ನವದೆಹಲಿ, ಮೇ 26- ನಾಯಕತ್ವದ ಗೊಂದಲ ಇವತ್ತೇ ಬಗೆ ಹರಿಯಬಹುದು ಅಥವಾ ಇನ್ನೂ ಒಂದೆರಡು ದಿನ ಸಮಯ ತೆಗೆದುಕೊಳ್ಳಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ್ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ತಿಂಗಳಿನಿಂದಲೂ ನಾಯಕತ್ವದ ಗೊಂದಲವಂತೂ ಇದೆ. ಅದು ಬಗೆ ಹರಿಯಬೇಕೆಂಬುದು ಎಲ್ಲರ ಆಶಯ. ಕಾರ್ಯಕರ್ತರ ಒತ್ತಾಸೆಯೂ ಇದೇ ಆಗಿದೆ. ವರಿಷ್ಠರ ಜೊತೆ ಇಂದಿನಿಂದ ಸಭೆಗಳು ಆರಂಭವಾಗಿವೆ. ಇವತ್ತೇ ಮುಗಿಯಬಹುದು ಅಥವಾ ನಾಳೆ, ನಾಡಿದ್ದು ಮುಂದುವರಿಯಬಹುದು. ಆದರೆ ಇತ್ಯರ್ಥವಾಗಬೇಕಿರುವುದಂತೂ ನಿಜ ಎಂದರು.
ತಮಗೆ ಹೈಕಮಾಂಡ್ನಿಂದ ಯಾವುದೇ ಆಹ್ವಾನ ಇರಲಿಲ್ಲ. ಮುಖ್ಯಮಂತ್ರಿಯುವರ ಜೊತೆ ದೆಹಲಿಗೆ ಬಂದಿದ್ದೇನೆ. ಇಂದು ಮಧ್ಯಾಹ್ನದ ಸಭೆಯ ಮೂಲಕ ವಿಷಯ ತಿಳಿಯಬಹುದು ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ,
ಒಂದು ವೇಳೆ ಪಕ್ಷದ ಮುಖಂಡರು ತಮಗೆ ಜವಾಬ್ದಾರಿ ನಿರ್ವಹಿಸು ಎಂದರೆ ನಾನು ಪರಿಶೀಲಿಸುತ್ತೇನೆ. ನನ್ನ ಅಭಿಪ್ರಾಯವನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ ಎಂದರು.ನಾಯಕತ್ವದ ಗೊಂದಲ ಬಗೆ ಹರಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ಎಲ್ಲ ಗೊಂದಲಗಳು ಬಗೆ ಹರಿಯುತ್ತವೆ ಎಂದರು.
