ಬೆಂಗಳೂರು, ಮೇ 27- ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯನವರ ಜೊತೆಗೆ ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಚರ್ಚೆ ನಡೆಸಿದೆ. ಉಳಿದಂತೆ ನಾಯಕತ್ವ ಬದಲಾವಣೆ ಹಾಗೂ ಇತರ ಎಲ್ಲಾ ವಿಚಾರಗಳು ಕೇವಲ ವದಂತಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಐಸಿಸಿಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಭೆಯ ಬಳಿಕ, ಹೇಳಿಕೆ ನೀಡಿ ಸ್ಪಷ್ಟನೆ ನೀಡಿದ್ದಾರೆ. ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾತ್ರ ಚರ್ಚೆ ಮಾಡಿದ್ದೇವೆ. ಬೇರೆ ಯಾವ ವಿಚಾರ ಚರ್ಚೆ ಮಾಡಿಲ್ಲ ಎಂದಿದ್ದಾರೆ. ಅದೇ ಅಧಿಕೃತ ಮತ್ತು ಅಂತಿಮ ಎಂದರು.
ಸಿದ್ದರಾಮಯ್ಯ ಅವರ ರಾಜೀನಾಮೆ ಕೇವಲ ಊಹಾಪೋಹ ಮಾತ್ರ. ಸುರ್ಜೇವಾಲ ಅವರು ರಾಜ್ಯಕ್ಕೆ ಯಾವ ಕಾರಣಕ್ಕೆ ಆಗಮಿಸುತ್ತಿದ್ದಾರೆ ಎಂದು ಗೊತ್ತಿಲ್ಲ. ಪಕ್ಷದ ಉಸ್ತುವಾರಿ ನಾಯಕರಾಗಿರುವ ಅವರು, ರಾಜ್ಯಕ್ಕೆ ಭೇಟಿ ನೀಡುವುದರಲ್ಲಿ ವಿಶೇಷ ಏನೂ ಇರುವುದಿಲ್ಲ ಎಂದರು.
