ಬೆಂಗಳೂರು,ಮೇ 27- ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಕೊರತೆಯಿಂದ ದಿನದಿಂದ ದಿನಕ್ಕೆ ತೈಲಬೆಲೆ ಏರಿಕೆಯಾಗುತ್ತಿದ್ದು, ರಾಜ್ಯದ ವಿವಿಧ ಬಂಕ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್ ಎದ್ದುಕಾಣುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಕೊಡಗು ಜಿಲ್ಲೆಯ ಬಹುತೇಕ ಬಂಕ್‌ಗಳ ಮುಂದೆ ನೋ ಸ್ಟಾಕ್ ಬೋರ್ಡ್‌ಗಳು ಕಾಣಿಸುತ್ತಿದ್ದು, ಪ್ರವಾಸಿಗರು ತಮ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳಲು ತೊಂದರೆ ಅನುಭವಿಸುವಂತಾಗಿದೆ.ಮಡಿಕೇರಿಯ ಕುಶಾಲನಗರ, ಪೊನ್ನಂಪೇಟೆ, ವಿರಾಜಪೇಟೆ, ಉದಿಕೇರಿ ಪಟ್ಟಣಗಳಲ್ಲಿ ಕೆಲವು ಬಂಕ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್ ಅಳವಡಿಸಲಾಗಿತ್ತು.
ರಾಯಚೂರು ಜಿಲ್ಲೆಯ ಸಿಂಧನೂರು ತಾಳ್ಲೂಕಿನ ಸಾಲಗೊಂದದಲ್ಲಿ ಅಡುಗೆ ಅನಿಲಕ್ಕಾಗಿ ಗ್ರಾಹಕರು ರಾತ್ರಿಯಿಡೀ ಅಡುಗೆ ಅನಿಲ ವಿತರಕ ಕೇಂದ್ರದ ಮುಂದೆ ಚಾಪೆ, ದಿಂಬು ಸಮೇತ ಪಾಳೆ ಹಚ್ಚಿ ನಿಂತಿದ್ದ ದೃಶ್ಯಗಳು ಕಂಡುಬಂದರೆ, ಕೊಪ್ಪಳ ಹಾಗೂ ಕುಷ್ಟಗಿಯಲ್ಲಿ ಡೀಸೆಲ್‌ಗಾಗಿ ಟ್ರ್ಯಾಕ್ಟರ್ ಮಾಲೀಕರು ಹಾಗೂ ರೈತರು ಕ್ಯಾನ್‌ಗಳನ್ನು ಹಿಡಿದು ಸರದಿ ಸಾಲಿನಲ್ಲಿ ನಿಂತಿದ್ದರು.
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಉಳುಮೆಗಾಗಿ ಟ್ರ್ಯಾಕ್ಟರ್‌ಗೆ ಡೀಸೆಲ್ ಖರೀದಿಸಲು ಹರಸಾಹಸ ಪಡುವಂತಾಗಿದೆ.
ಕೊಪ್ಪಳದ ಕುಷ್ಟಗಿ, ಗದಗ, ರಾಯಚೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ಬಸವನಬಾಗೇವಾಡಿ ಸೇರಿದಂತೆ ಮತ್ತಿತರೆಡೆ ಡೀಸೆಲ್ ಕೊರತೆ ಉಂಟಾಗಿದ್ದು, ಕ್ಯಾನ್‌ಗಳನ್ನು ಹಿಡಿದು ಸರದಿ ಸಾಲಿನಲ್ಲಿ ನಿಂತಿದ್ದರು. ಕೆಲವರು ನಿಯಮಾನುಸಾರ ಯಾವುದೇ ಕಾರಣಕ್ಕೂ ಕ್ಯಾನ್‌ಗಳಿಗೆ ಡೀಸೆಲ್ ಹಾಕುವುದಿಲ್ಲ ಎಂದು ಬಂಕ್‌ನ ಸಿಬ್ಬಂದಿಗಳು ಸೂಚನೆ ನೀಡಿದ್ದರಿಂದ ವಾಗ್ವಾದ, ಪ್ರತಿಭಟನೆಗಳು ಕೂಡಾ ನಡೆದವು.
ಇನ್ನೂ ಕೆಲವು ಕಡೆ ರೈತರು ರೈತರು ಟ್ರ್ಯಾಕ್ಟರ್‌ಗಳನ್ನು ಸರದಿ ಸಾಲಿನಲ್ಲಿ ನಿಲ್ಲಿಸಿಕೊಂಡು ಡೀಸೆಲ್‌ಗಾಗಿ ಕಾಯುತ್ತಿದ್ದ ದೃಶ್ಯಗಳು ಕಂಡುಬಂದವು.ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಚಿತ್ರದುರ್ಗ, ಹಾಸನ ಜಿಲ್ಲೆಗಳಲ್ಲೂ ಸಹ ಕೃಷಿ ಚಟುವಟಿಕೆ ಬಿರುಸಿನಿಂದ ಸಾಗಿದ್ದು, ರೈತರು ಜಮೀನುಗಳನ್ನು ಹದ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಇಲ್ಲೂ ಕೂಡಾ ಡೀಸೆಲ್ ಕೊರತೆ ಉಂಟಾಗಿದ್ದು, ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.
