-ರಾಮಸ್ವಾಮಿ ಕಣ್ವ
ಮದ್ಯಪಾನ ಮೃತ್ಯುವಿಗೆ ಆಹ್ವಾನ',ಕುಡಿತದ ಚಟ ಪತ್ನಿ ಮಕ್ಕಳ ಉಪವಾಸ’, `ಮದ್ಯಪಾನ ಆರೋಗ್ಯಕ್ಕೆ ಹಾನಿಕರ’… ಹೀಗೆ ಹಲವಾರು ಘೋಷಣೆಗಳನ್ನು ಕೇಳಿದ್ದೀರಿ, ನೋಡಿದ್ದೀರಿ. ಆದರೂ ಸಹ ಮದ್ಯಪಾನ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ.
ಇದಕ್ಕೆ ಆಧುನಿಕ ಜಗತ್ತಿನ ಜೀವನ ಶೈಲಿಯೂ ಒಂದು ಪ್ರಮುಖ ಕಾರಣ. ದುಡಿದ ಹಣವನ್ನು ಖರ್ಚು ಮಾಡಿ ಮೋಜು, ಮಸ್ತಿ ಮಾಡುವವರೇ ಬಹುತೇಕ ಮಂದಿ ಇದ್ದಾರೆ. ಇಂತಹವರು ಪ್ರತಿದಿನ ಕುಡಿಯಲೇಬೇಕು.
ಕೆಲಸದ ಒತ್ತಡ, ಸ್ನೇಹಿತರ ಒತ್ತಾಯ ಹಾಗೂ ಕೆಟ್ಟ ಅಭ್ಯಾಸಗಳು ಮದ್ಯಪಾನದತ್ತ ಜನರನ್ನು ಆಕರ್ಷಿಸುತ್ತವೆ. ಕೆಲವರು ಸಂಪಾದಿಸಿದ ಹಣದಲ್ಲಿ ಸ್ವಲ್ಪ ಖರ್ಚು ಮಾಡಿ ಖುಷಿ ಪಡುತ್ತಾರೆ. ಮತ್ತೆ ಕೆಲವರು ಸ್ನೇಹಿತರ ಜೊತೆ ಪಾರ್ಟಿಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ, ಪ್ರತಿಷ್ಠಿತ ಹೋಟೆಲ್‌ಗಳಿಗೆ ತೆರಳಿ ಮದ್ಯ ಸೇವಿಸುತ್ತಾರೆ.
ಮನರಂಜನೆಗಾಗಿ ಆರಂಭವಾದ ಈ ಚಟ ನಂತರ ವ್ಯಸನವಾಗಿ ಪರಿಣಮಿಸುತ್ತದೆ. ಆದ್ದರಿಂದ ಈಗ ಇದು ಸಮಾಜದ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.ಮದ್ಯಪಾನದ ಮತ್ತೊಂದು ಭೀಕರ ಪರಿಣಾಮವೆಂದರೆ `ಕುಡಿದು ವಾಹನ ಚಾಲನೆ’ ಮಾಡುವುದು. ಮದ್ಯ ಸೇವಿಸಿದ ಕೆಲವರು ವಾಹನ ಚಲಾಯಿಸುತ್ತಾರೆ. ಆ ಸಂದರ್ಭದಲ್ಲಿ ಅಮಲಿನಲ್ಲಿ ವಾಹನದ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಸಮಯಕ್ಕೆ ತಕ್ಕಂತೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ದೃಷ್ಟಿ ಮಸುಕಾಗುತ್ತದೆ. ಪರಿಣಾಮ ಫುಟ್‌ಪಾತ್, ಮೀಡಿಯನ್, ವಿದ್ಯುತ್ ಕಂಬ, ಮರ ಅಥವಾ ಇತರ ವಾಹನಗಳಿಗೆ ಡಿಕ್ಕಿ ಹೊಡೆದು ಕೈ-ಕಾಲು ಮುರಿದುಕೊಳ್ಳುತ್ತಾರೆ. ಕೆಲವರು ಪ್ರಾಣ ಕಳೆದುಕೊಳ್ತಾರೆ. ಕೆಲ ಸಂದರ್ಭಗಳಲ್ಲಿ ಅಮಾಯಕರ ಜೀವವನ್ನು ಬಲಿ ತೆಗೆದುಕೊಳ್ಳುತ್ತಾರೆ.
