ಬೆಂಗಳೂರು, ಏ.22-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾಟ-ಮಂತ್ರ ಮಾಡಿಸುವ ಶಕ್ತಿಯಿದ್ದರೆ ಅದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಮಾತ್ರ. ಅವರನ್ನು ಬಿಟ್ಟು ಬೇರೆ ಯಾರಿಗೂ ಆ ಸಾಮರ್ಥ್ಯ ಇಲ್ಲ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜಣ್ಣ ಅವರಿಗೆ ಯಾರಿಗಾದರೂ ಮಾಟಮಂತ್ರ ಮಾಡಿಸಿ ಅಭ್ಯಾಸ ಇದೆಯೇನೋ? ಮುಖ್ಯಮಂತ್ರಿ ಅವರಿಗೆ ಹೆಚ್ಚು ಕಡಿಮೆ ಮಾಡಿಸಬೇಕಾದರೆ ರಾಜಣ್ಣ ಅವರಿಂದ ಮಾತ್ರ ಸಾಧ್ಯ. ಆ ಧೈರ್ಯ ಇರುವುದು ಅವರಿಗೆ ಎಂದರು.
ಮಾಟಮಂತ್ರದಿಂದ ಎಲ್ಲವನ್ನೂ ನಿಯಂತ್ರಿಸುತ್ತೇವೆ ಎನ್ನುವುದು ಮೂರ್ಖತನ. ದೊಡ್ಡದೊಡ್ಡ ಹುದ್ದೆಯಲ್ಲಿ ಇರುವವರನ್ನೆಲ್ಲಾ ಮಾಟಮಂತ್ರ ಮಾಡಿಸಿ ಇಳಿಸಬಹುದಲ್ಲವೇ? ಅದೆಲ್ಲಾ ಬಾಯಿ ಚಪಲಕ್ಕೆ ಮಾತನಾಡುವ ಹೇಳಿಕೆಗಳು, ಹೆಚ್ಚಿನ ಆದ್ಯತೆ ನೀಡಬೇಕಿಲ್ಲ ಎಂದರು.
ವಾಮಚಾರ ಮಾಡಿಸುವ ಪ್ರವೃತ್ತಿ ಇದೆ. ಈ ರೀತಿ ಮಾಟಮಂತ್ರ ಮಾಡಿ ಬೇರೆಯವರನ್ನು ಹಾಳುಮಾಡಲು ಯತ್ನಸಿದವರು ಸ್ವತಃ ತಾವೇ ನಾಶವಾಗಿರುವ ಹಲವಾರು ಉದಾಹರಣೆಗಳಿವೆ. ತಾತ್ಕಲಿಕವಾಗಿ ಗ್ರಹಚಾರ ಕೆಟ್ಟಾಗ ಸ್ವಲ್ಪ ಹೆಚ್ಚು ಕಡಿಮೆಯಾಗಬಹುದು. ಶಾಶ್ವತವಾಗಿ ಆ ರೀತಿ ಮುಗಿಸಲು ಅವಕಾಶ ಇದ್ದರೆ, ಎಲ್ಲರನ್ನು ಮುಗಿಸಿ ಬಿಡುತ್ತಿದ್ದರು ಎಂದು ಹೇಳಿದರು.
ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದೆ. ಹಾಗಾಗಿ ಪ್ರಶ್ನೆಗಳನ್ನು ಕೇಳುತ್ತಾರೆ. ಬೆನ್ನೆಲುಬಾಗಿದ್ದೇವೆ ಎಂಬ ಕಾರಣಕ್ಕೆ ಏನೂ ಬೇಕಾದರೂ ಮಾಡುತ್ತೇವೆ ಎಂದರೆ ಅದನ್ನು ಸಹಿಸಲಾಗುವುದಿಲ್ಲ. ಅಲ್ಪಸಂಖ್ಯಾತರು ಪಕ್ಷದ ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕು. ಎಚ್ಚರಿಕೆ ನೀಡುವುದು ಈಗಿನಿಂದ ಅಲ್ಲ, ಇಂದಿರಾಗಾಂಧಿ, ವಾಜಪೇಯಿ ಕಾಲದಿಂದಲೂ ಪತ್ರ ಬರೆದು ಎಚ್ಚರಿಸಲಾಗುತ್ತಿದೆ ಎಂದರು.
