ಬೆಂಗಳೂರು, ಮೇ 18- ಪೊಲೀಸ್ ವಶದಲ್ಲಿದ್ದಾಗ ಸಂಭವಿಸುವ ಸಾವುಗಳ ವಿಚಾರಣೆ ಹಾಗೂ ಅದಕ್ಕೆ ಸಂಬಂಧಿಸಿದಂತಹ ಪ್ರಕ್ರಿಯೆಗಳ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಪ್ರಮಾಣಿತ ಕಾರ್ಯವಿಧಾನ ಸ್ಥಾಯಿ ಆದೇಶ ಹೊರಡಿಸಿದ್ದಾರೆ.
ಬಂಧನದಲ್ಲಿನ ಹಿಂಸೆ ಹಾಗೂ ಬಂಧನದಲ್ಲಿನ ಸಾವು ಸೇರಿದಂತೆ ಪ್ರತ್ಯೇಕ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳು ಮತ್ತು ಸಿಐಡಿ ತನಿಖಾಧಿಕಾರಿಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ಮಾರ್ಗ ಸೂಚಿಗಳನ್ನು ಎಲ್ಲಾ ಪೊಲೀಸ್ ಆಯುಕ್ತರಿಗೆ, ವಿಭಾಗವಾರು ಐಜಿಗಳು, ಡಿಐಜಿಗಳು ಹಾಗೂ ಎಸ್ಪಿಗಳಿಗೆ ರವಾನಿಸಲಾಗಿದೆ.
ಬಂಧನದಲ್ಲಿನ ಹಿಂಸೆ ಅಥವಾ ಸಾವಿನ ಪ್ರಕರಣಗಳಲ್ಲಿ ಏಕರೂಪವಾದ ತನಿಖಾ ವಿಧಾನ ಅನುಸರಿಸುತ್ತಿಲ್ಲ. ಎಫ್‌ಐಆರ್ ದಾಖಲಿಸಲು ವಿಳಂಬವಾಗುತ್ತಿದೆ. ಪ್ರಮುಖ ಭೌತಿಕ ಹಾಗೂ ಡಿಜಿಟಲ್ ಸಾಕ್ಷ್ಯ ಸಂಗ್ರಹಣೆಯಲ್ಲಿ ಲೋಪಗಳು ಕಂಡು ಬರುತ್ತಿವೆ ಎಂದು ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಮ್ ತಿಳಿಸಿದ್ದಾರೆ.
ಸಿಐಡಿ ಅಧಿಕಾರಿಗಳು ತನಿಖೆ ವಹಿಸಿಕೊಳ್ಳುವ ವೇಳೆಗೆ ತಾಂತ್ರಿಕ ಲೋಪಗಳು ಉಂಟಾಗಿ ಪ್ರಮುಖ ಸಾಕ್ಷ್ಯಗಳು ಹಾಳಾಗುವ ಸಾಧ್ಯತೆ ಇದೆ. ಇದು ತನಿಖೆಯ ಗುಣಮಟ್ಟ ಹಾಗೂ ನ್ಯಾಯಾಂಗ ಪ್ರಕ್ರಿಯೆಗೆ ಹಾನಿಯುಂಟು ಮಾಡಲಿದೆ. ಇನ್ನು ಮುಂದೆ ಎಲ್ಲಾ ಪೊಲೀಸ್ ಅಧಿಕಾರಿಗಳು ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ)ಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿದ್ದಾರೆ.
ಘಟನೆ ನಡೆದ ತಕ್ಷಣವೇ ಠಾಣಾಧಿಕಾರಿ ಪೀಡಿತನ, ಪೀಡಿತ ವ್ಯಕ್ತಿಯ ಬಂಧುಗಳು ಅಥವಾ ಇತರೆ ವ್ಯಕ್ತಿಗಳ ದೂರಿನ ಆಧಾರದ ಮೇಲೆ ಅಥವಾ ಸ್ವಯಂ ಪ್ರೇರಿತವಾಗಿ ವಿಳಂಬವಿಲ್ಲದಂತೆ ಪ್ರಕರಣ ದಾಖಲಿಸಬೇಕು. ತಕ್ಷಣವೇ ಎಫ್‌ಐಆರ್ ಪ್ರತಿಯೊಂದಿಗೆ ತುರ್ತು ವರದಿಯನ್ನು ಘಟಕದ ಮುಖ್ಯಸ್ಥರಿಗೆ ಹಾಗೂ ಮುಖ್ಯ ಕಚೇರಿಗೆ ಸರಿಯಾದ ಮಾರ್ಗದಲ್ಲಿ ಕಳುಹಿಸಬೇಕು ಎಂದು ಸೂಚಿಸಲಾಗಿದೆ.
