Homeರಾಜ್ಯಸರ್ಕಾರದ ಕ್ರಿಮಿನಲ್‌ ಪ್ರಕರಣ ವಾಪಸ್‌‍ ವಿರುದ್ಧ ಹೋರಾಟ : ಛಲವಾದಿ ನಾರಾಯಣಸ್ವಾಮಿ

ಸರ್ಕಾರದ ಕ್ರಿಮಿನಲ್‌ ಪ್ರಕರಣ ವಾಪಸ್‌‍ ವಿರುದ್ಧ ಹೋರಾಟ : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಮೇ 22- ಕ್ರಿಮಿನಲ್‌ ಹಿನ್ನೆಲೆಯಲ್ಲಿ ವ್ಯಕ್ತಿಗಳ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್‌‍ ಪಡೆದಿರುವ ರಾಜ್ಯಸರ್ಕಾರ ತನ್ನ ನಿರ್ಧಾರ ಪುನರ್‌ ಪರಿಶೀಲನೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದು ಅನಿವಾರ್ಯ ಎಂದು ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಮಿನಲ್‌ ಪ್ರಕರಣಗಳನ್ನು ವಾಪಸ್‌‍ ಪಡೆಯಲು ಸರ್ಕಾರಕ್ಕೆ ಅಧಿಕಾರ ಇಲ್ಲ. ಇಂತಹ ಪ್ರಕರಣಗಳನ್ನು ಹಿಂಪಡೆಯುತ್ತಾರೆ ಎಂದರೆ ಸರ್ಕಾರವೇನು ನ್ಯಾಯಾಲಯವೇ? ಎಂದು ಪ್ರಶ್ನೆ ಮಾಡಿದರು. ಸರ್ಕಾರ ಇಂಥ ದುಂಡಾವರ್ತಿ ತೋರಬಾರದು. ಸರ್ಕಾರ ತನ್ನ ನಿರ್ಧಾರ ಹಿಂಪಡೆಯದಿದ್ದಲ್ಲಿ ಬಿಜೆಪಿ ಹೋರಾಟ ಮಾಡಬೇಕಾಗುತ್ತದೆ. ಜತೆಗೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಈ ನಿರ್ಧಾರ ವಾಪಸ್‌‍ ಪಡೆಯುತ್ತೇವೆ ಎಂದು ಹೇಳಿದರು.

ಗುಲ್ಬರ್ಗಾದ ಲಾಡ್ಲೆ ಮಶಾಯಿಕ್‌ ದರ್ಗಾ ಗಲಾಟೆ ಪ್ರಕರಣಗಳನ್ನು ವಾಪಸ್‌‍ ಪಡೆದಿರುವುದು ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ. ಓಲೈಕೆಗೆ ಸರ್ಕಾರ ಮುಂದಾಗಿದೆ. ವಿಚಾರಣೆ ಹಂತದಲ್ಲಿರುವ ಪ್ರಕರಣಗಳನ್ನು ಹಿಂಪಡೆಯುವುದು ಅಸಂವಿಧಾನಿಕ ಎಂದು ವಾಗ್ದಾಳಿ ನಡೆಸಿದರು. ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣದಲ್ಲಿ ಪೊಲೀಸ್‌‍ ಠಾಣೆಗೆ ಬೆಂಕಿ ಹಚ್ಚಿದ ನಿದರ್ಶನ ನಮ ಮುಂದಿದೆ. ಇವು ಕ್ರಿಮಿನಲ್‌ ಪ್ರಕರಣಗಳು. ಕನ್ನಡಪರ ಸಂಘಟನೆಗಳ ಮೇಲೆ ಪ್ರಕರಣ ದಾಖಲಿಸಿ ನಂತರ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿದ್ದಾರೆ. ನಾವೆಷ್ಟೇ ಹೋರಾಟ ಮಾಡಿದರೂ ಕಾಂಗ್ರೆಸ್‌‍ ಸರ್ಕಾರ ದುಂಡಾವರ್ತಿ ತೋರಿಸುತ್ತಿದೆ ಎಂದು ಆರೋಪಿಸಿದರು.

ಇದು ಸರ್ಕಾರ ಮಾಡಿದ ಅಪರಾಧ. ಸಿಎಂ ಸಿದ್ದರಾಮಯ್ಯ ಇಷ್ಟು ಕೆಳಮಟ್ಟದ ರಾಜಕೀಯ ಮಾಡಬಾರದಿತ್ತು. ಇದನ್ನು ಬಿಜೆಪಿ ಸಹಿಸುವುದಿಲ್ಲ. ಪ್ರಿಯಾಂಕ್‌ ಖರ್ಗೆ ಅವರು ಒತ್ತಡ ಹಾಕಿದ್ದಾರೆ. ಈ ಹಿಂದೆಯೂ ಅವರು ತಮ ಕ್ಷೇತ್ರದಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್‌‍ ಪಡೆದಿದ್ದರು. ಸರ್ಕಾರದ ಈ ನೀತಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

RELATED ARTICLES

Latest News