ಬೆಂಗಳೂರು, ಮೇ 20- ಕಳೆದ ಒಂದು ವಾರದಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆಯಾಗುತ್ತಿದ್ದು, ಇನ್ನೂ ಒಂದು ವಾರ ಕಾಲ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ. ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಗಳಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.
ಅವಧಿಗೂ ಮುನ್ನ ಈ ಬಾರಿ ಮುಂಗಾರು ಆಗಮಿಸುವ ಮುನ್ಸೂಚನೆ ಇದ್ದು, ಈಗಾಗಲೇ ಅದಕ್ಕೆ ಪೂರಕವಾದ ಸನ್ನಿವೇಶಗಳು ವಾತಾವರಣದಲ್ಲಿ ಕಂಡುಬರುತ್ತಿವೆ. ಇದರಿಂದ ಪೂರ್ವ ಮುಂಗಾರು ಚೇತರಿಸಿಕೊಂಡಿದ್ದು, ರಾಜ್ಯದ ಹಲವೆಡೆ ಮಳೆಯಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಹಾಗೂ ಒಳನಾಡಿನಲ್ಲಿ ಉಂಟಾಗಿರುವ ಮೇಲೈ ಸುಳಿಗಾಳಿಯಿಂದಾಗಿ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನಲ್ಲಿ ಮಳೆ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದ್ದು, ಮೇ 23ರವರೆಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಣ ಹವೆ ಮುಂದುವರೆಯಲಿದೆ. ಮಧ್ಯಾಹ್ನದ ನಂತರ ಅಲ್ಲಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ. ಮಧ್ಯಾಹ್ನದ ಬಳಿಕ ಮತ್ತು ರಾತ್ರಿ ಸಮಯದಲ್ಲಿ ಮಳೆಯಾಗಲಿದೆ. ಪೂರ್ವ ಮುಂಗಾರು ಮಳೆಯಾಗಿರುವ ಹಿನ್ನೆಲೆಯಲ್ಲಿ ಬಹಳಷ್ಟು ಕಡೆಗಳಲ್ಲಿ ಮಿಂಚು, ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಗಳಿವೆ.
ಈ ಬಾರಿ ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗಿದೆ. ಮಾರ್ಚ್ ತಿಂಗಳು ಹೊರತುಪಡಿಸಿದರೆ, ಜನವರಿಯಿಂದ ಇದುವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಏಪ್ರಿಲ್ ತಿಂಗಳಂತೆ ಮೇ ತಿಂಗಳಲ್ಲಿ ರಾಜ್ಯದ ಹಲವೆಡೆ ಮಳೆ ಕೊರತೆ ಕಂಡು ಬಂದಿದೆ. ಒಂದು ವಾರದಿಂದೀಚೆಗೆ ಮಳೆ ಹೆಚ್ಚಾಗಿದ್ದರೂ ವಾಡಿಕೆ ಪ್ರಮಾಣದಲ್ಲಿ ಎಲ್ಲೆಡೆ ವ್ಯಾಪಕವಾಗಿ ಮಳೆಯಾಗಿಲ್ಲ.
ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಸದ್ಯಕ್ಕೆ ಮಳೆಗೆ ಪೂರಕ ವಾತಾವರಣ ಇರುವುದರಿಂದ ಈ ವಾರ ಹೆಚ್ಚು ಮಳೆಯಾಗಲಿದ್ದು, ಮಳೆ ಕೊರತೆ ನೀಗಿಸುವ ಸಾಧ್ಯತೆಗಳಿವೆ.
