ಬೆಂಗಳೂರು, ಏ.22- ತಮಿಳುನಾಡಿನಲ್ಲಿ ನಾಳೆ ಚುನಾವಣೆ ನಡೆಯುತ್ತಿರುವುದಿಂದ ನಗರದಲ್ಲಿ ನೆಲೆಸಿರುವ ಲಕ್ಷಾಂತರ ಮಂದಿ ತಮಿಳು ಭಾಷಿಕರು ಮತ ಚಲಾಯಿಸಲು ತಾಯ್ನಾಡಿನತ್ತ ಪ್ರಯಾಣ ಬೆಳೆಸುತ್ತಿರುವುದರಿಂದ ನಗರದೆಲ್ಲೆಡೆ ಜನಸಂದಣಿ ಉಂಟಾಗಿದೆ.
ನಗರದ ಪ್ರಮುಖ ಪ್ರದೇಶಗಳಾದ ಡೇರಿ ಸರ್ಕಲ್, ವಿಲ್ಸನ್ ಗಾರ್ಡನ್, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಹೊಸೂರು ರಸ್ತೆಯಲ್ಲಿ ಭಾರಿ ಜನಸಂದಣಿ ಕಂಡು ಬಂದಿದೆ.
ವಿಶೇಷವಾಗಿ ತಮಿಳುನಾಡು ಕಡೆಗೆ ತೆರಳುವ ಬಹುತೇಕ ಬಸ್‌ಗಳು ಸಂಪೂರ್ಣ ಭರ್ತಿಯಾಗಿರುವ ದೃಶ್ಯ ಕಂಡುಬರುತ್ತಿದೆ. ಈ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ತಮಿಳುನಾಡು ಸರ್ಕಾರದ ಸಾರಿಗೆ ಸಂಸ್ಥೆಗಳು ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಿವೆ.
ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದರಿಂದ ರಾತ್ರಿ ವೇಳೆಯಲ್ಲಿಯೂ ಹೆಚ್ಚುವರಿ ಸರ್ವೀಸ್ ಬಸ್‌ಗಳನ್ನು ಓಡಿಸಲಾಗುತ್ತಿದೆ. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮಿಳು ಭಾಷಿಕರು ನೆಲೆಸಿರುವ ಹಿನ್ನೆಲೆ, ನಾಳಿನ ಮತದಾನದಲ್ಲಿ ಪಾಲ್ಗೊಳ್ಳಲು ಸುಮಾರು ಒಂದುವರೆ ಲಕ್ಷದಷ್ಟು ಮಂದಿ ಬೆಂಗಳೂರಿನಿಂದ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದಾರೆ ಎಂಬ ಅಂದಾಜಿಸಲಾಗಿದೆ.ತಮ ಮತದಾನ ಹಕ್ಕು ಚಲಾಯಿಸಲು ದೂರ ಪ್ರಯಾಣಕ್ಕೂ ಹಿಂದೇಟು ಹಾಕದ ಮತದಾರರ ಉತ್ಸಾಹ ಇಲ್ಲಿ ಗಮನಾರ್ಹವಾಗಿದೆ.
