-ಶಿವಣ್ಣ
ದೇಶಕ್ಕೆ ಅನ್ನ ನೀಡುವ ಅನ್ನದಾತರು ಖುಷಿ ಪಟ್ಟಿದ್ದಕ್ಕಿಂತ ಸಂಕಷ್ಟ ಅನುಭವಿಸುತ್ತಿರುವುದೇ ಹೆಚ್ಚು. ಹವಾಮಾನ ಬದಲಾಗಲಿ, ಸರ್ಕಾರ ಬದಲಾಗಲಿ, ರೈತರು ಮಾತ್ರ ನಿತ್ಯ ಕಾಯಕ ನಿಲ್ಲಿಸುವುದಿಲ್ಲ. ಉದ್ಯಮಿಯಂತೆ ಲಾಭ-ನಷ್ಟದ ಲೆಕ್ಕಾಚಾರ ಮಾಡುವುದಿಲ್ಲ. ಆಹಾರ ಧಾನ್ಯಗಳು, ಹಣ್ಣು, ತರಕಾರಿ ಸೇರಿದಂತೆ ತಮ ಅನುಕೂಲಕ್ಕೆ ತಕ್ಕಂತೆ ಬೆಳೆಯುತ್ತಿದ್ದಾರೆ.
ಒಂದೆಡೆ ಮಳೆಯ ಕಣ್ಣಾಮುಚ್ಚಾಲೆ ಆಟ, ಮತ್ತೊಂದೆಡೆ ಅಂರ್ತಜಲ ಕುಸಿತ. ಸಾಲದೆಂಬಂತೆ ರಸಗೊಬ್ಬರ, ಕೀಟನಾಶಕಗಳ ಬೆಲೆ ದುಬಾರಿ. ವಾಸ್ತವ ಪರಿಸ್ಥಿತಿ ಹೀಗಿದ್ದರೂ ಸಾಲ ಮಾಡಿಯಾದರೂ ಬೆಳೆ ಬೆಳೆಯುವುದನ್ನು ರೈತರು ನಿಲ್ಲಿಸುವುದಿಲ್ಲ. ಮನೆ ಮಂದಿಯೆಲ್ಲಾ ಕಷ್ಟಪಟ್ಟು ಬೆಳೆದ ಫಸಲು ಬೆಲೆ ಕುಸಿತಕ್ಕೆ ಒಳಗಾಗಿ ಭಾರೀ ನಷ್ಟ ಉಂಟಾದಾಗ ಆಗುವ ಆತಂಕ ಅಷ್ಟಿಷ್ಟಲ್ಲ. ಆಕಾಶವೇ ಕಳಚಿ ಬಿದ್ದಂತೆ ರೈತರಿಗೆ ಭಾಸವಾಗುತ್ತದೆ.
ತಪ್ಪಿಸಲಾಗದ ಬೆಲೆ ಕುಸಿತ
ಬೆಲೆ ಕುಸಿತದಿಂದಾಗುವ ಹಾನಿ ತಪ್ಪಿಸಲು ಸರ್ಕಾರವು ಬೆಂಬಲ ಬೆಲೆಯಡಿ ಕೃಷಿ ಉತ್ಪನ್ನಗಳ ಖರೀದಿ, ಪ್ರೋತ್ಸಾಹಧನ ನೀಡಿದರೂ ರೈತರಿಗೆ ಉಂಟಾಗಿರುವ ನಷ್ಟ ತಪ್ಪಿಸಲಾಗುವುದಿಲ್ಲ. ಕಷ್ಟಪಟ್ಟು ಬೆಳೆದ ಫಸಲಿನ ಲಾಭ ಇತ್ತ ರೈತರಿಗೂ ದೊರೆಯುವುದಿಲ್ಲ, ಅತ್ತ ಗ್ರಾಹಕರಿಗೂ ಸಿಗುವುದಿಲ್ಲ. ನಿಯಂತ್ರಿತ ಮಾರುಕಟ್ಟೆ, ವಿವಿಧ ಮೇಳಗಳನ್ನು ಆಯೋಜಿಸಿದರೂ ರೈತರಿಗಾಗುವ ಬೆಲೆ ಕುಸಿತದ ನಷ್ಟ ತಪ್ಪಿಸಲಾಗುತ್ತಿಲ್ಲ.