ಇಂದಿನ ಸಮಾಜದ ದೊಡ್ಡ ಸಮಸ್ಯೆಗಳಲ್ಲಿ ಒಂದಾದ ಇದನ್ನು ತಡೆಯಲು ಬೆಂಗಳೂರು ನಗರ ಸಂಚಾರಿ ಪೊಲೀಸರು ನಿರಂತರವಾಗಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರದ 53 ಸಂಚಾರಿ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಏಕಕಾಲದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿ ಕುಡಿದು ವಾಹನ ಚಲಾಯಿಸುವವರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸುತ್ತಾರೆ.
2024ರಲ್ಲಿ 23,620, 2025ರಲ್ಲಿ 38,919 ಹಾಗೂ ಈ ವರ್ಷದ ಮೊದಲ ನಾಲ್ಕು ತಿಂಗಳುಗಳಲ್ಲಿ 12,819 ಪ್ರಕರಣಗಳನ್ನು ನಗರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇವರು ಪೊಲೀಸರ ಕೈಗೆ ಸಿಕ್ಕಿಬಿದ್ದವರು ಮಾತ್ರ. ಮತ್ತೆ ಕೆಲವರು ರಸ್ತೆ, ಸರ್ಕಲ್‌ಗಳಲ್ಲಿ ಪೊಲೀಸರು ಇರುವುದನ್ನು ನೋಡಿ ಅವರ ಕಣ್ತಪ್ಪಿಸಿಕೊಂಡು ಸಂದಿ, ಗಲ್ಲಿಗಳಲ್ಲಿ ವಾಹನಗಳನ್ನು ನುಗ್ಗಿಸಿಕೊಂಡು ಮನೆ ಸೇರುವವರ ಸಂಖ್ಯೆ ಬಹಳಷ್ಟಿದೆ.
ಪೊಲೀಸರು ಎಷ್ಟೇ ಪ್ರಕರಣಗಳನ್ನು ದಾಖಲಿಸಿಕೊಂಡರೂ ತಿಳಿವಳಿಕೆ, ಜಾಗೃತಿ ಮೂಡಿಸಿದರೂ ಸಹ ಕುಡಿದು ವಾಹನ ಚಾಲನೆ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ.ಕೇಂದ್ರ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಗಂಭೀರ ಅಪರಾಧವಾಗಿದೆ. ಮದ್ಯದ ಮತ್ತಿನಲ್ಲಿ ಬೇಜವಾಬ್ದಾರಿಯಿಂದ ವಾಹನ ಚಾಲನೆ ಮಾಡಿ ಅಪಘಾತ ಎಸಗಿ ಸಾವು ಉಂಟಾದರೆ ಎಫ್‌ಐಆರ್ ದಾಖಲಾಗುತ್ತದೆ.
ಡ್ರಂಕ್ ಅಂಡ್ ಡ್ರೈವ್ ದಂಡವನ್ನು ಸ್ಥಳದಲ್ಲೇ ಪಾವತಿಸುವ ಅವಕಾಶ ಇಲ್ಲ. ಮದ್ಯಪಾನ ಮಾಡಿ ವಾಹನ ಚಲಾಯಿಸುವ ವ್ಯಕ್ತಿಯನ್ನು ಪೊಲೀಸರು ಪತ್ತೆಹಚ್ಚಿದ ನಂತರ ಅವರ ವಾಹನವನ್ನು ಜಪ್ತಿ ಮಾಡಿ ಅವರಿಗೆ ನೋಟೀಸ್ ನೀಡುತ್ತಾರೆ. ಅವರು ನ್ಯಾಯಾಲಯದಲ್ಲಿ ದಂಡ ಪಾವತಿಸಿ ನಂತರ ತಮ ವಾಹನವನ್ನು ಪೊಲೀಸರಿಂದ ಬಿಡಿಸಿಕೊಳ್ಳಬೇಕಾಗುತ್ತದೆ.
