ನವದೆಹಲಿ,ಜು.25- ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಡರಾತ್ರಿಯ ವೀಡಿಯೊ ಸಂದೇಶಕ್ಕೆ ಯುವಜನರು ಹಾಗೂ ದೇಶದ ವಿದ್ಯಾರ್ಥಿ ಗಳಿಂದ ದೊರೆತ ಅಗಾಧ ಪ್ರತಿಕ್ರಿಯೆಗೆ ಧನ್ಯ ವಾದಗಳನ್ನು ಅರ್ಪಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಯುವ ಸಮೂಹ ನೀಡಿರುವ ಸಕಾರಾತಕ ಸಲಹೆಗಳು ಹಾಗೂ ತೋರಿಸಿರುವ ಪ್ರೀತಿಯು ತಮೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರು ಗುರುವಾರ ತಡರಾತ್ರಿ ಹಂಚಿಕೊಂಡಿದ್ದ ವಿಡಿಯೋ ಸಂದೇಶಕ್ಕೆ ಜಾಲತಾಣಗಳಲ್ಲಿ ಅಭೂತಪೂರ್ವ ಜನಮನ್ನಣೆ ದೊರೆತಿದೆ. ಇದು ಇನ್‌ಸ್ಟಾಗ್ರಾಮ್ ಸೇರಿದಂತೆ ಇತ್ಯಾದಿ ಸಾಮಾಜಿಕ ವೇದಿಕೆಗಳಲ್ಲಿ ಕೋಟ್ಯಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ನೀಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇದರ ವಿರುದ್ಧ ಕಠಿಣ ಶಿಕ್ಷೆ ಹಾಗೂ ತ್ವರಿತ ನ್ಯಾಯಾಲಯಗಳ ಸ್ಥಾಪನೆ ಕುರಿತ ಕರಡು ಮಸೂದೆಗೆ ಕೇಂದ್ರ ಸಂಪುಟ ಸಭೆಯಲ್ಲಿ ಚರ್ಚಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರ ಶ್ರಮ ಹಾಗೂ ಆತಂಕಕ್ಕೆ ಸ್ಪಂದಿಸುವುದು ಸರ್ಕಾರದ ಮೊದಲ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ತಮ ಅಮೂಲ್ಯ ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಲು ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.
ಸಚಿವರು ಹಾಗೂ ಸಂಪುಟ ಸಹೋದ್ಯೋಗಿಗಳು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತಷ್ಟು ಸಕ್ರಿಯವಾಗಿರಬೇಕು ಮತ್ತು ಯುವಜನತೆಯ ಸಮಸ್ಯೆಗಳಿಗೆ ಸ್ಪಂದಿಸಲು ಈ ವೇದಿಕೆಗಳನ್ನು ಬಳಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ವಿಶೇಷವಾಗಿ ಒತ್ತಿಹೇಳಿದ್ದಾರೆ.
