ಬೆಂಗಳೂರು, ಮೇ 20- ಮುಂಬರುವ 2028ರ ವಿಧಾನಸಭೆ ಚುನಾವಣೆಗೆ ಪಕ್ಷದಲ್ಲಿ ಕೆಲವು ಆಮೂಲಾಗ್ರ ಬದಲಾವಣೆ ಕುರಿತಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಹಾಗೂ ಕೇಂದ್ರ ಸಚಿವ ಭೂಪೇಂದ್ರ ಯಾದವ್ ನೇತೃತ್ವದ ಬಿಜೆಪಿ ನಿಯೋಗ ಇದೇ 23ರಂದು ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಭಾರೀ ಕುತೂಹಲ ಕೆರಳಿಸಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ನಿತಿನ್ ನಬೀನ್ ಅವರು ಮೊದಲ ಬಾರಿಗೆ ಇದೇ 23ರಂದು ಬೆಂಗಳೂ ರಿಗೆ ಆಗಮಿಸುತ್ತಿದ್ದಾರೆ. ಯಲಹಂಕ ಸಮೀಪದ ಖಾಸಗಿ ರೆಸಾರ್ಟ್ನಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆಸಲಿರುವ ಅವರು ಸಂಘಟನೆ ಹಾಗೂ ಸರ್ಕಾರದ ವಿರುದ್ದ ಹೋರಾಟ ನಡೆಸುವ ಬಗ್ಗೆಯೂ ರಾಜ್ಯ ನಾಯಕರಿಗೆ ಸಲಹೆ ನೀಡಲಿದ್ದಾರೆ.
ಇದರ ಜೊತೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಹಾಗೂ ಬಿಜೆಪಿಯ ಚುನಾವಣಾ ತಂತ್ರಗಾರಿಕೆಗೆ ಹೆಸರುವಾಸಿಯಾಗಿರುವ ಭೂಪೇಂದ್ರ ಯಾದವ್ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು 25ರಂದು ಬೆಂಗಳೂರಿಗೆ ಆಗಮಿಸಲಿದ್ದು, ಪಕ್ಷದ ಪ್ರಮುಖ ನಾಯಕರನ್ನು ಭೇಟಿಯಾಗಲಿದ್ದಾರೆ.
ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಅವಧಿಯನ್ನು ಮುಂದುವರೆಸಬೇಕೇ? ಇಲ್ಲವೇ ಈ ಹುದ್ದೆಯನ್ನು ಬೇರೆಯವರಿಗೆ ನೀಡಬೇಕೇ? ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಪದಾಧಿಕಾರಿಗಳ ನೇಮಕಾತಿ, ಪಕ್ಷ ಸಂಘಟನೆ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಬಿಜೆಪಿಯಲ್ಲಿ ಒಂದು ಗುಂಪು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು 2028ರ ವಿಧಾನಸಭೆ ಚುನಾವಣೆವರೆಗೂ ಮುಂದುವರೆಸಲಿ ಎಂಬ ನಿರ್ಧಾರಕ್ಕೆ ಬಂದಿದ್ದರೆ ಮತ್ತೊಂದು ಗುಂಪು ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸಂಘಟನೆಗೆ ಒತ್ತು ನೀಡದಿರುವ ಕಾರಣ ಆರ್ಎಸ್ಎಸ್ ಮತ್ತು ಬಿಜೆಪಿ ನಡುವೆ ಸಮನ್ವಯ ಸಾಧಿಸುವ ಹಿಂದುಳಿದ ವರ್ಗದ ಯುವ ನಾಯಕನಿಗೆ ಜವಾಬ್ದಾರಿ ನೀಡಬೇಕೆಂಬ ಅಭಿಪ್ರಾಯವೂ ಇದೆ.
