಹಿಳೆಯರ ಬಾಳಲ್ಲಿ ಬೆಳಕು ಹೇಗಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ರೂ. ಕೊಟ್ಟು 5 ಸಾವಿರ ರೂ. ಕಿತ್ತುಕೊಳ್ಳುತ್ತಿದೆ ಎಂದು ಟೀಕಿಸಿದರು.

ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ಗೇಟ್‌ಗಳನ್ನು ಬದಲಾಯಿಸಬೇಕು. ಆಂಧ್ರ ಸರ್ಕಾರ ಒಟ್ಟು 50 ಕೋಟಿ ರೂ. ಕೊಟ್ಟಿದ್ದು, ಅದರಲ್ಲಿ ರಾಜ್ಯಸರ್ಕಾರ ನೀಡಿದ್ದ 10 ಕೋಟಿ ರೂ.ಗಳನ್ನು ವಾಪಸ್‌‍ ಪಡೆಯಲಾಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದಾ ನಾಯಕರೆಂದು ಬಿಂಬಿಸಿಕೊಂಡಿದ್ದಾರೆ. ಆದರೆ ಈ ಸರ್ಕಾರದಿಂದ ಅವರ ಕನಸುಗಳು ನುಚ್ಚು ನೂರಾಗಿವೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಹಣ ಶೇ.50 ರಷ್ಟು ಕಡಿತವಾಗಿವೆ. ಮುಂದಿನ ದಿನಗಳಲ್ಲಾದರೂ ನ್ಯಾಯ ಒದಗಿಸಬೇಕು ಎಂದರು.

ಮಂಡ್ಯ ಜಿಲ್ಲೆಯಲ್ಲಿ ಕಳೆದ 6 ತಿಂಗಳಿನಿಂದ ಸ್ವಾತಂತ್ರ್ಯ ಯೋಧರಿಗೆ 4.8 ಕೋಟಿ ರೂ. ಗೌರವಧನ ನೀಡದೇ ಅಪಮಾನ ಮಾಡುತ್ತಿದೆ ಎಂದು ಆಪಾದಿಸಿದರು.ಕಾಂಗ್ರೆಸ್‌‍ ಸರ್ಕಾರ ಅಹಿಂದ ವರ್ಗದವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆಯೇ ಹೊರತು ನ್ಯಾಯ ಒದಗಿಸುತ್ತಿಲ್ಲ ಎಂದು ಕೆಲವು ಅಂಕಿ ಅಂಶಗಳ ಸಹಿತ ಆರೋಪ ಮಾಡಿದರು.

ದೇಶದಲ್ಲಿ ಕಾಂಗ್ರೆಸ್‌‍ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ. ಯುಪಿಎ ಸರ್ಕಾರವಿದ್ದಾಗ ಟುಜಿ ಹಗರಣ, ಕಲ್ಲಿದ್ದಲು ಹಗರಣ, ಕಾಮನ್‌ವೆಲ್ತ್‌ ಗೇಮ್‌ ಹಗರಣ ಸೇರಿದಂತೆ ಭ್ರಷ್ಟಾಚಾರದ ಚರ್ಚೆಯಾಗುತ್ತಿತ್ತು. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಯ ಚರ್ಚೆಯಾಗುತ್ತಿದೆ. 2014 ರಿಂದ 2025 ರ ನಡುವೆ ಎನ್‌ಡಿಎ ಸರ್ಕಾರದ ಮೇಲೆ ಯಾವುದಾದರೂ ಭ್ರಷ್ಟಾಚಾರ ಆರೋಪ ಮಾಡಲು ಸಾಧ್ಯವಾಗಿದೆಯೇ ಈ ಬಗ್ಗೆ ಸವಾಲು ಹಾಕುತ್ತೇನೆ ಎಂದರು.

ಜಿಎಸ್‌‍ಟಿ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸುವವರು ದೇಶದಲ್ಲಾಗುತ್ತಿರುವ ಅಮೂಲಾಗ್ರ ಬದಲಾವಣೆ ಬಂಡವಾಳ ಹೂಡಿಕೆ ಬಗ್ಗೆಯೂ ಚರ್ಚೆಯಾಗಬೇಕು. ರಾಷ್ಟ್ರ ಮೊದಲು ಎಂಬ ಪರಿಕಲ್ಪನೆಯಡಿ ಬಲಿಷ್ಠ ಭಾರತ ನಿರ್ಮಾಣಕ್ಕೆ 2.53 ಲಕ್ಷ ಕೋಟಿ ರೂ. ಇದೆ ಬಜೆಟ್‌ 6.22 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ.

ದೇಶದಲ್ಲಿ 1,46,195 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. 16.6 ಲಕ್ಷ ನೇರ ಉದ್ಯೋಗ ಸೃಷ್ಟಿಯಾಗಿದ್ದರೆ 2 ಲಕ್ಷ ನವೋದ್ಯಮಿಗಳಿಗೆ ಅವಕಾಶ ದೊರೆತಿದೆ. ಜಲಜೀವನ್‌ ಮಿಷನ್‌ ಯೋಜನೆಯಲ್ಲಿ ಶೇ.74 ರಷ್ಟು ಪ್ರಗತಿಯಾಗಿದೆ. 12 ಕೋಟಿ ಶೌಚಾಲಯಗಳನ್ನು ದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಈಶಾನ್ಯ ರಾಜ್ಯ ಅಭಿವೃದ್ಧಿಗೆ 6.50 ಲಕ್ಷ ಕೋಟಿ ರೂ. ವ್ಯಯ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಸಾಧನೆಯನ್ನು ಬಣ್ಣಿಸಿದರು.

RELATED ARTICLES

Latest News