ಸಿಐಡಿ ಹಸ್ತಾಂತರಿಸುವವರೆಗೂ ಘಟಕದ ಹಿರಿಯ ಅಧಿಕಾರಿಯಿಂದ ನಿಷ್ಪಕ್ಷಪಾತ ತನಿಖೆ ನಡೆಯುವಂತೆ ನೋಡಿಕೊಳ್ಳಬೇಕು. ಭಾರತೀಯ ನಾಗರಿಕಾ ಸುರಕ್ಷಾ ಸಂಹಿತೆ ಪ್ರಕಾರ ಡಿವೈಎಸ್ಪಿ ಅಥವಾ ಅದಕ್ಕಿಂತ ಮೇಲಿನ ಹುದ್ದೆಯ ಅಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಬೇಕೆಂದು ಸೂಚಿಸಲಾಗಿದೆ.
ಬಂಧನದಲ್ಲಿನ ಹಿಂಸೆ ಪ್ರಕರಣದಲ್ಲಿ ಸ್ಥಳೀಯ ಅಧಿಕಾರಿಗಳು ತಕ್ಷಣವೇ ಸ್ಥಳ ಮಹಜರು ನಡೆಸಬೇಕು. ಭೌತಿಕ ಹಾಗೂ ಪರಿಸ್ಥಿತಿ ಜನ್ಯ ಸಾಕ್ಷ್ಯಗಳನ್ನು ಆಡಿಯೋ, ವಿಡಿಯೋ ಮಾದರಿಯಲ್ಲಿ ಸಂಗ್ರಹಿಸಬೇಕು. ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಕಾನೂನು ಬದ್ಧವಾಗಿ ವಶಪಡಿಸಿಕೊಳ್ಳಬೇಕು. ಪೀಡಿತರ ಹೇಳಿಕೆಯನ್ನು ದಾಖಲಿಸಬೇಕು ಮತ್ತು ವೈದ್ಯಕೀಯ ಪರೀಕ್ಷಾ ವರದಿಗಳನ್ನು ಸಂಗ್ರಹಿಸಬೇಕು. ಸಿಐಡಿ ತನಿಖೆ ಆರಂಭಿಸುವವರೆಗೂ ತನಿಖೆ ಮುಂದು ವರಿಸಬೇಕೆಂದು ಸೂಚಿಸಲಾಗಿದೆ.
ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ ಬಳಿಕ ಹಿಂದಿನ ತನಿಖಾಧಿಕಾರಿಯೂ ಒದಗಿಸಿದ ದಾಖಲಾತಿಗಳು ಹಾಗೂ ಪ್ರಕರಣ ದಿನಚರಿಗಳನ್ನು ಪರಿಶೀಲಿಸಬೇಕು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ಮತ್ತು ಭೌತಿಕ ಸಾಕ್ಷ್ಯಗಳನ್ನು ಖಚಿತಪಡಿಸಿಕೊಳ್ಳಬೇಕು. ಸಾಕ್ಷಿದಾರರ ಹೇಳಿಕೆಗಳನ್ನು ಮರು ಪರೀಕ್ಷಿಸಬೇಕು. ನೇರ, ಪರೋಕ್ಷದಾರರ ಹೇಳಿಕೆಗಳನ್ನು ದಾಖಲಿಸಬೇಕು. ಸಿಸಿಟಿವಿ ದೃಶ್ಯಾವಳಿ ಡಿವಿಆರ್, ಎನ್‌ವಿಆರ್, ಸಿಡಿಆರ್, ಎಫ್‌ಐಆರ್ ಹಾಗೂ ಇತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಬೇಕು.
