Homeರಾಜ್ಯಕರ್ನಾಟಕದ ಅಧಿಕಾರ ಹಂಚಿಕೆ ಕಚ್ಚಾಟಕ್ಕೆ ಕೇರಳಂನಲ್ಲಿ ಇಂದು ತೆರೆಬೀಳುವ ಸಾಧ್ಯತೆ

ಕರ್ನಾಟಕದ ಅಧಿಕಾರ ಹಂಚಿಕೆ ಕಚ್ಚಾಟಕ್ಕೆ ಕೇರಳಂನಲ್ಲಿ ಇಂದು ತೆರೆಬೀಳುವ ಸಾಧ್ಯತೆ

Karnataka's power-sharing dispute

ಬೆಂಗಳೂರು, ಮೇ 18- ರಾಜ್ಯ ರಾಜಕಾರಣದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿರುವ ಅಧಿಕಾರ ಹಂಚಿಕೆಯ ಕುರಿತಂತೆ ಇಂದು ಕೇರಳದಲ್ಲಿ ಮಹತ್ವದ ಸಮಾಲೋಚನೆ ನಡೆದು ಬಹುತೇಕ ತಾರ್ಕಿಕ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್‌ ಇಂದು ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಸಂಸದೆ ಪ್ರಿಯಾಂಕ ಗಾಂಧಿ ವಾದ್ರಾ ಅವರು ಭಾಗವಹಿಸಿದ್ದರು.

ಪ್ರಮಾಣವಚನ ಸ್ವೀಕಾರ ಸಮಾರಂಭದ ಬಳಿಕ ಹೈಕಮಾಂಡ್‌ನ ಪ್ರಮುಖ ನಾಯಕರು ರಾಜ್ಯ ನಾಯಕರ ಜೊತೆ ಪ್ರತ್ಯೇಕ ಸಮಾಲೋಚನೆ ನಡೆಸಿ, ಸಾಧನಾ ಸಮಾವೇಶಕ್ಕೆ ಶುಭ ಕೋರಿದ್ದಾರೆ ಎನ್ನಲಾಗಿದೆ.ಇದೇ ವೇಳೆ ಅಧಿಕಾರ ಹಂಚಿಕೆಯ ಬಗ್ಗೆ ಹೈಕಮಾಂಡ್‌ನ ವರಿಷ್ಠರು ರಾಜ್ಯ ನಾಯಕರುಗಳ ಜೊತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ನಾಳೆ ತುಮಕೂರಿನಲ್ಲಿ ನಡೆಯುವ ಸಾಧನಾ ಸಮಾವೇಶಕ್ಕೆ ರಾಹುಲ್‌ಗಾಂಧಿ ಅವರು ಭಾಗವಹಿಸುವ ಸಾಧ್ಯತೆ ಕಡಿಮೆ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ.

ಕೇರಳದ ಕಾರ್ಯಕ್ರಮದಲ್ಲಿ ಭಾಗವಹಿಸಲು ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಒಟ್ಟಿಗೆ ಪ್ರಯಾಣಿಸಿದ್ದಾರೆ. ಈ ಮೊದಲು ಹಲವಾರು ಸಂದರ್ಭದಲ್ಲಿ ರಾಹುಲ್‌ಗಾಂಧಿ, ಮಲ್ಲಿಕಾರ್ಜುನ್‌ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಪರಸ್ಪರ ಸ್ಪಂದಿಸಲು ಅವಕಾಶ ಸಿಗಲಿಲ್ಲ. ರಾಹುಲ್‌ಗಾಂಧಿ ಅವರು ಭೇಟಿಯಾದರೆ, ಖರ್ಗೆ ಅವರು ಭೇಟಿಯಾಗಲು ಅವಕಾಶ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಎಲ್ಲರೂ ಲಭ್ಯವಾಗುತ್ತಿದ್ದು ಜೊತೆಗೆ ಕೆ.ಸಿ.ವೇಣುಗೋಪಾಲ್‌, ಪ್ರಿಯಾಂಕ ಗಾಂಧಿ ವಾದ್ರಾ ಅವರು ಲಭ್ಯವಾಗುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಮಹತ್ವದ ಸಮಾಲೋಚನೆಗಳಾಗುವ ಸಾಧ್ಯತೆ ದಟ್ಟವಾಗಿದೆ. ನಾಳೆ ನಡೆಯುವ ಸಾಧನಾ ಸಮಾವೇಶದಲ್ಲಿ ಬಹುತೇಕ ನಾಯಕತ್ವ ವಿವಾದ ಕುರಿತು ಪಕ್ಷದ ಹಿರಿಯ ನಾಯಕರು ಸಂದೇಶ ರವಾನಿಸುವ ಸಾಧ್ಯತೆ ಇದೆ. ಅದಕ್ಕೂ ಪೂರ್ವ ಭಾವಿಯಾಗಿ ಇಂದು ಕೇರಳದ ತಿರುವನಂತಪುರಂನಲ್ಲಿ ಮಹತ್ವದ ಚರ್ಚೆಯಾಗಲಿದೆ. ಇದಕ್ಕಾಗಿ ಕಾರ್ಯಕ್ರಮ ಮುಗಿದ ಬಳಿಕ ಪ್ರತ್ಯೇಕ ಸಮಯ ಮೀಸಲಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News