ಬೆಂಗಳೂರು, ಜ.30- ಬೆಲೆ ಏರಿಕೆಗೆ ಸಂಬಂಧಪಟ್ಟಂತೆ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆ ಮತ್ತು ವಾಗ್ವಾದ ನಡೆಯಿತು.ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಸಚಿವ ಸುರೇಶ್ಕುಮಾರ್ ಅವರು, ಆಡುಮುಟ್ಟದ ಸೊಪ್ಪಿಲ್ಲ, ಸಿದ್ದರಾಮಯ್ಯ ಸರ್ಕಾರ ಬೆಲೆ ಹೆಚ್ಚಳ ಮಾಡದ ವಸ್ತುಗಳಿಲ್ಲ, ಹಾಲು, ವಿದ್ಯುತ್, ಪ್ರಯಾಣದರ, ಕುಡಿಯುವ ನೀರಿನ ಬೆಲೆ ಹೆಚ್ಚಳಮಾಡಿದೆ.
ವಸತಿ-ವಾಣಿಜ್ಯ ತೆರಿಗೆ ಕಸದ ಶುಲ್ಕ, ಜನನ-ಮರಣ ಪತ್ರ ಶುಲ್ಕ, ಡಿಸೇಲ್ ಸೆಸ್, ಬಿಡಿಎ ಆಸ್ತಿ ತೆರಿಗೆ ಪ್ರಮಾಣ ಪತ್ರಗಳ ಬೆಲೆ, ವಿದ್ಯುತ್ ಪರಿವರ್ತಕಗಳು, ಜನರೇಟರ್ ಮೇಲಿನತೆರಿಗೆ, ಅಬಕಾರಿ ಶುಲ್ಕ ಮುಂದ್ರಾಂಕ ಮತ್ತು ನೋಂದಣಿ ಶುಲ್ಕ ಸೇರಿದಂತೆ ಎಲ್ಲಾ ಕಡೆಯೂ
ದರ ಹೆಚ್ಚಳ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಕೃಷಿ ಪಂಪ್ಸೆಟ್, ಲಾಲ್ಬಾಗ್ನ ಪ್ರವೇಶ ಬೆಲೆ ಹೆಚ್ಚಳ ಮಾಡಿದೆ ಎಂದು ಕಿಡಿಕಾರಿದರು.ಇದಕ್ಕೆ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿ, ಗ್ರಾಹಕರ ಬೆಲೆ ಸೂಚ್ಯಂಕ, ಡೀಸೆಲ್-ಪೆಟ್ರೋಲ್ ಬೆಲೆ, ಚಿನ್ನ-ಬೆಳ್ಳಿ ದರ, ಡಾಲರ್ ಮೌಲ್ಯ ಎಲ್ಲವೂ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಹಿರಿಯ ಸದಸ್ಯರು ಅರ್ಧ ಸತ್ಯ ಮಾತ್ರ ಹೇಳುವುದು ಬೇಡ,ಪೂರ್ತಿ ಮಾಹಿತಿ ಹೇಳಿ ಎಂದು ತಿರುಗೇಟು ನೀಡಿದರು.
ಬಿಜೆಪಿಯ ಸುನೀಲ್ಕುಮಾರ್ ಮಾತನಾಡಿ, ನೀವು ವಿಶ್ವಮಾನವರು ವಿಶ್ವದ ಎಲ್ಲ ವಿಚಾರವನ್ನೂ ಮಾತನಾಡುತ್ತೀರಾ, ನಾವು ಸಾಮಾನ್ಯರು ಸ್ಥಳೀಯ ವಿಚಾರಗಳನ್ನಷ್ಟೇ ಮಾತನಾಡುತ್ತೇವೆ. ಸರ್ಕಾರ ಬೆಲೆ ಏರಿಕೆ ಮಾಡಿರುವುದು ನಿಜವಲ್ಲವೇ ಎಂದರು. ಬಿಜೆಪಿಯ ಶಾಸಕ ಅರಗಜ್ಞಾನೇಂದ್ರ ಹಾಗೂ ಮತ್ತಿತರರು ಸುನೀಲ್ಕುಮಾರ್ಗೆ ಧ್ವನಿಗೂಡಿಸಿದರು.
ರಷ್ಯಾದಿಂದ ಕಚ್ಚಾತೈಲ ಖರೀದಿಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಅದರ ಲಾಭಾಂಶವನ್ನು ಜನರಿಗೆ ಗ್ರಾಹಕರಿಗೆ ತಲುಪಿಸಬೇಕಲ್ಲವೇ, ಪ್ರತಿ ಲೀಟರ್ ಡಿಸೇಲ್ ಬೆಲೆ 100 ರೂ. ಆಗಿದೆ. ಎಲ್ಲದಕ್ಕೂ ರಾಜ್ಯ ಸರ್ಕಾರವನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಪ್ರಿಯಾಂಕ್ಖರ್ಗೆ ಹೇಳಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಗಾಳಿ, ಬೆಳಕು, ನೀರು ಹೊರತು ಪಡಿಸಿ ಕೇಂದ್ರ ಸರ್ಕಾರ ಎಲ್ಲದಕ್ಕೂ ತೆರಿಗೆ ಹಾಕಿದೆ ಎಂದರು.
ಸಚಿವ ಭೈರತಿ ಸುರೇಶ್ ಮಾತನಾಡಿ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿದ್ದ ತೆರಿಗೆಯನ್ನು ಕೊಡಿಸಿ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗೆ ನೀಡುವ ವಿಶೇಷ ಅನುದಾನದ ಪೈಕಿ ಕನಿಷ್ಟ ಅರ್ಧದಷ್ಟಾದರೂ ನಮಗೆ ಕೊಡಿಸಿ ಎಂದು ಒತ್ತಾಯಿಸಿದರು.
ವಿಧಾನ ಸಭೆಯ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ಸಚಿವರ ಹಣದುಬ್ಬರದ ಬಗ್ಗೆ ಮಾತನಾಡುತ್ತಾರೆ. ಹಿಂದಿನ ಯುಪಿಎ ಸರ್ಕಾರದಲ್ಲಿ ಶೇ.8-9ರಷ್ಟು ಹಣದುಬ್ಬರವಿತ್ತು. ಪ್ರಧಾನಿ ಮೋದಿಯವರ ಅವಧಿಯಲ್ಲಿ ಶೇ.4ಕ್ಕೆ ಇಳಿಕೆಯಾಗಿದೆ ಎಂದು ಸಮರ್ಥಿಸಿಕೊಂಡರು. ಸಚಿವ ಸುರೇಶಕುಮಾರ್ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಡವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮಾತನಾಡಿ, ಇಲ್ಲಿ ಆರೋಗ್ಯಪೂರ್ಣ ಚರ್ಚೆಯಾಗಬೇಕು. ಎಲ್ಲರೂ ತಮಷ್ಟಕ್ಕೇ ತಾವು ಎದ್ದುನಿಂತು ಗಲಾಟೆ ಮಾಡಿದರೆ ಯಾರು ಏನು ಹೇಳುತ್ತಿದ್ದಾರೆ ಎಂಬುದು ಅರ್ಥವಾಗುವುದಿಲ್ಲ .ಜನರಿಗೆ ಸರಿಯಾದ ಮಾಹಿತಿ ತಿಳಿಯುವುದಿಲ್ಲ ಎಂದು ಹೇಳಿದರು.
