ಬೆಂಗಳೂರು, ಮೇ 26- ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವುದಾದರೆ, ಎರಡನೇ ಹಂತದಲ್ಲಿರುವ ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ನಂತರ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಬೇಕೆಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನಂತರ ಡಿ.ಕೆ.ಶಿವಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ. ಅವರಿಗೆ ಅವಕಾಶ ಸಿಗಬೇಕು. ರಾಜಕಾರಣದಲ್ಲಿ ಕೆಲ ಸಂದರ್ಭಗಳಲ್ಲಿ ಬೇರೆಯವರಿಗೂ ಅವಕಾಶ ಒದಗಬಹುದು. ಆದರೆ ಸದ್ಯಕ್ಕೆ ಅಂತಹ ಪರಿಸ್ಥಿತಿಯಿಲ್ಲ ಎಂದರು.
2028ರ ವಿಧಾನಸಭಾ, 2029ರ ಲೋಕಸಭಾ ಚುನಾವಣೆಯನ್ನು ಜೊತೆಯಲ್ಲಿಟ್ಟುಕೊಂಡು ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಸಿಕ್ಕರೆ ಒಳ್ಳೆಯದು ಎಂದರು.
ಹೈಕಮಾಂಡ್ ಏನೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ. ಡಿ.ಕೆ.ಶಿವಕುಮಾರ್ ಪಕ್ಷದ ಶಿಸ್ತಿನ ಸಿಪಾಯಿ. ಈ ಹಿಂದೆ ಎರಡನೇ ಅವಧಿಗೆ ಶಾಸಕರಾಗುವಾಗ ಕಾಂಗ್ರೆಸ್‌ನಿಂದ ಟಿಕೆಟ್ ಸಿಕ್ಕಿರಲಿಲ್ಲ, ಪಕ್ಷೇತರರಾಗಿ ಗೆದ್ದಿದ್ದರು. ರಾಜ್ಯದಲ್ಲಿ ಜನತಾ ಪರಿವಾರದ ಸರ್ಕಾರ ಅಧಿಕಾರದಲ್ಲಿತ್ತು. ಡಿ.ಕೆ.ಶಿವಕುಮಾರ್ ಆಡಳಿತರೂಢ ಪಕ್ಷ ಸೇರುವ ಬದಲಾಗಿ,
ಕಾಂಗ್ರೆಸ್‌ಗೆ ಸೇರಿದ್ದರು. ಮೊದಲಿನಿಂದಲೂ ಅವರ ಪಕ್ಷ ನಿಷ್ಠೆ ಅಛಲವಾದದ್ದು ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ನೀಡಿದಾಕ್ಷಣ ಏಕಾಂಗಿಯಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಿಲ್ಲ. ನಾಯಕತ್ವ ಬದಲಾವಣೆಯಾಗುವಾಗ ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮಲ್ಲಿಕಾರ್ಜುನ ಖರ್ಗೆ, ಎಂ.ಬಿ.ಪಾಟೀಲ್, ಸತೀಶ್‌ಜಾರಕಿ ಹೊಳಿ ಸೇರಿದಂತೆ ಎಲ್ಲಾ ನಾಯಕರ ಸಹಕಾರವು ಬೇಕಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಆಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಕನಿಷ್ಠ 70 ಸ್ಥಾನಗಳು ಖಾಯಂ ಆಗಿರುತ್ತದೆ. ಸುಮಾರು 30 ರಿಂದ 40 ಹೆಚ್ಚುವರಿ ಸ್ಥಾನಗಳನ್ನು ಗೆದ್ದರೆ ಅಧಿಕಾರ ಹಿಡಿಯುವುದು ಸುಲಭ. ರಾಜ್ಯದಲ್ಲಿ ಬಿಜೆಪಿ ಅಥವಾ ಜೆಡಿಎಸ್‌ಗೆ ಅವಕಾಶಗಳಿಲ್ಲ ಎಂದರು.
ಬಿಜೆಪಿ ದೇಶಾದ್ಯಂತ ಪ್ರಾದೇಶಿಕ ಹಾಗೂ ಸ್ಥಳೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಅವುಗಳನ್ನು ನಿರ್ನಾಮ ಮಾಡಿದೆ. ಕರ್ನಾಟಕದಲ್ಲೂ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಇದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಕೂಡ ಸೋಲು ಕಾಣಲಿದೆ ಎಂದರು.