ಮುಸ್ಲಿಮರು ಮತ್ತು ದಲಿತರು ಪಕ್ಷ ಕಟ್ಟಿ ಕಾಂಗ್ರೆಸ್ಗೆ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಳ್ಳೆಯದು. ಹೊಸ ಪಕ್ಷ ಕಟ್ಟಿ ಅಧಿಕಾರಕ್ಕೆ ಬರಲಿ, ಜನ ಬೆಂಬಲಕೊಟ್ಟರೆ ಅಡ್ಡಿ ಪಡಿಸುವವರು ಯಾರು? ಎಂದು ಹೇಳಿದರು.
ಹಿಂದೆ ರೈತ ಸಂಘ ಪಕ್ಷ ಕಟ್ಟಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಿತ್ತು. ಈಗ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮತ್ತು ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಜನ ಅವರಿಗೆ ಮನ್ನಣೆ ಕೊಟ್ಟು ಅಧಿಕಾರ ನೀಡಿದರೆ ಸಂತೋಷ ಎಂದರು.
ಹಿರಿಯ ಶಾಸಕರ ನಿಯೋಗ ಸಚಿವ ಸಂಪುಟ ಪುನರ್ ರಚನೆಗಾಗಿ ದೆಹಲಿಗೆ ಹೋಗಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನನ್ನು ದೆಹಲಿಗೆ ಕರೆದಿದ್ದರು. ಆಗ ಅಂಬೇಡ್ಕರ್ ಜಯಂತಿ ಇತ್ತು. ಮಂತ್ರಿಗಿರಿಗಿಂತಲೂ ಅಂಬೇಡ್ಕರ್ ಜಯಂತಿ ಬಹಳ ಮುಖ್ಯ. ಅದನ್ನು ಮುಗಿಸಿ ದೆಹಲಿಗೆ ಹೋಗೋಣ ಎಂದಿದ್ದೆ. ಈಗಾಗಲೇ ನಾವು ಹೊರಟಿದ್ದೇವೆ ಎಂದು ಹೇಳಿದ್ದರು. ಒಳ್ಳೆಯದಾಗಲಿ ಹೋಗಿ ಬನ್ನಿ, ವರ್ಷಕ್ಕೊಮೆ ಬರುವ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಬೇಕು ಎಂಬುದಾಗಿ ಅವರಿಗೆ ತಿಳಿಸಿದ್ದೆ ಎಂದು ಬಾಲಕೃಷ್ಣ ಹೇಳಿದರು.
ಹಿರಿಯ ಶಾಸಕರು ಮತ್ತೊಮೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿರುವುದು ಗೊತ್ತಿಲ್ಲ, ಈವರೆಗೂ ಸಭೆ ಕರೆದಿಲ್ಲ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಬೇಕು. ಅನಂತರ ಕಾಂಗ್ರೆಸ್ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಜನತಾದಳದಲ್ಲಿದ್ದ ನಮನ್ನು ಕಾಂಗ್ರೆಸ್ಗೆ ಕರೆ ತಂದಿದ್ದು ಸಚಿವ ಜಮೀರ್ ಅಹಮದ್ ಖಾನ್. ಈಗ ನಮನ್ನೆಲ್ಲಾ ಬಿಟ್ಟು ಏಕಾಂಗಿಯಾಗಿ ಅವರು ಜನತಾದಳಕ್ಕೆ ಹೋಗಲು ನಾವು ಬಿಡುವುದಿಲ್ಲ. ಆಂತರಿಕವಾಗಿ ಏನಾದರೂ ಮಾತುಕತೆ ನಡೆದಿದೆಯೋ ಗೊತ್ತಿಲ್ಲ. ನಾವು ಆತೀಯರಾಗಿದ್ದರೂ ನಮ ಬಳಿ ಅವರು ಏನನ್ನೂ ಹೇಳಿಲ್ಲ ಎಂದರು.
