ಬೆಂಗಳೂರು,ಏ.22- ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಷ್ಟ್ರ ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಘನತೆ ಪಾಲನೆಯಾಗುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋಂ ಸ್ಟೇಗಳಲ್ಲಿ ಅನುಸರಿಸಬೇಕಾದ ಸುರಕ್ಷಿತ ಕ್ರಮಗಳ ಬಗ್ಗೆ ಪ್ರಮಾಣಿತ
ಕಾರ್ಯ ವಿಧಾನಗಳ ಸುತ್ತೋಲೆಯನ್ನು ಹೊರಡಿಸಲಾಗಿದೆ. ಎಲ್ಲಾ ಹೋಂ ಸ್ಟೇನ ಮಾಲೀಕರು ಅದನ್ನು ಪಾಲನೆ ಮಾಡಬೇಕು. ಒಂದು ವೇಳೆ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಹೋಂ ಸ್ಟೇಗಳು ನೋಂದಣಿಯಾಗಿರಬೇಕು. ವಿವಿಧ ಸಂಸ್ಥೆಗಳಿಂದ ಅಗತ್ಯವಿರುವ ಪರವಾನಗಿಗಳನ್ನು ಪಡೆದುಕೊಳ್ಳಬೇಕು ಎಂದರು.ಕೊಡಗಿನಲ್ಲಿರುವ ಹೋಂ ಸ್ಟೇನಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿರುವುದು, ಗಂಭೀರವಾದ ಪ್ರಕರಣ. ವಿದೇಶಿಯರ ಮೇಲೆ ಹೀಗಾದರೆ ಜನರಿಗೆ ಯಾವ ರೀತಿಯ ಸಂದೇಶ ರವಾನೆಯಾಗುತ್ತದೆ, ದೇಶದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನೆಂದು ಭಾವಿಸುತ್ತಾರೆ ಎಂದು ಪ್ರಶ್ನಿಸಿದರು.
ಘಟನೆಯ ನಂತರ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿರಬಹುದು. ಪೊಲೀಸರು ಅದನ್ನೆಲ್ಲಾ ಗಮನಿಸುತ್ತಾರೆ. ಅತ್ಯಾಚಾರ ಮಾಡಿದವರು ಜಾರ್ಖಂಡ್‌ನವರು ಎಂದು ಹೇಳಲಾಗಿದೆ. ಪೊಲೀಸರು ಈಗಾಗಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಕಾನೂನು ಕ್ರಮಕ್ಕೆ ಬದ್ಧ:
ತಮ ವಿರುದ್ಧ ಎಫ್‌ಐಆರ್ ದಾಖಲಾಗಿರುವುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್ ಕಬ್ಬಡಿ ಪಂದ್ಯಾವಳಿ ವೇಳೆ ಗ್ರಾಮೀಣ ಭಾಗದಲ್ಲಿ ಸಹಜವಾಗಿ ಸೋಲು, ಗೆಲುವಿನ ಬಗ್ಗೆ ಮಾತನಾಡುತ್ತಾರೆ. ನಾನು ಅದರಂತೆ ಮಾತನಾಡಿದ್ದೆ. ಕಾನೂನು ದೃಷ್ಟಿಯಲ್ಲಿ ಅದು ತಪ್ಪು. ಆದರೆ ನಾನು ಯಾವ ರೀತಿ ಮಾತನಾಡಿದ್ದೇನೆ ಎಂಬುದು ಮುಖ್ಯವಾಗುತ್ತದೆ.
ಬೆಟ್ಟಿಂಗ್ ಅನ್ನು ಪ್ರಮೋಟ್ ಮಾಡಿ ಎಂದು ಮಾತನಾಡಿದ್ದರೆ, ಅದು ತಪ್ಪಾಗುತ್ತಿತ್ತು. ನಾನು ಜವಾಬ್ದಾರಿತ ಸ್ಥಾನದಲ್ಲಿದ್ದೇನೆ. ಬೆಟ್ಟಿಂಗ್ ಅನ್ನು ಪ್ರಮೋಟ್ ಮಾಡಿ ಎಂದು ಹೇಳುತ್ತೇನೆಯೇ? ತಮ ಮಾತುಗಳನ್ನು ಅರ್ಥೈಸಿಕೊಳ್ಳುವುದರ ಆಧಾರದ ಮೇಲೆ ಎಲ್ಲವೂ ಅವಲಂಭಿತವಾಗಿರುತ್ತದೆ ಎಂದರು.
ಕಾನೂನು ರಕ್ಷಣೆ ಮಾಡಬೇಕಾದ ಇಲಾಖೆಯ ಮುಖ್ಯಸ್ಥನಾಗಿ ನಾನು ಕಾನೂನಿಗೆ ಗೌರವ ಕೊಡಬೇಕು. ಕಾನೂನು ಯಾವುದೇ ಕ್ರಮ ಕೈಗೊಂಡರೂ ಅದಕ್ಕೆ ಬದ್ಧನಾಗಿರುತ್ತೇನೆ ಎಂದರು. ನನಗೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ಆದೇಶ ಮಾಡಲಾಗಿದೆ. ಒಂದು ವೇಳೆ ನೋಟಿಸ್ ನೀಡಿದರೆ ತಮ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ವಿವರಣೆ ನೀಡುತ್ತಿದ್ದೆ. ಏನೇ ಆದರೂ ಈಗ ಆದೇಶ ಹೊರ ಬಿದ್ದಿದೆ. ಕಾನೂನನ್ನು ನಾವು ಗೌರವಿಸಬೇಕು ಎಂದರು.
ಈ ಪ್ರಕರಣದಲ್ಲಿ ತಮ ವಿರುದ್ಧ ಸಂಚು ನಡೆಸಿದ್ದಾರೆಯೇ ಎಂಬುದನ್ನು ಇನ್ನು ಮುಂದೆ ಪರಿಶೀಲಿಸುವುದಾಗಿ ಹೇಳಿದರು.ಸಚಿವ ಸಂಪುಟ ಪುನರ್‌ರಚನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆ ಬಗ್ಗೆ ನಾವು ಮಾತನಾಡುವುದು ಅಪ್ರಸ್ತುತ ಎಂದರು.
ಕೇರಳದಲ್ಲಿ ಮಾಟಮಂತ್ರ ನಡೆದಿದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಪರಮೇಶ್ವರ್ ಅವರು, ರಾಜಣ್ಣ ಅವರಿಗೆ ಮಾಹಿತಿ ಇರಬಹುದು. ಹಾಗಾಗಿ ಹೇಳಿದ್ದಾರೇನೋ ಗೊತ್ತಿಲ್ಲ, ಬಹುಶಃ ರಾಜಣ್ಣ ಸುಮನೆ ಮಾತನಾಡುವುದಿಲ್ಲ ಎಂದು ಪರಮೇಶ್ವರ್ ತಿಳಿಸಿದ್ದಾರೆ.
