ಕಾರವಾರ,ಮೇ 25- ಉತ್ತರ ಕನ್ನಡ ಜಿಲ್ಲೆ ಭಟ್ಕಳದ ತಟ್ಟಿಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತರಲು ಹೋಗಿದ್ದ ಸಂದರ್ಭದಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು, ಇಂದು ಮತ್ತೊಬ್ಬರ ಮೃತದೇಹ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನ ಮಾದೇವ್ ನಾಯ್ಕ್ ಎಂದು ಗುರುತಿಸಲಾಗಿದೆ. ನಿನ್ನೆ ಈ ಭೀಕರ ದುರಂತದಲ್ಲಿ ಸಾವನ್ನಪ್ಪಿದ 10 ಜನರ ಮೃತದೇಹಗಳು ಪತ್ತೆಯಾಗಿದ್ದವು. ನದಿಯಲ್ಲಿ ನಾಪತ್ತೆಯಾಗಿದ್ದವರಿಗಾಗಿ ಇಂದು ಬೆಳಿಗ್ಗೆ 8 ಗಂಟೆಯಿಂದಲೇ ಎನ್‌ಡಿಆರ್‌ಎ್ ತಂಡ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಕಾಣೆಯಾಗಿದ್ದ ಮಾದೇವ್ ನಾಯ್ಕ್ ಅವರ ಮೃತದೇಹ ತಟ್ಟೆಹಕ್ಕಲು ನದಿಯ ಅಳವೆಯಲ್ಲಿ ಪತ್ತೆಯಾಗಿದೆ.
ನದಿಯ ನೀರಿನಲ್ಲಿ ಕಾಣೆಯಾಗಿದ್ದ ಶವಗಳನ್ನು ಪತ್ತೆ ಹಚ್ಚಲು ಎನ್‌ಡಿಆರ್‌ಎ್ ತಂಡದ ಶೋಧ ಕಾರ್ಯಾಚರಣೆಯಲ್ಲಿ ಮುಳುಗು ತಜ್ಞರು ಕಾರ್ಯಾಚರಣೆ ನಡೆಸಿದ್ದರು. ಅಗ್ನಿಶಾಮಕ ದಳ ಹಾಗೂ ಎನ್‌ಡಿಆರ್‌ಎ್ ತಂಡಗಳು ಪ್ರತ್ಯೇಕವಾಗಿ ಶೋಧ ನಡೆಸಿದ್ದವು. ಇದಕ್ಕೆ ಸ್ಥಳೀಯ ಮೀನುಗಾರರು ಸಾಥ್ ನೀಡಿ ಮೃತದೇಹ ಪತ್ತೆ ಹಚ್ಚಿದ್ದಾರೆ.
ನದಿಯಲ್ಲಿ ನೀರು ಕಡಿಮೆ ಇದ್ದ ಕಾರಣ ಶೋಧ ಕಾರ್ಯಕ್ಕೆ ಸಹಕಾರಿಯಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ: ಈ ದುರಂತದಲ್ಲಿ ಬದುಕುಳಿದ ಇಬ್ಬರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ವೆಂಕಟಾಪುರ ನದಿಯಲ್ಲಿ ಕಪ್ಪೆ ಚಿಪ್ಪು ತರಲು ಹೋಗಿದ್ದ ವೇಳೆ ಏಕಾಏಕಿ ನದಿಯಲ್ಲಿ ನೀರು ಬಂದ ಕಾರಣ ಈ ಅವಘಡ ಸಂಭವಿಸಿದೆ.11 ಮಂದಿಯ ಮೃತದೇಹಗಳನ್ನು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
