ನವದೆಹಲಿ, ಮೇ.21-ಪಶ್ಚಿಮ ದೆಹಲಿಯ ಇಂದರ್‌ಪುರಿ ಪ್ರದೇಶದಲ್ಲಿ ಕಟ್ಟಡದಿಂದ ಬಿದ್ದು ಮೃತಪಟ್ಟ ಮಹಿಳೆಯ ವರದಕ್ಷಿಣೆ ಸಾವು ಪ್ರಕರಣದಲ್ಲಿ ಆಕೆಯ ಪತಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕಳೆದ ಮೇ 18ರಂದು ಇಂದರ್‌ಪುರಿಯ ದಾಸಘರಾ ಗ್ರಾಮದಲ್ಲಿ ಈ ಘಟನೆ ವರದಿಯಾಗಿತ್ತು.
ಪೊಲೀಸರ ಪ್ರಕಾರ, ಸುಮಾರು 25 ವರ್ಷದ ಮಹಿಳೆಯೊಬ್ಬರು ಕಟ್ಟಡದಿಂದ ಬಿದ್ದಿದ್ದಾರೆ ಎಂಬ ಮಾಹಿತಿ ಬಂದ ಬಳಿಕ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿತ್ತು. ಆದರೆ ವೈದ್ಯರು ಆಕೆಯನ್ನು ಮೃತಪಟ್ಟಿರುವುದಾಗಿ ಘೋಷಿಸಿದರು.
ಮೃತ ಮಹಿಳೆಯನ್ನುರಾಜು ಸಿಂಗ್ ಅವರ ಪತ್ನಿ ಎಂದು ಗುರುತಿಸಲಾಗಿದ್ದು, ಆಕೆಗೆ ಆರು ತಿಂಗಳ ಮಗುವಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಹಿಳೆಯ ಕುಟುಂಬದವರು, 2022ರ ಡಿಸೆಂಬರ್‌ನಲ್ಲಿ ಮದುವೆಯಾದ ನಂತರದಿಂದಲೇ ಪತಿ ವರದಕ್ಷಿಣೆ ಬೇಡಿಕೆ ಇಟ್ಟು ಆಕೆಗೆ ನಿರಂತರ ಕಿರುಕುಳ ಹಾಗೂ ಹಲ್ಲೆ ನಡೆಸಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.
ಮದುವೆಯಾಗಿ ಏಳು ವರ್ಷಗಳೊಳಗೆ ಘಟನೆ ಸಂಭವಿಸಿದ್ದರಿಂದ, ವರದಕ್ಷಿಣೆ ಸಾವಿಗೆ ಸಂಬಂಧಿಸಿದ ಕಾನೂನು ವಿಧಿಗಳಡಿ ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣವನ್ನು ಕರೋಲ್ ಬಾಗ್ ಉಪ ವಿಭಾಗಾಧಿಕಾರಿ (ಎಸ್‌ಡಿಎಂ)ಗೆ ವರದಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್‌ಡಿಎಂ ಮಹಿಳೆಯ ಕುಟುಂಬ ಸದಸ್ಯರ ಹೇಳಿಕೆ ದಾಖಲಿಸಿದ್ದು, ಅಪರಾಧ ಹಾಗೂ ವಿಧಿವಿಜ್ಞಾನ ತಂಡಗಳು ಸ್ಥಳ ಪರಿಶೀಲಿಸಿ ಸಾಕ್ಷ್ಯ ಸಂಗ್ರಹಿಸಿವೆ.
ಕುಟುಂಬ ಸದಸ್ಯರ ಹೇಳಿಕೆಗಳು ಮತ್ತು ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ, ಪೊಲೀಸರು ತ್ವರಿತ ಕ್ರಮ ಕೈಗೊಂಡು, ಮೃತೆಯ ಪತಿ ರಾಜು ಸಿಂಗ್ (27) ಹಾಗೂ ಅವರ ತಮ್ಮ ರಾಜ್‌ಕುರ್ಮಾ (22) ಅವರನ್ನು ಬಂಧಿಸಿದ್ದಾರೆ.ಒಮೆ ಅಕೆಯನ್ನು ತೀವ್ರವಾಗಿ ಹೊಡೆದಿದ್ದರು, ಇದರಿಂದ ಕಿವಿಯ ಒಳಪದರವೇ ಹಾನಿಯಾಗಿತ್ತು. ಆದರೆ ಮದುವೆ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ನನ್ನ ಅಕ್ಕ ದೂರು ನೀಡಲು ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ.