ಕುಡಿದು ವಾಹನ ಚಲಾಯಿಸಿ ಮೊದಲ ಬಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದರೆ 10,000ರೂ.ವರೆಗೆ ದಂಡ ಅಥವಾ ಆರು ತಿಂಗಳವರೆಗೆ ಶಿಕ್ಷೆ. ಎರಡನೇ ಬಾರಿ ಅಥವಾ ಪುನರಾವರ್ತನೆಯಾದರೆ 15,000ರೂ.ವರೆಗೆ ದಂಡ ಮತ್ತು ಎರಡು ವರ್ಷಗಳವರೆಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ.
ಇಂತಹ ವ್ಯಕ್ತಿಗಳ ಚಾಲನಾ ಪರವಾನಗಿ ರದ್ದುಮಾಡುವಂತೆ ಆರ್‌ಟಿಒ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಸಂಚಾರ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮದ್ಯಪಾನ ಮಾಡಿ ಅಪಘಾತ ಮಾಡಿದರೆ ಇನ್ಷೂರೆನ್ಸ್ ಕಂಪನಿಯವರು ಹಣ ನೀಡುವುದಿಲ್ಲ. ಪ್ರಕರಣ ದಾಖಲಾಗುವುದರಿಂದ ಪಾಸ್‌ಪೋರ್ಟ್ ಮತ್ತು ಉದ್ಯೋಗ ಪಡೆಯಲು ಸಹ ತೊಂದರೆಯಾಗುತ್ತದೆ.
ಮದ್ಯಪಾನ ಮಾಡುವುದು ನಿಮ ವೈಯಕ್ತಿಕ ನಿರ್ಧಾರವಾಗಿರಬಹುದು. ಆದರೆ, ರಸ್ತೆಗೆ ಇಳಿದು ಇತರರ ಜೀವದ ಜೊತೆ ಆಟವಾಡುವುದು ಅಪರಾಧ. ಆದ್ದರಿಂದ ಎಚ್ಚರಿಕೆಯಿಂದ ಇರಬೇಕು.
ಪಾರ್ಟಿಗೆ ಹೋಗುವಾಗ ನಿಮ ವಾಹನವನ್ನು ಮನೆ ಮತ್ತು ಕಚೇರಿಯಲ್ಲೇ ಬಿಟ್ಟು ಸಾರ್ವಜನಿಕ ಸಾರಿಗೆಯಲ್ಲಿ ಹೋಗಿ ಅಥವಾ ಓಲಾ, ಊಬರ್ ಮುಂತಾದ ಕ್ಯಾಬ್‌ಗಳನ್ನು ಬಳಸಿ. ನಿಮ ಸ್ನೇಹಿತರ ಗುಂಪಿನಲ್ಲಿ ಮದ್ಯ ಸೇವಿಸದ ವ್ಯಕ್ತಿಗೆ ಚಾಲನೆ ಮಾಡುವ ಜವಾಬ್ದಾರಿ ಕೊಡಿ. ಒಂದು ವೇಳೆ ಪಾರ್ಟಿ ತಡರಾತ್ರಿಯವರೆಗೂ ನಡೆದರೆ ಸಮೀಪದ ಸ್ನೇಹಿತರ ಮನೆಯಲ್ಲೇ ಉಳಿದುಕೊಳ್ಳಿ.
ಮದ್ಯದ ಅಮಲು ಕೆಲವೇ ಗಂಟೆಗಳಲ್ಲಿ ಇಳಿದುಹೋಗುತ್ತದೆ. ಆದರೆ, ಅದರಿಂದಾಗುವ ಅವಘಡಗಳು ನಿರಂತರವಾಗಿರುತ್ತವೆ.. ಎಚ್ಚರ..!
ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ನಿಮ ಕುಟುಂಬ ನಿಮಗಾಗಿ ಮನೆಯಲ್ಲಿ ಕಾಯುತ್ತಿರುತ್ತದೆ ಎಂಬುದನ್ನು ಮರೆಯಬೇಡಿ.ಒಬ್ಬ ವ್ಯಕ್ತಿ ಮದ್ಯಪಾನ ತ್ಯಜಿಸಿದರೆ ಒಂದು ಕುಟುಂಬ ಉಳಿಯುತ್ತದೆ. ಒಂದು ಕುಟುಂಬ ಉಳಿದರೆ ಸಮಾಜ ಬಲಿಷ್ಠವಾಗುತ್ತದೆ.
