Homeರಾಷ್ಟ್ರೀಯ13 ವರ್ಷಗಳಿಂದ ಮೋದಿ ದೇಶವಾಸಿಗಳಿಗೆ ಬಗೆಬಗೆಯ ಚಾಕೋಲೇಟ್‌ ನೀಡುತ್ತಿದ್ದಾರೆ : ಪ್ರಿಯಾಂಕ್‌ ಲೇವಡಿ

13 ವರ್ಷಗಳಿಂದ ಮೋದಿ ದೇಶವಾಸಿಗಳಿಗೆ ಬಗೆಬಗೆಯ ಚಾಕೋಲೇಟ್‌ ನೀಡುತ್ತಿದ್ದಾರೆ : ಪ್ರಿಯಾಂಕ್‌ ಲೇವಡಿ

Priyank Kharge Slams PM Modi's Melodi Moment

ಬೆಂಗಳೂರು, ಮೇ 21- ಪ್ರಧಾನಿ ನರೇಂದ್ರ ಮೋದಿಯವರು ಚಾಕೊಲೇಟ್‌ ನೀಡುತ್ತಿರುವುದು ವಿದೇಶಿ ನಾಯಕರಿಗೆ ಮಾತ್ರವಲ್ಲ, ಕಳೆದ 13 ವರ್ಷಗಳಿಂದ ಭಾರತಿಯರಿಗೂ ಬಗೆಬಗೆಯ, ಬಣ್ಣಬಣ್ಣದ ಚಾಕೋಲೇಟ್‌ ನೀಡಿದ್ದಾರೆ ಮತ್ತು ನೀಡುತ್ತಲೇ ಇದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಲೇವಡಿ ಮಾಡಿದ್ದಾರೆ.

ತಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಮಕ್ಕಳು ಅಳುವಾಗ ಹೇಗೆ ಚಾಕೋಲೇಟ್‌ ನೀಡಿ ಸಮಾಧಾನಿಸುತ್ತಾರೋ ಹಾಗೆಯೇ, ದೇಶದ ಜನ ಸಮಸ್ಯೆಗಳಲ್ಲಿರುವಾಗ ಘೋಷಣೆಗಳೆಂಬ ಚಾಕೋಲೇಟ್‌ ನೀಡಿ ಸಮಾಧಾನಿಸುವ ಕೆಲಸವನ್ನು ಪ್ರಧಾನಿಯವರು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಭಾರತೀಯರು ಈ ಕನಸು ಎನ್ನುವ ಚಾಕೋಲೇಟ್‌ಗಳನ್ನು ಸವಿಯುತ್ತಾ, ಸಮಾಧಾನಗೊಳ್ಳಬೇಕಿದೆ. ಗುಜರಾತ್‌ ಮಾಡೆಲ್‌,ಅಚ್ಛೇದಿನ್‌, ವಿಶ್ವಗುರು, ಮೇಕ್‌ ಇನ್‌ ಇಂಡಿಯಾ, ಖೇಲೋ ಇಂಡಿಯಾ, ಅಮೃತ್‌ ಕಾಲ್‌, ವಿಕಸಿತ್‌ ಭಾರತ್‌, ಸ್ಟಾರ್ಟ್‌ ಅಪ್‌ ಇಂಡಿಯಾ, ಸ್ಕಿಲ್‌ ಇಂಡಿಯಾ, ಆತ ನಿರ್ಭರ ಭಾರತ್‌, ಬೇಟಿ ಬಚಾವೋ, ಬೇಟಿ ಪಡಾವೋ, ಖೇಲೋ ಇಂಡಿಯಾ 20 ಲಕ್ಷ ಕೋಟಿ ಪ್ಯಾಕೇಜ್‌ ಸೇರಿದಂತೆ ಮೋದಿಯವರು ಭಾರತೀಯರಿಗೆ ಕೊಟ್ಟಿರುವ ಘೋಷಣೆಗಳೆಂಬ ಚಾಕೋಲೇಟ್‌ ಹಲವಾರು ಎಂದಿದ್ದಾರೆ.

ಪ್ರತಿ ಚುನಾವಣೆಗೊಂದು ಘೋಷಣೆ, ಪ್ರತಿ ವರ್ಷಕ್ಕೊಂದು ಘೋಷಣೆ, ಪ್ರತಿ ವೈಫಲ್ಯಕ್ಕೊಂದು ಘೋಷಣೆ, ಇವುಗಳು ವಾಸ್ತವವಾಗಿದ್ದು ಮಾತ್ರ ಸೊನ್ನೆ. ಭಾರತೀಯರಿಗೆ ಹುಸಿ ಸಂತೋಷವನ್ನು ನೀಡುವ ಈ ಚಾಕೋಲೇಟ್‌ಗಳು ಈಗ ಸಲಹೆಗಳೆಂಬ ಹೊಸ ರೂಪಕ್ಕೆ ತಿರುಗಿವೆ ಎಂದಿದ್ದಾರೆ.
ಅಡುಗೆಗೆ ಎಣ್ಣೆ ಬಳಸಬೇಡಿ, ಪೆಟ್ರೋಲ್‌ ಬಳಕೆ ಕಡಿಮೆಗೊಳಿಸಿ, ಗ್ಯಾಸ್‌‍ ಬದಲು ಗಟರ್‌ ಗ್ಯಾಸ್‌‍ ಬಳಸಿ, ವರ್ಕ್‌ಫ್ರಮ್‌ ಹೋಮ್‌ ಮಾಡಿ, ಬ್ಯೂಟಿ ಪಾರ್ಲರ್‌ಗೆ ಹೋಗಬೇಡಿ, ರಾಸಾಯನಿಕ ಗೊಬ್ಬರ ಬಳಸದೆ ಕೃಷಿ ಮಾಡಿ, ಇತ್ಯಾದಿ ಸಲಹೆ ನೀಡುತ್ತಿದ್ದಾರೆ.

ಸಿಹಿ ಚಾಕೋಲೇಟ್‌ ನೀಡುತ್ತಿದ್ದ ಮೋದಿಯವರು ಈಗ ಭಾರತೀಯರಿಗೆ ಕಹಿ ಚಾಕೋಲೇಟ್‌ ನೀಡಲು ಶುರು ಮಾಡಿದ್ದಾರೆಂದರೆ, ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದೇ ಅರ್ಥ ಎಂದು ಪ್ರಿಯಾಂಕ್‌ ಎಚ್ಚರಿಕೆ ನೀಡಿದ್ದಾರೆ.

RELATED ARTICLES
spot_img

Latest News