ಬೆಂಗಳೂರು, ಮೇ.20- ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಂಚ ಪಾಲಿಕೆಗಳಿಗೆ ಆ.31 ರೊಳಗೆ ಚುನಾವಣೆ ನಡೆಸಬೇಕು. ಇದೇ ಕೊನೆ ಅವಕಾಶ, ಮುಂದೆ ಯಾವುದೇ ರಿಯಾಯಿತಿ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿದೆ.ಈ ತೀರ್ಪಿನಿಂದಾಗಿ ಇದೇ ಜೂ.30 ರೊಳಗೆ ನಡೆಯಬೇಕಿದ್ದ ಜಿಬಿಎ ಚುನಾವಣೆ ಮತ್ತೆ ಮುಂದೂಡಿಕೆಯಾಗಿದೆ.
ಜೂ.30 ರೊಳಗೆ ಚುನಾವಣೆ ನಡೆಸಲು ಅಗತ್ಯ ಸಿಬ್ಬಂದಿ ಇಲ್ಲ ಹಾಗೂ ರಾಜ್ಯದಲ್ಲಿ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ನಡೆಯುತ್ತಿರುವುದರಿಂದ ಸೆಪ್ಟೆಂಬರ್‌ವರೆಗೆ ಗಡುವು ನೀಡಬೇಕು ಎಂಬ ರಾಜ್ಯ ಸರ್ಕಾರದ ಮನವಿ ಮೇರೆಗೆ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಮೇಲನವಿ ಸಲ್ಲಿಸಿತ್ತು.
ಆಯೋಗ ಸಲ್ಲಿಸಿದ ಮೇಲನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ.
ಪರಿಸ್ಥಿತಿಯನ್ನು ಸಂಪೂರ್ಣವಾಗಿ ಪರಿಗಣಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಬರುವ ಐದೂ ಪಾಲಿಕೆಗಳಿಗೆ ಚುನಾವಣೆ ನಡೆಸಲು ಕೊನೆಯ ಬಾರಿಗೆ ಆಗಸ್ಟ್ 31ರವರೆಗೆ ಕಾಲಾವಕಾಶ ನೀಡಲಾಗಿದೆ.ಮುಂದೆ ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡಲು ಕಾಲಾವಕಾಶ ನೀಡುವುದಿಲ್ಲ ಎಂದು ಪೀಠ ಎಚ್ಚರಿಸಿದೆ.
ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರ ಜಿಬಿಎ ಚುನಾವಣೆಗೆ ಸೆಪ್ಟೆಂಬರ್ ಕೊನೆಯವರೆಗೆ ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ನಿರಾಕರಿಸಿದ ನ್ಯಾಯಾಲಯ. ರಾಜ್ಯ ಚುನಾವಣಾ ಆಯೋಗಕ್ಕೆ ಒಂದು ತಿಂಗಳು ಮತ್ತು ರಾಜ್ಯ ಸರ್ಕಾರಕ್ಕೆ ಒಂದು ತಿಂಗಳು ಸೇರಿ ಎರಡು ತಿಂಗಳು ಕಾಲವಕಾಶ ನೀಡಲಾಗಿದೆ ಎಂದು ಲಘು ದಾಟಿಯಲ್ಲಿ ಎಚ್ಚರಿಸಿ ಆಗಷ್‌್ಟ 31ರೊಳಗೆ ಚುನಾವಣೆ ನಡೆಸಲೇಬೇಕು ಎಂಬ ಗುಡುವು ನೀಡಿ ವಿಚಾರಣೆಯನ್ನು ಮುಂದೂಡಿತು. ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಜರಾಗಿದ್ದರು.
