Homeರಾಜ್ಯರಾಜ್ಯದ ಹಲವೆಡೆ ಭಾರೀ ಅವಾಂತರ ಸೃಷ್ಟಿಸಿದ ಪೂರ್ವ ಮುಂಗಾರು ಮಳೆ

ರಾಜ್ಯದ ಹಲವೆಡೆ ಭಾರೀ ಅವಾಂತರ ಸೃಷ್ಟಿಸಿದ ಪೂರ್ವ ಮುಂಗಾರು ಮಳೆ

Pre-monsoon rains wreak havoc in many parts of the state

ಬೆಂಗಳೂರು,ಮೇ 27- ರಾಜ್ಯದ ಹಲವೆಡೆ ಪೂರ್ವ ಮುಂಗಾರು ಮಳೆ ಅಬ್ಬರಿಸಿದ್ದು, ಭಾರೀ ಅವಾಂತರ ಸೃಷ್ಟಿಸಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ದಾವಣಗೆರೆ, ಚಿತ್ರದುರ್ಗ, ರಾಯಚೂರು, ಗುಲ್ಬರ್ಗ, ಹುಬ್ಬಳ್ಳಿ, ಬೀದರ್‌ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಮಳೆಯಾಗಿದೆ.

ರಾಯಚೂರಿನಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದ್ದು, ಇಂದು ಬೆಳ್ಳಂಬೆಳಿಗ್ಗೆಯೇ ಮಳೆ ಸುರಿದಿದ್ದು, ಜನರು ತೊಂದರೆ ಅನುಭವಿಸಬೇಕಾಯಿತು.ಕೆಲಸ ಕಾರ್ಯಗಳಿಗೆ ತೆರಳಲು ಹಾಗೂ ಬೀದಿಬದಿ ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಯಿತು.

ರಾಯಚೂರು ತಾಲ್ಲೂಕಿನ ಕಡಗಂದೊಡ್ಡಿಯಲ್ಲಿ ರೈತರೊಬ್ಬರಿಗೆ ಸಿಡಿಲು ಬಡಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೀದರ್‌ನಲ್ಲೂ ಸಹ ತಡರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಅಕ್ಕಮಹಾದೇವಿ ಕಾಲೇಜಿನ ಕಾಂಪೌಂಡ್‌ ಕುಸಿದುಬಿದ್ದಿದೆ.

ಹುಲಸೂರು ಪಟ್ಟಣದಲ್ಲಿ ಮನೆಯ ಶೀಟ್‌ ಮೇಲಿಟ್ಟಿದ್ದ ಕಲ್ಲು ಬಿದ್ದು ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಯಾದಗಿರಿ ಜಿಲ್ಲೆಯಲ್ಲಿ ಸುರಿದ ಮಳೆಗೆ ಕೇಂದ್ರ ಬಸ್‌‍ ನಿಲ್ದಾಣದ ಸಮೀಪದ ರಸ್ತೆ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಯಿತು.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಿನ್ನೆ ಮಧ್ಯಾಹ್ನದಿಂದ ಬಿಟ್ಟುಬಿಟ್ಟು ಸುರಿಯುತ್ತಿರುವ ಮಳೆಯಿಂದ ಜನರು ಭಾರೀ ತೊಂದರೆ ಅನುಭವಿಸಿದರು. ರಸ್ತೆಯಲ್ಲಿ ನೀರು ಹರಿಯುತ್ತಿದ್ದ ಪರಿಣಾಮ ವಾಹನಗಳ ಸೈಲೆನ್ಸರ್‌ಗಳಿಗೆ ನೀರು ನುಗ್ಗಿ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ದೃಶ್ಯಗಳು ಕಂಡುಬಂದವು.

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಸುಮಾರು ಒಂದೂವರೆ ಗಂಟೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಹಲವೆಡೆ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಮೂರು ಕಾರು ಹಾಗೂ ಎರಡು ಆಟೋಗಳು ಜಖಂಗೊಂಡಿರುವ ಘಟನೆ ಅರಳೀಕೆರೆ ರಸ್ತೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿದ್ದು, ತಾಲ್ಲೂಕಿನ ಇಲವಾಲದಲ್ಲಿ ಸಿಡಿಲು ಬಡಿದು ಮಡಿಕೇರಿ ಮೂಲದ ರೋಶನ್‌ ಎಂಬಾತ ಮೃತಪಟ್ಟಿದ್ದಾರೆ. ಸಂಬಂಧಿಕರ ಮನೆಗೆ ಬಂದಿದ್ದ ಈತ ಇಲವಾಲದಲ್ಲಿ ನಿವೇಶನ ನೋಡಲು ಹೋಗಿದ್ದಾಗ ಸಿಡಿಲು ಬಡಿದು ಈ ಅವಘಡ ಸಂಭವಿಸಿದೆ. ರಾಜಧಾನಿ ಬೆಂಗಳೂರಿನಲ್ಲೂ ಸಹ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಮರಗಳು ಉರುಳಿಬಿದ್ದಿವೆ. ಮೇ 30 ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

RELATED ARTICLES

Latest News