ಇತ್ತೀಚೆಗಷ್ಟೇ ಚಿತ್ರದುರ್ಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಹೆಸರಿನಲ್ಲಿ ಬಿಎಸ್ವೈ ಅಭಿಮಾನೋತ್ಸವವನ್ನು ಭರ್ಜರಿಯಾಗಿ ನಡೆಸಿ ತಮ ಶಕ್ತಿ ಏನೆಂಬುದನ್ನು ರಾಷ್ಟ್ರೀಯ ನಾಯಕರಿಗೆ ವಿಜಯೇಂದ್ರ ತೋರಿಸಿಕೊಟ್ಟಿದ್ದರು. ಹೀಗಾಗಿ ವಿಜಯೇಂದ್ರ ಅವರನ್ನು ಮುಂದುವರೆಸುವ ಬಗ್ಗೆಯೇ ಪಕ್ಷದಲ್ಲಿ ಪರ-ವಿರೋಧ ಅಭಿಪ್ರಾಯವಿದೆ.
ಯಡಿಯೂರಪ್ಪ ಅವರ 50 ವರ್ಷಗಳ ಸಾರ್ವಜನಿಕ ಜೀವನದ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಇಡೀ ರಾಜ್ಯದ ಮಠಾಧಿಪತಿಗಳು ಒಂದೇ ವೇದಿಕೆಗೆ ಬರಲು ಬಿಎಸ್ವೈ ಅವರೇ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದರು. ಇದು ಪರೋಕ್ಷವಾಗಿ ವಿಜಯೇಂದ್ರ ಅವರಿಗೆ ನೈತಿಕವಾಗಿ ದೊಡ್ಡ ಶಕ್ತಿ ತುಂಬಿದೆ ಎನ್ನಲಾಗಿದೆ.
ರಾಜ್ಯ ಬಿಜೆಪಿಯ ನಿರ್ಣಾಯಕ ಸಮಿತಿಯಾದ ಕೋರ್ ಕಮಿಟಿ ಶೀಘ್ರದಲ್ಲೇ ಪುನಾರಚನೆಗೊಳ್ಳಲಿದ್ದು, ಹಾಲಿ ಇರುವ ಇಬ್ಬರು ಪ್ರಮುಖ ಸದಸ್ಯರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮನ್ನಣೆ ನೀಡುವ ಸಾಧ್ಯತೆ ಇದೆ.
ಚಿತ್ರದುರ್ಗದ ಸಮಾವೇಶವು ಕೇವಲ ಬಿಎಸ್ವೈ ಅಭಿಮಾನೋತ್ಸವ ಎಂದು ವಿಜಯೇಂದ್ರ ಸ್ಪಷ್ಟಪಡಿಸುತ್ತಿದ್ದರೂ, ಇದು ಪರೋಕ್ಷವಾಗಿ ಯಡಿಯೂರಪ್ಪ ಅವರ ಶಕ್ತಿ ಪ್ರದರ್ಶನ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಈ ಅಭೂತಪೂರ್ವ ಯಶಸ್ಸಿನ ಬಳಿಕ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಹೈಕಮಾಂಡ್ ಜೊತೆಗೆ ಸಂಘ ಪರಿವಾರದಲ್ಲೂ ಮೃದು ಧೋರಣೆಯಿದೆ ಎನ್ನಲಾಗಿದೆ. ಎಂಬ ಮಾಹಿತಿ ಲಭ್ಯವಾಗಿದೆ.
ಮತ್ತೊಂದೆಡೆ ಪುನಾರಚನೆಗೊಳ್ಳಲಿರುವ ಕೋರ್ ಕಮಿಟಿ ಸೇರಲು ಬಿಜೆಪಿಯ ಹಿರಿಯ ನಾಯಕರು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಸಂಸದ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರು ಸಮಿತಿಯ ಸದಸ್ಯರಾಗಲು ತೀವ್ರ ಉತ್ಸುಕತೆ ಹೊಂದಿದ್ದಾರೆ. ಇದರೊಂದಿಗೆ ಶಾಸಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ಕುಮಾರ್ ಅವರ ಹೆಸರೂ ಸಹ ಮುಂಚೂಣಿಯಲ್ಲಿದೆ.
ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಎರಡು ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಹೈಕಮಾಂಡ್ ತೆಗೆದುಕೊಳ್ಳಲಿರುವ ಈ ನಿರ್ಧಾರಗಳು ತೀವ್ರ ಕುತೂಹಲ ಕೆರಳಿಸಿವೆ.