ಜನತಾದಳದಲ್ಲಿ ಸರಿಯಿಲ್ಲ ಎಂದು ನಮನ್ನು ಕಾಂಗ್ರೆಸ್ಗೆ ಕರೆ ತಂದಿದ್ದಾರೆ. ಈಗ ವಾಪಸ್ ಹೋಗುವುದಾದರೆ ನಮ ಜೊತೆ ಎಲ್ಲಾ ಮಾತನಾಡಿ, ನಿರ್ಧಾರ ತೆಗೆದುಕೊಳ್ಳಬೇಕು. ಸಾಧಕ-ಬಾಧಕ ಚರ್ಚೆಯಾಗಬೇಕು. ಜೆಡಿಎಸ್ನಲ್ಲಿ ನನ್ನನ್ನು ಉಪಮುಖ್ಯಮಂತ್ರಿ ಮಾಡುತ್ತಾರಾ? ಎಂಬುದೆಲ್ಲಾ ತೀರ್ಮಾನವಾಗಬೇಕು. ಖಾಲಿ ಕೈಯಲ್ಲಿ ಹೋಗುವುದು, ಬರುವುದರಿಂದ ಏನೂ ಪ್ರಯೋಜನ ಇಲ್ಲ ಎಂದರು.
ಮೇ ತಿಂಗಳಿನಲ್ಲಿ ರಾಜಕೀಯ ಬದಲಾವಣೆಯ ಬಗ್ಗೆ ನಾವು ಮಾತನಾಡಿ ಪ್ರಯೋಜನವಿಲ್ಲ. ಮೊದಲು ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಬೇಕು. ಅನಂತರ ರಾಜಕೀಯ ಅದರದ್ದೇ ಆದ ತಿರುವು ಪಡೆದುಕೊಳ್ಳಲಿದೆ ಎಂದರು.
ನನ್ನನ್ನು ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದರೆ, ನಾಯಕತ್ವ ಬದಲಾವಣೆ, ಸಂಪುಟ ಪುನರ್ರಚನೆ ಸೇರಿದಂತೆ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.
ವೀರಾವೇಶದ ಭಾಷಣ ಮಾಡುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು, ಮೇಕೆದಾಟು ಬಗ್ಗೆ ಏಕೆ ಬಾಯಿ ಬಿಡುತ್ತಿಲ್ಲ. ಮಂಡ್ಯ ಸಂಸದರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜವಾಬ್ದಾರಿ ಇಲ್ಲವೇ? ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನನ್ನ ಬಳಿ ಬರಲಿ, ನಾನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಿದ್ದಾರೆ. ಜನ ಮತ ಹಾಕಿ ಮಂಡ್ಯದ ಸಂಸದರನ್ನಾಗಿ ಮಾಡಿದ್ದಾರೆ. ಅವರೇ ಸ್ವಯಂ ಪ್ರೇರಿತರಾಗಿ ಆಸಕ್ತಿವಹಿಸಬಾರದೇ? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ವತಿಯಿಂದ ನ್ಯಾಯಾಲಯದಲ್ಲಿ ವಾದ ಮಂಡಿಸಿ ತೀರ್ಪು ನಮ ಪರವಾಗಿ ಬರುವಂತೆ ಮಾಡಿಕೊಳ್ಳಲಾಗಿದೆ. ಆ ವರೆಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜವಾಬ್ದಾರಿಯಾಗಿತ್ತು ಎಂದರು.
ಕೇಂದ್ರದಿಂದ ಅಗತ್ಯ ಅನುಮೋದನೆ ಕೊಡಿಸುವುದು ಬಿಜೆಪಿ-ಜೆಡಿಎಸ್ನವರ ಜವಾಬ್ದಾರಿ. ಅದು ಸಾಧ್ಯವಾಗದೆ ಇದ್ದರೆ ರಾಜೀನಾಮೆ ಕೊಟ್ಟು ಬರಲಿ. ನಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಯನ್ನು ಮಾಡಿ ತೋರಿಸುತ್ತೇವೆ, ಇಲ್ಲವಾದರೆ ರಾಜಕೀಯ ಮಾಡುವುದಿಲ್ಲ. ಅವರಂತೆ ಬೊಗಳೆ ಬಿಡುವುದಿಲ್ಲ ಎಂದರು.
ಬಿಜೆಪಿ ಸಂಸದರು ಸ್ವತಂತ್ರವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿಲ್ಲ. ಹೈಕಮಾಂಡ್ನ ನಾಯಕರು ಹೇಳಿದಂತೆ ಕೇಳುತ್ತಾರೆ. ಅವರಿಗೆ ಅಧಿಕಾರ ಮುಖ್ಯವೇ ಹೊರತು ರಾಜ್ಯದ ಹಿತವಲ್ಲ ಎಂದು ಲೇವಡಿ ಮಾಡಿದರು.
