ಬೆಳಗಾವಿ,ಮೇ 18- ಉದಯೋನ್ಮುಖ ಉದ್ಯಮಿ ಶಿವಾನಂದ ನೀಲಣ್ಣವರ ವಿರುದ್ಧ ಕಾಣದ ರಾಜಕೀಯ ಷಡ್ಯಂತ್ರ ನಡೆದಿದೆ. ಆತ ಪ್ರಾಮಾಣಿಕ ವ್ಯವಹಾರಸ್ಥ ಎಂದು ಮಹಾರಾಷ್ಟ್ರ ಮೂಲದ ಹೂಡಿಕೆದಾರರೊಬ್ಬರ ವೀಡಿಯೋ ವೈರಲ್ ಆಗಿದೆ.
ಶಿವಾನಂದ ನೀಲಣ್ಣವರ ಯಾರಿಗೂ ಮೋಸ ಮಾಡಿಲ್ಲ. ಕರೋನಾ ಕಷ್ಟದ ಕಾಲದಲ್ಲೂ ಹೂಡಿಕೆದಾರರಿಗೆ ಸರಿಯಾಗಿ ಬಡ್ಡಿ ಪಾವತಿಸಿದ್ದಾರೆ. ಸಂಕಷ್ಟದ ಜನರಿಗೆ ಸಹಾಯಕರಾಗಿದ್ದ ನೀಲಣ್ಣವರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಿ ಬಂಧಿಸಲಾಗಿದೆ ಎಂದು ವಿಡಿಯೋ ಮಾಡಲಾಗಿದೆ.
ಮಹಾರಾಷ್ಟ್ರ ಠಾಣೆ ಮೂಲದ ರೋಹಿತ್ ಅಗರವಾಲ್ ಎಂಬ ಹೆಸರಿನಲ್ಲಿ ವಿಡಿಯೋ ವೈರಲ್ ಆಗಿದ್ದು, ತಾನು ಮಾಜಿ ಸೈನಿಕನಾಗಿ ಶಿವಂ ಅಸೋಸಿಯೇಟ್‌್ಸನಲ್ಲಿ ಹಣ ಹೂಡಿಕೆ ಮಾಡಿದ್ದೇನೆ. ನಮಗೆ ತಿಳಿದಂತೆ ಯಾವ ಗ್ರಾಹಕರಿಗೂ ಮೋಸ ಆಗಿಲ್ಲ. ಎಲ್ಲ ಗ್ರಾಹಕರೂ ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದು ವಿಡಿಯೋ ಸಾರಾಂಶ ಹೊರಬಿದ್ದಿದೆ.
ನೀಲಣ್ಣವರಿಂದ ಉಡುಗೊರೆ ಪಡೆದವರಿಗೂ ಕಂಟಕ :
ಬೆಳಗಾವಿ,ಮೇ18- ಕಳೆದ ಡಿ.27 ರಂದು ನಗರದ ಸರದಾರ್ಸ್ ಮೈದಾನದಲ್ಲಿ ಶಿವಂ ಅಸೋಸಿಯೇಟ್‌್ಸಮಾಲೀಕ ಶಿವಾನಂದ ನೀಲಣ್ಣವರ ಪ್ರಾಯೋಜಕತ್ವದಲ್ಲಿ ಬೆಳಗಾವಿ ಉತ್ಸವ ಮಾಡಿಸಿ 1.5 ಕೋಟಿ ರೂ. ಸಾರ್ವಜನಿಕರ ಠೇವಣಿ ಹಣದಿಂದ ಆರ್.ಅಭಿಲಾಷ್ ಎಂಬುವರು ಐಷಾರಾಮಿ ಕಾರನ್ನು ಉಡುಗೊರೆಯಾಗಿ ಪಡೆದಿದ್ದನ್ನು ತನಿಖೆಗೆ ಒಳಪಡಿಸಲು ಸಿಐಡಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಠೇವಣಿದಾರರ ಹೂಡಿಕೆಯ ಹಣದಿಂದಲೇ ಅಭಿಲಾಷ್ ಐಷಾರಾಮಿ ಕಾರು ಉಡುಗೊರೆ ಪಡೆದಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಕಾರು ತನಿಖೆಗೆ ಬೇಕಾಗುತ್ತದೆ. ಅದನ್ನು ಸಿಐಡಿಗೆ ಹಸ್ತಾಂತರ ಮಾಡಬೇಕೆಂದು ಅಭಿಲಾಷ್‌ಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಐಶಾರಾಮಿ ಕಾರು ಉಡುಗೊರೆ ಪಡೆದಿದ್ದನ್ನು ಅಭಿಲಾಷ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋ ಹಂಚಿಕೊಂಡಿದ್ದರು.ಯಾವಾಗ ಉಡುಗೊರೆ ಪಡೆದವರಿಗೂ ಕಂಟಕ ಎಂದು ತಿಳಿದು ಬರುತ್ತಿದ್ದಂತೆ ಅವರು ಆ ಪೋಸ್ಟ್ ಡಿಲಿಟ್ ಮಾಡಿದ್ದರು ಎನ್ನಲಾಗಿದೆ. ಈ ಮಧ್ಯೆ ಸಿಐಡಿ ಡಿಐಜಿ ಡಾ. ಭೀಮಾಶಂಕರ ಗುಳೇದ ತನಿಖೆ ಚುರುಕುಗೊಳಿಸಿದ್ದು, ನೀಲಣ್ಣವರ ಬಂಧನದ ತರುವಾಯ ಈಗ ಆತನ ಬೆನ್ನಿಗೆ ಗ್ರಾಹಕರು ಬರುತ್ತಿರುವುದು ಗಮನ ಸೆಳೆದಿದೆ.
