ನವದೆಹಲಿ, ಮೇ 25- ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೆ ಏರಿಕೆಯಾಗಿದ್ದು, ಇಂದು ಬೆಳಿಗ್ಗೆ ಪೆಟ್ರೋಲ್ಗೆ ಲೀಟರ್ಗೆ 2.61 ಹಾಗೂ ಡೀಸೆಲ್ಗೆ 2.71 ಹೆಚ್ಚಳ ಮಾಡಲಾಗಿದೆ.
ಕಳೆದ ಎರಡು ವಾರಗಳೊಳಗೆ ಇದು ನಾಲ್ಕನೇ ಬಾರಿ ಬೆಲೆ ಏರಿಕೆಯಾಗಿದೆ.
ಮೇ 15ರಿಂದ ಇಂಧನ ದರ ಪರಿಷ್ಕರಣೆ ಪುನರಾರಂಭವಾದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಒಟ್ಟಾರೆ ಪ್ರತಿ ಲೀಟರ್ವರೆಗೆ ಸುಮಾರು 7.5 ಏರಿಕೆ ದಾಖಲಾಗಿದ್ದು, ಇದರಿಂದ ದರ ಏರಿಕೆ ಹಾಗೂ ಸಾರಿಗೆ ವೆಚ್ಚ ಹೆಚ್ಚಳದ ಬಗ್ಗೆ ಆತಂಕ ಮೂಡಿದೆ.
ಇತ್ತೀಚಿನ ಪರಿಷ್ಕರಣೆಯ ನಂತರ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 99.51ರಿಂದ 102.12ಕ್ಕೆ ಏರಿಕೆಯಾಗಿದೆ. ಡೀಸೆಲ್ ಬೆಲೆ 92.49ರಿಂದ 95.20ಕ್ಕೆ ಹೆಚ್ಚಳವಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ, ರಿಫೈನಿಂಗ್ ವೆಚ್ಚದ ಹೆಚ್ಚಳ ಹಾಗೂ ರೂಪಾಯಿ ಮೌಲ್ಯ ಕುಸಿತದಿಂದ ಆಮದು ವೆಚ್ಚ ಏರಿಕೆಯಾಗಿರುವುದು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.
ಹೊಸ ದರ ಪರಿಷ್ಕರಣೆಯ ನಂತರ ಮುಂಬೈನಲ್ಲಿ ಪೆಟ್ರೋಲ್ ದರ 111.21 ಮತ್ತು ಡೀಸೆಲ್ 97.83ಕ್ಕೆ ತಲುಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 113.51 ಹಾಗೂ ಡೀಸೆಲ್ 99.82 ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ 107.77 ಮತ್ತು ಡೀಸೆಲ್ 99.55 ಆಗಿದೆ.
ರಾಜ್ಯವಾರು ತೆರಿಗೆ ದರಗಳ ಕಾರಣ ವಿವಿಧ ನಗರಗಳಲ್ಲಿ ಇಂಧನ ದರಗಳು ಬದಲಾಗುತ್ತವೆ.
ಅಮೆರಿಕಾ-ಇರಾನ್ ಯುದ್ದದ ನಂತರ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೋರ್ಮುಜ್ ಜಲಸಂಧಿಯಲ್ಲಿ ಉಂಟಾದ ಅಡಚಣೆಯಿಂದ ಫೆಬ್ರವರಿ ಅಂತ್ಯದಿಂದ ಕಚ್ಚಾ ತೈಲದ ಬೆಲೆ 50 ಶೇಕಡಕ್ಕೂ ಹೆಚ್ಚು ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಮೇ 15ರಂದು ಪೆಟ್ರೋಲ್ ಮತ್ತು ಡೀಸೆಲ್ ಎರಡಕ್ಕೂ ಲೀಟರ್ಗೆ 3 ಹೆಚ್ಚಳ ಮಾಡಲಾಗಿತ್ತು.
ಮೇ 19ರಂದು ಲೀಟರ್ಗೆ 90 ಪೈಸೆ ಹೆಚ್ಚಿಸಲಾಗಿತ್ತು. ಮೇ 24ರಂದು ಪೆಟ್ರೋಲ್ಗೆ 87 ಪೈಸೆ ಮತ್ತು ಡೀಸೆಲ್ಗೆ 91 ಪೈಸೆ ಹೆಚ್ಚಳ ಮಾಡಲಾಗಿತ್ತು.