ಬಹುಪಾಲು ಲಾಭವೆಲ್ಲಾ, ಮಧ್ಯವರ್ತಿಗಳು, ದಲ್ಲಾಳಿಗಳು, ವರ್ತಕರ ಪಾಲಾಗುತ್ತಿರುವುದು ಸುಳ್ಳಲ್ಲ. ಸುಗ್ಗಿ ಕಾಲದಲ್ಲಿ ಹೇರಳವಾಗಿ ಮಾರುಕಟ್ಟೆಗೆ ಬರುವ ಫಸಲಿನ ಲಾಭವನ್ನು ಮಧ್ಯವರ್ತಿಗಳು ಪಡೆಯುತ್ತಾ ಬಂದಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ಇದುವರೆಗೂ ಮಾಡಿರುವ ಹಲವು ಪ್ರಯತ್ನಗಳು ಸೂಕ್ತ ಫಲ ನೀಡಿಲ್ಲ. ಕೃಷಿ ಬೆಲೆ ಆಯೋಗವು ಅಸ್ತಿತ್ವದಲ್ಲಿದ್ದರೂ ರೈತರನ್ನು ಕಷ್ಟದಿಂದ ಪಾರು ಮಾಡಲು ಸಾಧ್ಯವಾಗುತ್ತಿಲ್ಲ.
ಈರುಳ್ಳಿ, ಟೊಮಾಟೋ, ಕಬ್ಬು, ಕೊಬ್ಬರಿ, ಮೆಕ್ಕೆಜೋಳ, ಮಾವು ಸೇರಿದಂತೆ ಹಲವು ಬೆಳೆ ಬೆಳೆಯುವ ರೈತರು ಬೆಲೆ ಕುಸಿತದಿಂದ ಕಂಗಾಲಾಗುವುದನ್ನು ಆಗಾಗ್ಗೆ ನೋಡುತ್ತೇವೆ. ಆಗೊಮೆ, ಈಗೊಮೆ ರೈತರಿಗೆ ಉತ್ತಮ ಧಾರಣೆ ಸಿಕ್ಕಿ ಲಾಭವಾಗಿರುವುದೂ ಉಂಟು.
ಯುವಕರು ಕೃಷಿಯಿಂದ ವಿಮುಖ:
ಈಗ ಕೃಷಿ ಮತ್ತು ತೋಟಗಾರಿಕೆ ಹೆಚ್ಚು ಯಾಂತ್ರೀಕರಣವಾಗಿದೆ. ಜೊತೆಗೆ ದುಬಾರಿಯೂ ಆಗಿದೆ. ಕೃಷಿ ಕಾರ್ಮಿಕರ ಅಭಾವ ಎಲ್ಲೆಡೆ ಸಾಮಾನ್ಯವಾಗಿದೆ. ಇದರಿಂದ ಕೃಷಿ ಮಾಡಿ ಕೈ ಸುಟ್ಟುಕೊಳ್ಳುವುದಕ್ಕಿಂದ ವಿಮುಖರಾಗುವುದೇ ಲೇಸು ಎಂಬ ಭಾವನೆ ಯುವ ಸಮುದಾಯದಲ್ಲಿ ಮನೆ ಮಾಡಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಭವಿಷ್ಯದಲ್ಲಿ ಆಹಾರಕ್ಕೆ ಹಾಹಾಕಾರ ಉಂಟಾದರೂ ಅಚ್ಚರಿ ಪಡಬೇಕಿಲ್ಲ.
ಮಧ್ಯಪ್ರಾಚ್ಯದಲ್ಲಿ ಉಂಟಾದ ಯದ್ಧದ ಪರಿಣಾಮದಿಂದ ತೈಲ, ಅನಿಲದ ವಿಚಾರದಲ್ಲಿ ಎದುರಿಸಿದ, ಎದುರಿಸಬೇಕಾದ ಸಮಸ್ಯೆಗಳು ಕಣ್ಣು ಮುಂದಿವೆ. ಆಹಾರದ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿರುವ ನಾವು ಪರಾವಲಂಬಿಯಾದರೆ ಭವಿಷ್ಯದಲ್ಲಿ ಭಾರೀ ಗಂಡಾಂತರ ಎದುರಿಸಬೇಕಾಗುವುದು. ಇದು ಎಲ್ಲಾ ಕ್ಷೇತ್ರಗಳಿಗೂ ಎಚ್ಚರಿಕೆ ಗಂಟೆ ಎಂದರೆ ತಪ್ಪಾಗಲಾರದು.