ವೈದ್ಯರು ಹಾಗೂ ತಜ್ಞರಿಂದ ಅಭಿಪ್ರಾಯ ಪಡೆಯಬೇಕು. ಕಾಲಮಿತಿಯಲ್ಲಿ ತನಿಖೆ ಪೂರ್ಣಗೊಳಿಸ ಬೇಕು. ಪೊಲೀಸ್ ಅಧಿಕಾರಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಬೇಕಿದ್ದರೆ ಅಗತ್ಯ ಪೂರ್ವಾನುಮತಿ ಪಡೆಯಬೇಕೆಂದು ತಿಳಿಸಲಾಗಿದೆ.
ಸಾವು ಸಂಭವಿಸಿದ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ಅವರಿಗೆ ಮರಣೋತ್ತರ ತನಿಖೆ ನಡೆಸಲು ಮನವಿ ಸಲ್ಲಿಸಿ, ಅಗತ್ಯ ಸೌಲಭ್ಯಗಳನ್ನು ಸ್ಥಳೀಯ ಅಧಿಕಾರಿಗಳು ಕಲ್ಪಿಸಬೇಕು. ಮರಣೋತ್ತರ ಪರೀಕ್ಷೆಯನ್ನು ಸಂಪೂರ್ಣ ವಿಡಿಯೋಗ್ರಫಿ ಮಾಡಿಸಬೇಕು. ಫೊರೆನ್ಸಿಕ್ ತಜ್ಞರನ್ನು ಸ್ಥಳಕ್ಕೆ ಕರೆಸಿ ಸಾಕ್ಷ್ಯ ಸಂಗ್ರಹಿಸಬೇಕು.
ಎಫ್‌ಎಸ್‌ಎಲ್ ಮತ್ತು ಸೋಕೊ ಅಧಿಕಾರಿಗಳಿಗೆ ಸಾಕ್ಷ್ಯ ಸಂಗ್ರಹಿಸಲು ಅವಕಾಶ ಕಲ್ಪಿಸಬೇಕು. ಭೌತಿಕ, ಜೈವಿಕ, ಪರಿಸ್ಥಿತಿ ಜನ್ಯ, ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಾವಳಿಗಳು ಮೃತರ ಬಂಧುಗಳ ಹೇಳಿಕೆ ದಾಖಲಿಸುವ ಜೊತೆಗೆ ಸಂಗ್ರಹಿಸಿದ ಮಾದರಿಗಳನ್ನು ಎರಡು ದಿನದೊಳಗೆ ಎಫ್‌ಎಸ್‌ಎಲ್‌ಗೆ ಕಳುಹಿಸಬೇಕು. ಸಿಐಡಿ ತನಿಖೆ ಆರಂಭಿಸುವವರೆಗೂ ವಿಚಾರಣೆ ಮುಂದುವರೆಸಬೇಕೆಂದು ಸೂಚಿಸಲಾಗಿದೆ.
ಸಿಐಡಿ ಅಧಿಕಾರಿಗಳು ಹಿಂದಿನ ತನಿಖಾ ದಾಖಲೆಗಳನ್ನು ಪರಿಶೀಲಿಸಿ ಆರೋಪಿ ಅಧಿಕಾರಿಗಳ ಮತ್ತು ಸಾಕ್ಷಿದಾರರ ನೆರವಿನಿಂದ ಘಟನೆಯನ್ನು ಪುನರ್ ಪ್ರತಿ ಸೃಷ್ಟಿಸಬೇಕು. ಪಿಡಬ್ಲ್ಯೂಡಿ ಅಧಿಕಾರಿಗಳಿಂದ ಘಟನಾ ಸ್ಥಳದ ನಕ್ಷೆ ಪಡೆಯಬೇಕು. ಮ್ಯಾಜಿಸ್ಟ್ರೇಟ್ ತನಿಖಾ ವರದಿ ಪಡೆದು ಕಾಲಮಿತಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುವಂತೆ ಸೂಚಿಸಲಾಗಿದೆ.
