ಬೆಂಗಳೂರು,ಮೇ 27- ಪ್ರೀತಿಸಿದ ಯುವತಿಗೆ ಬೇರೆ ಯುವಕನ ಜೊತೆ ಮದುವೆಯಾಗಿದ್ದರೂ ಆಗಾಗ್ಗೆ ಆಕೆ ಮನೆಗೆ ಹೋಗುತ್ತಿದ್ದ ಪೇಂಟರ್‌ಗೆ ಗಂಡನ ಮನೆಯವರು ಸೇರಿಕೊಂಡು ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಮನಗರದ ಬೀಡಿ ಕಾಲೋನಿ ನಿವಾಸಿ ಮೊಹಮದ್ ಖಾಸಿಂ (27) ಕೊಲೆಯಾದ ಯುವಕ.
ಖಾಸಿಂ ಪೇಂಟಿಂಗ್ ಮತ್ತು ಗುಜುರಿ ಕೆಲಸ ಮಾಡಿಕೊಂಡಿದ್ದನು. ತಾನು ಪ್ರೀತಿಸುತ್ತಿದ್ದ ಯುವತಿಗೆ ನಾಲ್ಕು ವರ್ಷದ ಹಿಂದೆ ಬೇರೆಯವರೊಂದಿಗೆ ವಿವಾಹವಾಗಿದ್ದು, ಶ್ಯಾಮಣ್ಣ ಗಾರ್ಡ್‌ನಲ್ಲಿ ವಾಸವಿದ್ದಾರೆ.
ಈತ ಆಗಾಗ್ಗೆ ಆಕೆಯ ಮನೆಗೆ ಹೋಗಿ ಬರುತ್ತಿದ್ದ. ಈ ವಿಷಯ ಆಕೆಯ ಗಂಡನ ಮನೆಯವರಿಗೆ ಗೊತ್ತಾಗಿದೆ. ಮೇ 25 ರಂದು ಸಂಜೆ 6 ಗಂಟೆ ಸುಮಾರಿನಲ್ಲಿ ಖಾಸಿಂ ಆಕೆಯ ಮನೆ ಬಳಿ ಹೋಗಿರುವ ವಿಷಯ ತಿಳಿದು ಗಂಡನ ಮನೆಯವರು ಸೇರಿಕೊಂಡು ಆತನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ.
ಸಾರ್ವಜನಿಕರು ಜಗಳ ಬಿಡಿಸಿ ರಾಜಿ ಪಂಚಾಯಿತಿ ಮಾಡಿ ಖಾಸಿಂನನ್ನು ಸ್ಥಳದಿಂದ ಕಳುಹಿಸಿದ್ದಾರೆ. ಹಲ್ಲೆಗೊಳಗಾದ ಆತ ವಾಪಸ್ ರಾಮನಗರಕ್ಕೆ ಹಿಂದಿರುಗಿದ್ದಾನೆ.
ಬೆಳಗಾಗುವಷ್ಟರಲ್ಲಿ ಹಲ್ಲೆಗೊಳಗಾಗಿದ್ದ ಆತನಿಗೆ ತೀವ್ರ ನೋವು ಕಾಣಿಸಿಕೊಂಡಿದೆ. ತಕ್ಷಣ ಖಾಸಿಂನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ತಿಳಿದು ಬ್ಯಾಟರಾಯನಪುರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ
ನಡೆಸಿ ಕೆಲವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