ಮಾರಾಟಗಾರರಾಗಬೇಕು:
ಉದಾಹರಣೆಗೆ ಬೆಲೆ ಕುಸಿತವಾದಾಗ ಟೊಮಾಟೋವನ್ನು ರಸ್ತೆಗೆ ಸುರಿಯುವ ಬದಲು ಕೆಚಪ್, ಸಾಸ್ ಮಾಡಿ ಮಾರಾಟ ಮಾಡಿ ಹೆಚ್ಚು ಲಾಭ ಗಳಿಸಬಹುದು. ಇವುಗಳನ್ನು ಹೆಚ್ಚು ಸಮಯ ಸಂಗ್ರಹಿಸಿಡಬಹುದು. ಶೀತಲ ಗೃಹಗಳಲ್ಲಿ ದಾಸ್ತಾನು ಮಾಡಿ ಬೆಲೆ ಏರಿಕೆಯಾದಾಗ ಮಾರಾಟ ಮಾಡಬಹುದು. ಅಂದರೆ, ಸಾಂಪ್ರದಾಯಿಕ ಮಾರಾಟ ವ್ಯವಸ್ಥೆಯಿಂದ ಹೊರಬರಬೇಕು.
ವಾಸ್ತವ ಸಂಗತಿಯನ್ನು ಅರಿತು ರೈತರು ಜಾಗೃತರಾಗಬೇಕು. ಉತ್ತಮ ಬೆಳೆ ಬೆಳೆದರೆ ಮಾತ್ರ ಸಾಲದು, ಉತ್ತಮ ಮಾರಾಟಗಾರರು ಆಗಬೇಕು. ಈಗಾಗಲೇ ಬೆರಳೆಣಿಕೆಯಷ್ಟು
ರೈತರು ತಾವು ಬೆಳೆದ ಉತ್ಪನ್ನವನ್ನು ಮಾರಾಟ ಮಾಡಿ ನಷ್ಟದಿಂದ ಪಾರಾಗುವ ದಾರಿ ಕಂಡುಕೊಂಡಿದ್ದಾರೆ. ಬೆಳೆಗಾರರು ಮಾರಾಟಗಾರರಾದರೆ, ಬೆಲೆ ಕುಸಿತದ ಸಮಸ್ಯೆ ಯಿಂದಾಗುವ ನಷ್ಟ ತಗ್ಗಿಸಬಹುದು.
ರೈತರಿಗೆ ಸಿಗದ ಬೆಲೆ ನಿಗದಿ ಅಧಿಕಾರ
ಹೀಗಾಗಿ ಯುವ ಸಮುದಾಯ ಕೃಷಿಯಿಂದ ವಿಮುಖರಾಗದೆ, ಯಾಂತ್ರಿಕತೆ ಹಾಗೂ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಂಡು ಅಧಿಕ ಇಳುವರಿಯ ಉತ್ತಮ ಫಸಲು ಪಡೆಯುವ ಸಾಧ್ಯತೆ ಇದೆ. ಉದ್ಯಮಿ ತಾನು ಉತ್ಪಾದಿಸಿದ ವಸ್ತುವಿಗೆ ಮಾರಾಟ ಬೆಲೆ ನಿಗದಿ ಪಡಿಸುತ್ತಾನೆ. ಆದರೆ, ರೈತರಿಗೆ ಇದುವರೆಗೆ ಅಂತಹ ಅವಕಾಶ ಸಿಕ್ಕಿಲ್ಲ. ಹಾಗಂದ ಮಾತ್ರಕ್ಕೆ ಕೈಕಟ್ಟಿ ಕೂರುವ ಅಗತ್ಯವಿಲ್ಲ.
