ಬೆಂಗಳೂರು, ಮೇ 26- ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸಿರುವ ಯೋಜನೆ ಕುರಿತಂತೆ ತಮಿಳುನಾಡು ಸರ್ಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಇದು ಕರ್ನಾಟಕ್ಕೆ ಸಿಹಿ ಸುದ್ದಿ ಎಂದು ಜಲಸಂಪನೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಷ್ಟೇ ಸುಪ್ರೀಂಕೋರ್ಟಿನ ಆದೇಶದ ಮಾಹಿತಿ ತಮಗೆ ಸಿಕ್ಕಿದೆ. ಕರ್ನಾಟಕದ ಪರವಾಗಿ ಸುಪ್ರೀಂಕೋರ್ಟ್‌ಗೆ ಧನ್ಯವಾದ ಹೇಳುತ್ತೇನೆ ಎಂದರು.
ಈ ಮೊದಲು ಮೇಕೆದಾಟು ಯೋಜನೆ ಕುರಿತು ಚರ್ಚೆಯಾದಾಗ, ತಮಿಳುನಾಡಿಗೆ 177 ಟಿಎಂಸಿ ನೀರನ್ನು, ಕಾವೇರಿ ನ್ಯಾಯಾಧೀಕರಣ ತೀರ್ಪಿನಂತೆ ಹರಿಸುವುದು ಕರ್ನಾಟಕದ ಹೊಣೆಗಾರಿಕೆ ಎಂದು ಷರತ್ತು ವಿಧಿಸಲಾಗಿತ್ತು. ಅದರ ಹೊರತಾಗಿ ಮೇಕೆದಾಟು ಯೋಜನೆಗೆ ಅಡ್ಡಿ ಪಡಿಸುವುದು ಅನಗತ್ಯ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿತ್ತು.
ಈ ತೀರ್ಪು ಪುನರ್ ಪರಿಶೀಲನೆಯಾಗಬೇಕೆಂದು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲನವಿ ಸಲ್ಲಿಸಿತ್ತು. ಅದರ ಆಧಾರದ ಮೇಲೆ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ವಿಭಾಗೀಯ ಪೀಠವನ್ನು ಸುಪ್ರೀಂಕೋರ್ಟ್‌ನಲ್ಲಿ ರಚಿಸಲಾಗಿತ್ತು. ಇಂದು ವಿಚಾರಣೆ ನಡೆಸಿದ ಪೀಠ, ತಮಿಳುನಾಡಿನ ಮೇಲನವಿಯನ್ನು ತಿರಸ್ಕರಿಸಿದೆ ಎಂದು ವಿವರಿಸಿದರು.
ಈ ತೀರ್ಪು ಕರ್ನಾಟಕದ ಪರವಾಗಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಕೈಗೊಳ್ಳಲು ಅಗತ್ಯವಾದ ಅನುಮತಿಗಳನ್ನು ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ. ಈಗಾಗಲೇ ಹಳೆಯ ವಿಸ್ತೃತ ಯೋಜನಾ ವರದಿ ಕೇಂದ್ರದ ಬಳಿ ಇದೆ. ಪರಿಷ್ಕೃತ ಯೋಜನಾ ವರದಿ ಸಿದ್ಧಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