ಈಗ ಅಂಗೈಯಲ್ಲಿರುವ ಮೊಬೈಲ್ನಲ್ಲೇ ಮಳೆ, ಬೆಳೆ, ಮಾರುಕಟ್ಟೆ, ರಿಯಾಯ್ತಿ, ಸಹಾಯ ಧನ, ಸಲಹೆ ಸೇರಿದಂತೆ ಬಹಳಷ್ಟು ಮಾಹಿತಿ ಪಡೆಯುವ ಅವಕಾಶವಿದೆ. ಇದನ್ನು ಬಳಸಿಕೊಂಡು ಉತ್ತಮ ಬೆಳೆ-ಫಸಲು ಬೆಳೆಯುವುದು ಒಂದೆಡೆಯಾದರೆ, ಮತ್ತೊಂದೆಡೆ ಅದನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು. ಇತ್ತೀಚೆಗೆ ಆನ್ಲೈನ್ ಮಾರುಕಟ್ಟೆ ಹೆಚ್ಚು ಜನಪ್ರಿಯವಾಗುತ್ತಿದೆ. ಗ್ರಾಹಕರು, ತಾಜಾ ಹಣ್ಣು, ತರಕಾರಿ, ಆಹಾರಕ್ಕೆ ಒಲವು ತೋರುತ್ತಿದ್ದಾರೆ. ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಲು ಮುಂದಾಗಬೇಕು.
ಮೌಲ್ಯವರ್ಧನೆಯಾಗಬೇಕು
ಹೀಗಾಗಿ ರೈತರು ತಾವು ಬೆಳೆದ ಬೆಳೆಯನ್ನು ಸ್ಥಳೀಯವಾಗಿಯಾದರೂ ಮಾರಾಟ ಮಾಡುವುದನ್ನು ರೂಢಿಸಿಕೊಳ್ಳಬೇಕು. ಉದ್ಯಮಿಯಂತೆ ಬೆಳೆಗೆ ಮಾಡಿದ ಖರ್ಚಿನ ಲೆಕ್ಕಚಾರ ಮಾಡಿ ಫಸಲಿನ ಬೆಲೆ ನಿರ್ಧರಿಸಬೇಕು. ನೇರವಾಗಿ ಹಣ್ಣು, ಆಹಾರ ಧಾನ್ಯ ಮಾರಾಟ ಮಾಡುವುದಕ್ಕಿಂತ ಮೌಲ್ಯವರ್ಧನೆಗೆ ಒಳಪಡಿಸಿದರೆ, ಎರಡರಿಂದ ಮೂರು ಪಟ್ಟು ಲಾಭ ಗಳಿಸಲು ಸಾಧ್ಯ.
ಅಂದರೆ, ರೈತರಿಂದ ಖರೀದಿಸುವ, ಮಾವು, ಕಿತ್ತಲೆ, ನೇರಳೆ ಮೊದಲಾದ ಹಣ್ಣುಗಳನ್ನು ಜ್ಯೂಸ್ ರೂಪದಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕಂಪನಿಗಳು ಲಾಭ ಗಳಿಸುತ್ತವೆ. ಇದನ್ನು ರೈತರೇ ಮಾಡಬಹುದು. ಸ್ಥಳೀಯವಾಗಿ ನಡೆಯುವ ಸಭೆ, ಸಮಾರಂಭಗಳಿಗೆ ಸರಬರಾಜು ಮಾಡಿ ಲಾಭ ಗಳಿಸಲು ಸಾಧ್ಯವಿದೆ. ಇದನ್ನು ಒಬ್ಬರಿಂದ ಮಾಡಲು ಸಾಧ್ಯವಾಗದಿದ್ದರೆ, ಸಂಘಟಿತರಾಗಿ ಮೌಲ್ಯವರ್ಧನೆಗೆ ಕೃಷಿ ಉತ್ಪನ್ನಗಳನ್ನು ಒಳಪಡಿಸುವುದು ಸೂಕ್ತ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆ-ಕಾರ್ಯಕ್ರಮಗಳಡಿ, ಸಹಾಯಧನ, ಪ್ರೋತ್ಸಾಹಧನವೂ ಸಿಗಲಿದೆ.
